ಪುತ್ತೂರು: ರಾಷ್ಟ್ರೀಯ ಹೆದ್ದಾರಿ 48ರ ಗುಂಡ್ಯ ಅಡ್ಡಹೊಳೆ ಸಮೀಪ ಸೋಮವಾರ ಅಪರಾಹ್ನ ಪೆಟ್ರೋಲ್ ಟ್ಯಾಂಕರ್ ಮತ್ತು ಟೂರಿಸ್ಟ್ ಜೀಪೊಂದರ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಸಿರಿಬಾಗಿಲು ಪೆರ್ಜೆ ನಿವಾಸಿ ದಿ.ಗುಡ್ಡಪ್ಪ ಗೌಡರ ಪತ್ನಿ ರುಕ್ಮಿಣಿ(45) ಮತ್ತು ಅವರ ಸಹೋದರ ವಿಶ್ವನಾಥ ಗೌಡರ ಪತ್ನಿ ಭವಾನಿ(36) ಮೃತಪಟ್ಟವರಾಗಿದ್ದಾರೆ. ಕೆಲವು ತಿಂಗಳುಗಳ ಬಳಿಕ ಶಿರಾಡಿ ಘಾಟ್ ರಸ್ತೆ ಇಂದು ವಾಹನ ಸಂಚಾರಕ್ಕೆ ಮುಕ್ತಗೊಂಡಿದ್ದು ಆರಂಭದ ದಿನವೇ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 48ರ ಗುಂಡ್ಯ ಅಡ್ಡಹೊಳೆ ಸಮೀಪ ಕಡಿದಾದ ಕೊಡ್ಯಕಲ್ಲು ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಟ್ಯಾಂಕರ್ ಹಾಸನದಿಂದ ಮಂಗಳೂರಿಗೆ ಆಗಮಿಸುತ್ತಿದ್ದು, ಎದುರಿನಿಂದ ಬರುತ್ತಿದ್ದ ಜೀಪ್‌ಗೆ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಜೀಪ್ ಸಂಪೂರ್ಣ ನುಜ್ಜುಗುಜ್ಜುಗೊಂಡಿದ್ದು, ರುಕ್ಮಿಣಿ ಮತ್ತು ಭವಾನಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆಯೇ ಕೊನೆಯುಸಿರೆಳೆದರು.
ಜೀಪ್‌ನಲ್ಲಿ ಒಟ್ಟು 6 ಮಂದಿ ಇದ್ದರು. ಈ ಪೈಕಿ ಜೀಪ್ ಚಾಲಕ ನೆಲ್ಯಾಡಿ ಹೊಸಮಜಲು ನಿವಾಸಿ ಚಂದ್ರ ಶೇಖರ, ಮೃತಪಟ್ಟ ಭವಾನಿಯ ಪತಿ ವಿಶ್ವನಾಥ, ಅಡ್ಡಹೊಳೆಯ ಕಾನ್ವೆಂಟ್‌ವೊಂದರ ಸಿಸ್ಟರ್ ಲಿಸ್ಸಿ, ಜೆಸ್ಸಿ ಅಡ್ಡಹೊಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಲಾರಿ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಕೌಕ್ರಾಡಿ ತಾಪಂ ಸದಸ್ಯ ಭಾಸ್ಕರ ಎಸ್. ಗೌಡ, ಯತೀಶ್ ಗುಂಡ್ಯ, ಪದ್ಮನಾಭ, ದಾಮೋದರ, ಸುಭಾಷ್ ಮತ್ತಿತರ ಯುವಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.