ಪುತ್ತೂರು ಶೂಟೌಟ್ ಪ್ರಕರಣ : ಪ್ರಮುಖ ಆರೋಪಿ ಬಂಧನ
ಪುತ್ತೂರು: ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ಅಬ್ದುಲ್ ಖಾದರ್ ಎಂಬವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಬ್ಲೇಡ್ ಸಾದಿಕ್ ಎಂಬಾತನನ್ನು ಪುತ್ತೂರು ಡಿವೈಎಸ್‍ಪಿ ನೇತೃತ್ವದ ಪೊಲೀಸ್ ತಂಡ ಮಡಿಕೇರಿಯ ಗಾಳಿಬೀಡು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಇನ್ನೋರ್ವ ಆರೋಪಿ ಜೋಗಿ ಹನೀಫ್ ಎಂಬಾತನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿರುವ ಪೊಲೀಸರು ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ.26ರಂದು ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ನಿವಾಸಿ ಅಬ್ದುಲ್ ಖಾದರ್ ಅವರ ಮನೆಯ ಸಮೀಪಕ್ಕೆ ಕಾರಿನಲ್ಲಿ ಬಂದ ಬ್ಲೇಡ್ ಸಾದಿಕ್ ಮತ್ತು ಆತನ ತಂಡ ಅಬ್ದುಲ್ ಖಾದರ್ ಅವರ ಮೇಲೆ ಗುಂಡು ಹಾರಾಟ ನಡೆಸಿ ಪರಾರಿಯಾಗಿದ್ದರು. ಗುಂಡೇಟಿನಿಂದ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಅಬ್ದುಲ್ ಖಾದರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಎದೆಗೆ ಬಿದ್ದ ಗುಂಡನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದ್ದು, ತನಿಖೆಗಾಗಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಈ ಪೈಕಿ ಬ್ಲೇಡ್ ಸಾದಿಕ್ ಮತ್ತು ಜೋಗಿ ಹನೀಫ್ ಅವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.