ಪುರ’ಸಭೆ’ಯಲ್ಲಿ ‘ಕೂರಿಸಿ ಮಾತಾಡಿಸುವ’ ಮಾತಿಗೆ ಕೋಲಾಹಲ!

Spread the love

ಪುರ’ಸಭೆ’ಯಲ್ಲಿ ‘ಕೂರಿಸಿ ಮಾತಾಡಿಸುವ’ ಮಾತಿಗೆ ಕೋಲಾಹಲ!

  • ಅಧ್ಯಕ್ಷರ ಮಾತಿಗೆ ವಿರೋಧ ಪಕ್ಷದ ಸದ್ಯರಿಂದ ತೀವ್ರ ವಿರೋಧ. ಕೂರಿಸಿ ಮಾತಾಡಿಸುವುದೆಂದರೆ ಡೀಲ್‌ ಮಾಡಿಕೊಳ್ಳುವುದಾ?

 
ಕುಂದಾಪುರ: ಪುರಸಭಾ ವ್ಯಾಪ್ತಿಯ ಕೋಡಿ ಭಾಗದಲ್ಲಿ ಖಾಸಗಿ ರೆಸಾರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪುರಸಭಾ ಅಧ್ಯಕ್ಷರ ‘ಕೂರಿಸಿ ಮಾತಾಡಿಸುವ’ ಮಾತಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸಭೆ ಕೋಲಾಹಲಕ್ಕೆ ಕಾರಣವಾಯಿತು.

ಬುಧವಾರ ಮಧ್ಯಾಹ್ನ ಇಲ್ಲಿನ ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಅಶ್ಪಕ್ ಕೋಡಿ‌ ಮಾತನಾಡಿ, ಕೋಡಿ ಭಾಗದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ‌ ರೆಸಾರ್ಟ್ ನಿರ್ಮಾಣಕ್ಕೆ ಪರವಾನಿಗೆ ಕೊಡಲಾಗಿದೆ. ಹಿಂದೆ ಮಾಹಿತಿ ಹಕ್ಕಿನಡಿಯಲ್ಲಿ‌ ದಾಖಲೆಗಳನ್ನು ತೆಗೆದಾಗ ಸಿ.ಆರ್.ಝೆಡ್ ಹಾಗೂ ನಗರ ಪ್ರಾಧಿಕಾರದ ಎನ್.ಒ.ಸಿ ಪಡೆಯದೇ ನಿರ್ಮಾಣ ಕಾಮಗಾರಿಗೆ ಪರವಾನಿಗೆ ನೀಡಿರುವುದು ಗಮನಕ್ಕೆ ಬಂದಿದೆ. ಆಗ ಇಲ್ಲದ ಎನ್.ಒ.ಸಿ ಈಗ ಬಂದಿರುವುದು ಗಮನಿಸಿದಾಗ ಇದರಲ್ಲಿ ಭ್ರಷ್ಟಾಚಾರ ನಡೆದಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ಅಶ್ಪಕ್‌ ಕೋಡಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷ‌ ಮೋಹನ್ ದಾಸ್ ಶೆಣೈ, ಭ್ರಷ್ಟಾಚಾರ ನಡೆದಿದೆ‌ ಎಂದಾದರೆ ದಾಖಲೆಗಳ‌ ಮೂಲಕ ಸಾಬೀತುಪಡಿಸಿ. ಅದನ್ನು ಬಿಟ್ಟು ಕೇವಲ‌ ಮಾತಿಗೆ ಹೇಳಿದರೆ ಕೋಡಿ ಭಾಗದಲ್ಲಿ ಎಷ್ಟು ಕಟ್ಟಡಗಳು ಅಕ್ರಮವಾಗಿ ಆಗಿದೆ ಎನ್ನುವುದರ ಕುರಿತು ನನಗೂ ಮಾಹಿತಿ ಇದೆ. ರೆಸಾರ್ಟ್ ನಿರ್ಮಾಣಕ್ಕೆ‌ ನಿಮ್ಮ‌ ಆಕ್ಷೇಪಗಳಿದ್ದರೆ ಹೇಳಿ ಕಟ್ಟಡದ‌ವರನ್ನು ಹಾಗೂ ನಿಮ್ಮನ್ನು ಕೂರಿಸಿ ಮಾತಾಡಿಸುವ ಎಂದರು.

ಅಧ್ಯಕ್ಷರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಶ್ರೀಧರ ಶೇರುಗಾರ್, ಕೂರಿಸಿ ಮಾತಾಡಿಸುವ ಪದದ ಅರ್ಥವೇನು? ಡೀಲ್‌ ಮಾಡುವುದಾ? ಒಳ ಒಪ್ಪಂದ ಮಾಡಿಕೊಳ್ಳುವ ದುಸ್ಥಿತಿ ಸದಸ್ಯರಿಗೆ ಬಂದಿಲ್ಲ. ನಿಮ್ಮ‌ ಮಾತಿನ‌ ಅರ್ಥವೇ ಹಾಗಿದೆ. ದಯವಿಟ್ಟು ಈ ರೀತಿಯ ಮಾತುಗಳು ಶೋಭೆ ತರೋದಿಲ್ಲ ಎಂದರು. ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಆನಂದ.ಜೆ, ಪರವಾನಿಗೆ ಕೊಡುತ್ತೇನೆ ಎಂದಾಗ ವಿರೋಧ ವ್ಯಕ್ತಪಡಿಸಿದ ವಿರೋಧ‌ ಪಕ್ಷದ ಸದಸ್ಯರಾದ ಶ್ರೀಧರ ಶೇರುಗಾರ್, ಕೆ.ಜಿ ನಿತ್ಯಾನಂದ ಹಾಗೂ ಅಶ್ಪಕ್ ಕೋಡಿ ಸದಸ್ಯರ ಆಕ್ಷೇಪಗಳಿಗೆ ಬೆಲೆ ಇಲ್ಲವಾದರೆ ಸಭೆಗೆ ಬಂದು ಏನು ಪ್ರಯೋಜನಾ? ನೀವು‌ ಅಧಿಕಾರಿಗಳಿರಬಹುದು. ಅಧಿಕಾರಿ‌ ಎಂದ ಮಾತ್ರಕ್ಕೆ ಸಭೆಯಲ್ಲಿ‌ ಬಾಯಿಗೆ ಬಂದದ್ದು ಮಾತನಾಡುವುದಲ್ಲ ಎಂದರು.‌ ಇದೇ ವಿಷಯವಾಗಿ ಕೆಲಹೊತ್ತು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ವಾಕ್ಸಮರ ನಡೆಯಿತು. ಬಳಿಕ ಸದಸ್ಯ ಗಿರೀಶ್ ಜಿ.ಕೆ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸದಸ್ಯ ಗಿರೀಶ್ ಜಿ.ಕೆ ವಿಷಯ ಪ್ರಸ್ತಾಪಿಸಿ, ಕಳೆದ ಕೆಲ ವರ್ಷಗಳಿಂದ ನೆಹರೂ ಮೈದಾನವನ್ನು ಕಂದಾಯ ಇಲಾಖೆಯಿಂದ ಸ್ಥಳೀಯಾಡಳಿತ ಪುರಸಭೆಗೆ ಹಸ್ತಾಂತರಿಸಬೇಕು ಎನ್ನುವ ನಿರ್ಣಯಕ್ಕೆ ಬೆಲೆ ಇಲ್ಲದಂತಾಗಿದೆ. ನೆಹರೂ ಮೈದಾನವನ್ನು ಪುರಸಭೆಯ ಸುಪರ್ದಿಗೆ ಕೊಡುತ್ತಾರೋ ಇಲ್ಲವೋ ಎನ್ನುವುದನ್ನು ಕಂದಾಯ ಇಲಾಖೆ ಸ್ಪಷ್ಟಪಡಿಸಬೇಕು. ಚುನಾಯಿತ‌ ಸ್ಥಳೀಯಾಡಳಿತ ಪ್ರತಿನಿಧಿಗಳ ತೀರ್ಮಾನಗಳಿಗೆ ಬೆಲೆ ಇಲ್ಲವಾದರೆ ಸಾಮಾನ್ಯ ಜನರ ಬೇಡಿಕೆಗೆ ಬೆಲೆ ಸಿಗುತ್ತದಾ ಎನ್ನುವುದು ಪ್ರಶ್ನೆ. 1985ರಲ್ಲಿ ಸರ್ಕಾರ ಈ ಬಗ್ಗೆ ಗಜೆಟ್ ಹೊರಡಿಸಿದ್ದು, ನೆಹರೂ‌ ಮೈದಾನವನ್ನು ದುರ್ಬಳಕೆ‌ ಮಾಡಿಕೊಳ್ಳಬಾರದು‌. ಹಾಗೂ ಮೈದಾನದ ಸಂಪೂರ್ಣ ಹಕ್ಕು ಸ್ಥಳೀಯಾಡತದ್ದಾಗಿದೆ‌ ಎಂದು ಉಲ್ಲೇಖಿಸಿದ್ದರೂ ಕೂಡ ನಿಯಮಗಳನ್ನು ಗಾಳಿಗೆ ತೂರಿ ದುರ್ಬಳಕೆ‌ ಮಾಡಲಾಗುತ್ತಿದೆ. ಹೊಸ-ಹೊಸ‌ ಮಳಿಗೆಗಳಿಗೆ, ಕೆಲವು ಇಲಾಖೆಗಳ ಕಟ್ಟಡಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಅದು ಈಗ ಆಟದ ಮೈದಾನವಾಗಿ ಉಳಿದಿಲ್ಲ. ಕಳೆದ 15 ವರ್ಷಗಳಿಂದ ಪುರಸಭೆಗೆ ಹಸ್ತಾಂತರಿಸುವ ಕೂಗಿಗೆ ಇನ್ನೂ ಕಂದಾಯ ಇಲಾಖೆಯಿಂದ‌ ಸ್ಪಂದನೆ ಸಿಕ್ಕಿಲ್ಲ. ಇನ್ನೂ ಕೆಲವೇ ದಿನದೊಳಗೆ ಪುರಸಭೆಗೆ ಹಸ್ತಾಂತರ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಉಪ ತಹಸೀಲ್ದಾರ್ ಪ್ರಕಾಶ್ ಪೂಜಾರಿ ಪ್ರತಿಕ್ರಿಯಿಸಿ, ಈ ಕುರಿತು ಹದಿನೈದು ದಿನಗಳೊಳಗೆ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗುವುದು ಎಂದರು.

ಕಾಂಡ್ಲಾವನ ತೆರವಿಗೆ ಆಗ್ರಹ: ಕೋಡಿ, ಮದ್ದುಗುಡ್ಡೆ, ಚರ್ಚ್ ರಸ್ತೆಯಲ್ಲಿ ಕೃಷಿಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಕಾಂಡ್ಲಾವನದಿಂದಾಗಿ ನೀರಿನ ಹರಿವಿಗೆ ತೊಡಕ್ಕುಂಟಾಗಿ ಈ ಸಮಸ್ಯೆ ತಲೆದೋರಿದೆ. ಕಾಂಡ್ಲಾವನ‌ ತೆರವುಗೊಳಿಸಿ, ಹೂಳೆತ್ತಲು ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ರಾಘವೇಂದ್ರ ಖಾರ್ವಿ‌ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ವಲಯಾರಣ್ಯಾಧಿಕಾರಿ ವಿನಯ್, ಸುನಾಮಿಯಂತಹ ಸಂದರ್ಭಗಳಲ್ಲಿ‌ ದೊಡ್ಡ ಅಲೆಗಳನ್ನು ತಡೆಯುವ ಸಲುವಾಗಿ ಮಣ್ಣಿನ ಸವಕಳಿ ಉಂಟಾಗದಂತೆ, ಜಲಚರ ಜೀವಿಗಳಿಗೆ, ಪಕ್ಷಿಗಳಿಗೆ ಅನುಕೂಲವಾಗುವಂತೆ ಕಾಂಡ್ಲಾ ಗಿಡಗಳನ್ನು ಬೆಳೆಸಲಾಗಿದೆ.‌ ಇದರಿಂದ ಯಾವುದೇ ತೊಂದರೆಗಳಿಲ್ಲ ಎಂದರು. ಸದಸ್ಯೆ ಶ್ವೇತಾ ಸಂತೋಷ್‌ ಮಾತನಾಡಿ, ತಾತ್ಕಾಲಿಕ ದಂಡೆ ನಿರ್ಮಿಸಲು ಕೃಷಿಭೂಮಿಯಿಂದ ಮಣ್ಣೆತ್ತಲು ಸಾಧ್ಯವಿಲ್ಲ. ಹೀಗಾಗಿ ನದಿಯಿಂದಲೇ ಹೂಳೆತ್ತಿ ದಂಡೆ ನಿರ್ಮಿಸಬೇಕು. ನದಿಯ‌ ದಡದಲ್ಲೇ ಕಾಂಡ್ಲಾ ಮರ ಬೆಳೆಸಿದ್ದರಿಂದ ಹೂಳೆತ್ತಿ ಮೇಲೆ ಹಾಕಲು‌ ಸಾಧ್ಯವಿಲ್ಲ ಎಂದರು.

ಸಭೆಯಲ್ಲಿ ರಿಕ್ಷಾ ನಿಲ್ದಾಣ, ಸಂಗಂ ಪ್ರದೇಶದಲ್ಲಿನ ಹಿಂದೂ ರುಧ್ರಭೂಮಿ, ಅಪಾಯಕಾರಿ‌ ಮರ ತೆರವು, ಅಂಬೇಡ್ಕರ್ ಪುತ್ಥಳಿಯ‌ ಕುರಿತಂತೆ ಚರ್ಚೆ ನಡೆಯಿತು.

ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ‌ ಸಮಿತಿ ಅಧ್ಯಕ್ಷ ಪ್ರಭಾಕರ್.ವಿ, ಮುಖ್ಯಾಧಿಕಾರಿ ಆನಂದ‌.ಜೆ ಇದ್ದರು.


Spread the love
Subscribe
Notify of

0 Comments
Inline Feedbacks
View all comments