ಪುತ್ತಿಗೆ ಶ್ರೀಗಳ ವಿಶ್ವ ಗೀತಾ ಪರ್ಯಾಯಕ್ಕೆ ಕ್ಷಣಗಣನೆ ಆರಂಭ
ಉಡುಪಿ: ಎರಡು ವರ್ಷಕ್ಕೊಮ್ಮೆ ಬರುವ ನಾಡಹಬ್ಬ ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡ ಕೃಷ್ಣನಗರಿಯಲ್ಲಿ ಎಲ್ಲೆಲ್ಲೂ ತಳಿರು ತೋರಣ, ಸ್ವಾಗತ ಗೋಪುರ, ಕಮಾನುಗಳು, ದಾರಿಯುದ್ದಕ್ಕೂ ಸ್ವಾಗತ ಕೋರುವ ಬ್ಯಾನರ್ಗಳು. ಕತ್ತಲಾವರಿಸುತ್ತಿದ್ದಂತೆ ವಿದ್ಯುದ್ದೀಪಾಲಂಕಾರದಿಂದ ಕಣ್ಣು ಕೋರೈಸುವ ಕೃಷ್ಣಮಠ, ರಥಬೀದಿ.
ಉಡುಪಿ ಪರ್ಯಾಯಕ್ಕೆ ಪರ್ಯಾಯವೇ ಸಾಟಿ… ಕೃಷ್ಣಮಠ ಅಂದರೆ ಅದು ಸಂಪ್ರದಾಯಗಳ ಕಾಶಿ ಕೃಷ್ಣನ ಪೂಜಾಧಿಕಾರ ಓರ್ವ ಮಠಾಧೀಶರಿಂದ ಇನ್ನೋರ್ವ ಮಠಾಧೀಶರಿಗೆ ಹಸ್ತಾಂತರ ಪ್ರಕ್ರಿಯೆಯೇ ಪರ್ಯಾಯ ಮಹೋತ್ಸವ. ಜನವರಿ 18 ರಂದ ಬೆಳಗಿನ ಜಾವ ಕೃಷ್ಣಾಪುರ ಮಠದ ಶ್ರೀಗಳಿಂದ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಮುಂದಿನ ಎರಡು ವರ್ಷದ ಅವಧಿಗೆ ಹಸ್ತಾಂತರಗೊಳ್ಳಲಿದೆ. ಇಲ್ಲಿ ಅಧಿಕಾರ ಹಸ್ತಾಂತರದ ಧಾರ್ಮಿಕ ವಿಧಿ ವಿಧಾನಗಳು ಮಾತ್ರ ಇರುವುದಿಲ್ಲ. ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಿಕ ವೈಭವಕ್ಕೂ ಪರ್ಯಾಯ ಮಹೋತ್ಸವ ವೇದಿಕೆಯಾಗುತ್ತದೆ.
ಎರಡು ವರ್ಷಕ್ಕೊಮ್ಮೆ ಜನವರಿಯಲ್ಲಿ ನಡೆಯುವ ಪರ್ಯಾಯ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಕೃಷ್ಣ ಭಕ್ತರು ಆಗಮಿಸುತ್ತಾರೆ. ಜನವರಿ 17 ರಾತ್ರಿಯಿಂದ ಪ್ರಾರಂಭಗೊಳ್ಳುವ ಪರ್ಯಾಯ ಮಹೋತ್ಸವ 18ರ ಸಂಜೆ ಪರ್ಯಾಯ ದರ್ಬಾರ್ ತನಕ ಮುಂದುವರೆಯಲಿದೆ. ಈ ಒಂದು ಅವಿಸ್ಮರಣೀಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕೃಷ್ಣನಗರಿ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ಜನವರಿ 17 ರ ಸಂಜೆ ಎರಡು ವರ್ಷದ ಪರ್ಯಾಯದಿಂದ ನಿರ್ಗಮಿಸುತ್ತಿರುವ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರಿಗೆ ಪೌರ ಸನ್ಮಾನ ಕಾರ್ಯಕ್ರಮದೊಂದಿಗೆ ಪರ್ಯಾಯ ಮಹೋತ್ಸವ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ. ರಾತ್ರಿ ಎರಡು ಗಂಟೆ ಸುಮಾರಿಗೆ ಪರ್ಯಾಯದ ಐತಿಹಾಸಿಕ ಮೆರವಣಿಗೆ ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಕೃಷ್ಣಮಠದಲ್ಲಿ ಸಮಾರೋಪಗೊಳ್ಳಲಿದೆ. ಬಳಿಕ ಪರ್ಯಾಯದ ಬಹುಮುಖ್ಯ ವಿಧಿವಿಧಾನಗಳು ಕೃಷ್ಣಮಠದಲ್ಲಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಇಡೀ ಕೃಷ್ಣನಗರಿ ಅಪೂರ್ವ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದು ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ಪರ್ಯಾಯದ ದಿನ ಉಡುಪಿ ನಿದ್ರಿಸುವುದಿಲ್ಲ ಎಂಬ ಮಾತಿದೆ. ಕಳೆದ ಕೆಲವು ದಿನಗಳಿಂದ ದೂರದೂರಿನ ಭಕ್ತರು ಉಡುಪಿಯತ್ತ ಧಾವಿಸುತ್ತಿದ್ದು ಪರ್ಯಾಯವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಎರಡು ವರ್ಷದ ಹಿಂದೆ ಸರ್ವಜ್ಞ ಪೀಠಾರೋಹಣ ಮಾಡಿದ್ದ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪರ್ಯಾಯ ಅವಧಿ ಜನವರಿ 17 ರಂದು ಅಂತ್ಯಗೊಳ್ಳಲಿದ್ದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪರ್ಯಾಯ ಪೀಠಾಧೀಶರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜನವರಿ ಹದಿನೆಂಟರಂದು ಮುಂಜಾನೆ 1.30 ರ ಸುಮಾರಿಗೆ ಕಾಪು ದಂಡತೀರ್ಥದಲ್ಲಿ ಮಿಂದು ಬರಲಿರುವ ಸ್ವಾಮೀಜಿಗಳು ಬಳಿಕ 2.15 ರ ಸುಮಾರಿಗೆ ಪರ್ಯಾಯದ ಐತಿಹಾಸಿಕ ಮೆರವಣಿಗೆಯಲ್ಲಿ ಹೊರಟು ಮುಂಜಾನೆ 4.30 ರ ಹೊತ್ತಿಗೆ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ನಗರದ ಜೋಡುಕಟ್ಟೆಯಿಂದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ಸಾಗಿ ಕೃಷ್ಣಮಠದಲ್ಲಿ ಸಮಾವೇಶಗೊಳ್ಳಲಿದೆ. ಬೆಳಗಿನವರೆಗೆ ನಡೆಯಲಿರುವ ಈ ಮೆರವಣಿಗೆ ನೋಡಲು ಉಡುಪಿ ಜನತೆ ಕಾತರರಾಗಿದ್ದಾರೆ.
ಬಳಿಕ ಪುತ್ತಿಗೆ ಸ್ವಾಮೀಜಿಗಳ ಪೀಠಾರೋಹಣದ ವಿವಿಧ ವಿಧಿ-ವಿಧಾನಗಳು ಸಂಪನ್ನಗೊಂಡ ಬಳಿಕ ಸರ್ವಜ್ಞಪೀಠಾರೋಹಣ ನಡೆಯಲಿದೆ. ಪ್ರತಿ ಪರ್ಯಾಯ ಸಂದರ್ಭ ಮುಂಜಾನೆ ಹೊತ್ತಿಗೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ನಡೆಯುವುದು ವಾಡಿಕೆಯಾಗಿದ್ದು ಅದರಂತೆ ಈ ಬಾರಿಯೂ ಕೂಡ ನಡೆಯಲಿದ್ದು ರಾಜ್ಯ ಉಪಮುಖ್ಯಮಂತ್ರಿ ಸಹಿತ ಹಲವು ಮಂತ್ರಿಗಳು, ರಾಜಕೀಯ ಗಣ್ಯಬರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು ಹೀಗಾಗಿ ಪರ್ಯಾಯಕ್ಕೆ ಸಕಲ ಸಿದ್ಧತೆಗಳೂ ಭರದಿಂದ ನಡೆದಿವೆ. ಪುತ್ತಿಗೆ ಶ್ರೀಪಾದರು ಕೃಷ್ಣ ಸಂದೇಶವನ್ನು ವಿದೇಶದಲ್ಲಿ ಪ್ರಚುರಪಡಿಸಿದ್ದು ಇದರಿಂದಾಗಿ ವಿದೇಶಿ ಗಣ್ಯ ರೂ ಸಹ ಪರ್ಯಾಯದಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ಉಡುಪಿ ನಗರವನ್ನು ತಳಿರು ತೋರಣ, ಸ್ವಾಗತ ಕಮಾನು, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು ಕೃಷ್ಣಮಠ, ರಥಬೀದಿ, ಅಷ್ಟಮಠಗಳು, ನಗರದ ಪ್ರಮುಖ ರಸ್ತೆಗಳು, ಕಟ್ಟಡಗಳು ಹೀಗೆ-ಇಡೀ ಉಡುಪಿಯೇ ಸಿಂಗಾರಗೊಂಡು ಭಕ್ತರನ್ನು ಸ್ವಾಗತಿಸುತ್ತಿದೆ. ಪರ್ಯಾಯ ಸಂದರ್ಭ ನಗರದ ವಿವಿಧೆಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ನಗರದ ಪ್ರಮುಖ ಕಡೆಗಳಲ್ಲಿ ಈಗಾಗಲೇ ವೇದಿಕೆಗಳು ಸಿದ್ಧಗೊಂಡಿದ್ದು, ರಾತ್ರಿ ರಸಮಂಜರಿ -ನೃತ್ಯ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.