ಪುತ್ತೂರು: ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಾಗ ಭಾಷೆ ಉಳಿಯುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಭಾರತದ ಆತ್ಮವಾಗಿರುವ ಸಂಸ್ಕೃತಿಯ ಹಿಂದೆ ಭಾಷೆ ಅಡಗಿದೆ. ನಾವು ಜಾತಿಯ ವಿಷಯದಲ್ಲಿ ಕಿತ್ತಾಡುತ್ತೇವೆ ಆದರೆ ಭಾಷೆಯ ವಿಷಯದಲ್ಲಿ ಕಿತ್ತಾಡುವುದಿಲ್ಲ. ಆದ್ದರಿಂದ ಭಾಷೆ ಉಳಿಯಬೇಕಾದರೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಎಸ್‍ಜೆಎಎಮ್ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ‘ಕೊಂಕಣಿ ಮಕ್ಕಳ ದಿನಾಚರಣೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದರು ಮಾತನಾಡಿ, ಭಾರತ ದೇಶವು ವೈವಿಧ್ಯಮಯ ಸಂಸ್ಕøತಿಯನ್ನು ಹೊಂದಿದ್ದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದೆ. ಭಾಷೆಯನ್ನು ಕೊಂಕಣಿ ಸಾಹಿತ್ಯ ಅಕಾಡೆಮಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರಿಂದ ಬೆಳೆಸಲು ಸಾಧ್ಯವಿಲ್ಲ, ಬದಲಾಗಿ ಪ್ರತಿಯೊಬ್ಬರ ಮನೆಯಲ್ಲಿ, ಹೃದಯದಲ್ಲಿ ಭಾಷೆಯು ಹಾಸು ಹೊಕ್ಕಾಗಿರಬೇಕು ಎಂದರು. ತುಳು ಭಾಷೆಯಾಗಲೀ, ಕೊಂಕಣಿ ಭಾಷೆಯಾಗಲೀ ಅದರ ಮಹತ್ವ ಕಡಿಮೆಯಾಗಲು ಜನರೇ ಕಾರಣವಾಗಿದ್ದು ಇಂದು ಕೊಂಕಣಿ ಭಾಷೆ ಉಳಿಸಲು ಅಕಾಡೆಮಿಯವರು ಬಹಳಷ್ಟು ಸಾಧನೆ ಮಾಡುತ್ತಿದ್ದಾರೆ. ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅವರು ಪುತ್ತೂರು ಸಂತ ಫಿಲೊಮಿನಾ ಸ್ನಾತಕೋತ್ತರ ಕಾಲೇಜಿನ ಕೊಂಕಣಿ ಕ್ಲಬ್ ಹಾಗೂ ಅಕಾಡೆಮಿಯು ಹೊರತಂದ 2016 ನೇ ವರ್ಷದ ಕೊಂಕಣಿ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು.
ಪ್ರಸ್ತಾವನೆಗೈದ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಅವರು `ಕೊಂಕಣಿ ಸಾಹಿತ್ಯ-ಕೊಂಕಣಿ ಶಿಕ್ಷಣ-ಕೊಂಕಣಿ ಸಂಸ್ಕೃತಿ’ ಎಂಬ ಉದ್ದೇಶವಿಟ್ಟು ಪ್ರಸ್ತುತ ಅಕಾಡೆಮಿ ಸಮಿತಿ ಆ ಉದ್ದೇಶ ಸಾಧನೆಗಾಗಿ ದುಡಿಯುತ್ತಿದೆ.
ಅಕಾಡೆಮಿಯ 100ನೇ ಪುಸ್ತಕ ವಂ ಮೆಲ್ವಿನ್ ಪಿಂಟೊ, ನೀರುಡೆ ಬರೆದ `ಪಯ್ಣ್’ ಕಥಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಹಾಯಕ ಆಯುಕ್ತ ಸತೀಶ್ ಕುಮಾರ್ ಮಕ್ಕಳಲ್ಲಿರುವ ಪರಿಶುದ್ಧತೆ ಮತ್ತು ಪರಿಪೂರ್ಣತೆ ಯಾರಲ್ಲಿಯೂ ಇರುವುದಿಲ್ಲ, ಯಾವುದೇ ಕೆಲಸವನ್ನು ಕೂಡಾ ಮಕ್ಕಳು ತೃಪ್ತಿಯಿಂದ ಮಾಡುತ್ತಾರೆ ಎಂದರು.
ಇನ್ನೊಂದು ಪುಸ್ತಕ ಫಿಲೊಮಿನಾ ಸಾನ್‍ಫ್ರಾನ್ಸಿಸ್ಕೊ ಬರೆದ `ಗುಲ್‍ಮೊಹರ್’ ಕವಿತಾ ಸಂಕಲನವನ್ನು ಸಂತ ಫಿಲೊಮಿನಾ ಕಾಲೇಜು ಪಿಯುಸಿ ಪ್ರಾಂಶುಪಾಲರಾದ ವಂ. ವಿಜಯ್ ಲೋಬೊ ಲೊಕಾರ್ಪಣೆಗೊಳಿಸಿದರು.
ಸಂಸದರು ಪ್ರತಿಭಾ ಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಶಾಲೆಗಳಿಗೆ ಗೌರವಾರ್ಪಣೆ ಮಾಡಿದರು. ಇಡೀ ದಿನ ನಡೆದ ಪ್ರತಿಭಾ ಪ್ರದರ್ಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 33 ಶಾಲೆಗಳಿಂದ 277 ಮಕ್ಕಳು ಭಾಗವಹಿಸಿದ್ದರು. ಪ್ರಾಥಮಿಕ ವಿಭಾಗದಲ್ಲಿ 12, ಹಿರಿಯ ಪ್ರಾಥಮಿಕ ವಿಭಾಗದಲ್ಲಿ 13, ಪ್ರೌಢಶಾಲಾ ವಿಭಾಗದಲ್ಲಿ 7 ತಂಡಗಳು ಭಾಗವಹಿಸಿತ್ತು. ಪ್ರಾಥಮಿಕ ವಿಭಾಗದಲ್ಲಿ ಅನುದಾನಿತ ಫ್ರಾನ್ಸಿಸ್ ಸಾವೆರ್ ಶಾಲೆ ಫೆರಾರ್ ಪ್ರಥಮ, ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ, ನಿತ್ಯಾಧರ್ ಆಂಗ್ಲ ಮಾಧ್ಯಮ ಶಾಲೆ, ಪೆರ್ಮನ್ನೂರ್ ತೃತೀಯ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಿತ್ಯಾಧರ್ ಹಿರಿಯ ಪ್ರಾಥಮಿಕ ಶಾಲೆ ಮಂಗಳೂರು ಪ್ರಥಮ, ಮಾಯ್‍ದೇ ದೇವುಸ್ ಹಿ.ಪ್ರಾ ಶಾಲೆ ದ್ವಿತೀಯ, ದರ್ಬೆ ಲಿಟ್ಲ್ ಫ್ಲವರ್ ಶಾಲೆ ತೃತೀಯ, ಪ್ರೌಢಶಾಲಾ ವಿಭಾಗದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಸೇಕ್ರೆಡ್ ಹಾರ್ಟ್ ಶಾಲೆ ಕುಲ್ಶೇಕರ ದ್ವಿತೀಯ, ವಿಕ್ಟರ್ಸ್ ಬಾಲಿಕಾ ಪ್ರೌಢಶಾಲೆ ತೃತೀಯ ಸ್ಥಾನ ಪಡೆದವು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪತ್ರಕರ್ತ ಸ್ಟೀವನ್ ರೇಗೋ, ಮಕ್ಕಳ ಸಾಹಿತಿ ಉಲ್ಲಾಸ್ ಪೈ, ದೈವಜ್ಞ ಬ್ರಾಹ್ಮಣ ಸಮಾಜದ ಮುಖಂಡ ಶಿವಾನಂದ ಶೇಟ್, ಧಾರ್ಮಿಕ ಚಿಂತಕ ಶಿವಶಂಕರ ಕಾಮತ್, ರಾಜಪೂತ್ ಸಾರಸ್ವತ್ ಸಮಾಜದ ಮುಖಂಡ ಸುನೀಲ್ ಬೋರ್ಕರ್ ಉಪಸ್ಥಿತರಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಸ್ವಾಗತಿಸಿ, ರಿಜಿಸ್ಟ್ರಾರ್ ಡಾ. ಬಿ. ದೇವದಾಸ್ ಪೈ ವಂದಿಸಿದರು.
ಜಿಎಸ್‍ಬಿ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು. ಸಿಲ್ವಿಯಾ ಡಿಸೋಜ ಮತ್ತು ಪ್ರಕಾಶ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂತೋಷ್ ಮೊರಾಸ್ ಮತ್ತು ತಂಡ, ಐಸಿವೈಎಮ್ ತಂಡ ಪುತ್ತೂರ್, ಜಿಎಸ್‍ಬಿ ಮಹಿಳಾ ಮಂಡಳಿ ಹಾಗೂ ಶಿವಾನಂದ ಶೆಣೈ ಮತ್ತು ತಂಡದಿಂದ ವಿವಿಧ ಕೊಂಕಣಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಉದ್ಘಾಟನಾ ಸಮಾರಂಭ: ಈ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್‍ರವರು ಕೊಂಕಣಿಯ ಅನನ್ಯ ಸಂಗೀತ ಪರಿಕರ ಗುಮಟೆಯನ್ನು ಬಾರಿಸುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ವಂ. ರಿತೇಶ್ ರೊಡ್ರಿಗಸ್, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಹಾಗೂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನವೀನ್ ಸ್ಟೀಫನ್ ವೇಗಸ್, ಶಿಕ್ಷಣಾಧಿಕಾರಿ ಲೋಕಾನಂದ ಉಪಸ್ಥಿತರಿದ್ದರು.
ಬೆಳಗಿನ ಕಾರ್ಯಕ್ರಮವನ್ನು ಚಿದಾನಂದ ಕಾಸರಗೋಡು, ಹಾಗೂ ಸುಲತಾ ನಾಯಕ್ ನಿರ್ವಹಿಸಿದರು.