Home Mangalorean News Kannada News ಪೂರ್ವಸೂಚನೆ ಇಲ್ಲದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ – ಸಾಸ್ತಾನದಲ್ಲಿ ಪ್ರತಿಭಟಿಸಿದ ನಾಗರಿಕರು

ಪೂರ್ವಸೂಚನೆ ಇಲ್ಲದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ – ಸಾಸ್ತಾನದಲ್ಲಿ ಪ್ರತಿಭಟಿಸಿದ ನಾಗರಿಕರು

Spread the love

ಪೂರ್ವಸೂಚನೆ ಇಲ್ಲದೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ – ಸಾಸ್ತಾನದಲ್ಲಿ ಪ್ರತಿಭಟಿಸಿದ ನಾಗರಿಕರು

ಉಡುಪಿ: ಯಾವುದೇ ಪೂರ್ವಸೂಚನೆ ಇಲ್ಲದೆ ಏಕಾಏಕಿಯಾಗಿ ಉಡುಪಿ ಜಿಲ್ಲೆಯ ನೋಂದಣಿ ಹೊಂದಿದ ವಾಹನಗಳಿಂದ ಪೊಲೀಸ್ ಭದ್ರತೆಯಲ್ಲಿ ಟೋಲ್ ಸಂಗ್ರಹಿಸಲು ಹೊರಟ ನವಯುಗ ಕಂಪೆನಿಯ ಧೋರಣೆಯನ್ನು ವಿರೋಧಿಸಿ ಸಾಸ್ತಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ವತಿಯಿಂದ ಟೋಲ್ ಪ್ಲಾಜಾದಲ್ಲಿ ಪ್ರತಿಭಟನೆ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಟೋಲ್ ಸಂಗ್ರಹವನ್ನು ವಿರೋಧಿಸಿ ನವಯುಗ ಕಂಪೆನಿಯ ವಿರುದ್ದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಅವರು ನವಯುಗ ಕಂಪೆನಿಯವರು ಯಾವುದೇ ಪೂರ್ವಸೂಚನೆ ಇಲ್ಲದೆ ಟೋಲ್ ಸಂಗ್ರಹ ಮಾಡಲು ಹೊರಟಿರುವುದು ನಮ್ಮ ಗಮನಕ್ಕೆ ಬಂದಿದ್ದು ಇದನ್ನು ವಿರೋಧಿಸಿ ಇಂದು ಹೋರಾಟ ಮಾಡಲು ನಾವು ಸೇರಿದ್ದೇವೆ. ಯಾವುದೇ ಕಾರಣಕ್ಕೂ ರಸ್ತೆಯ ವ್ಯವಸ್ಥೆ ಸಂಪೂರ್ಣ ಸರಿಯಾಗುವ ತನಕ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸಕೂಡದು ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಈ ನಮ್ಮ ಹೋರಾಟ ಮುಂದುವರೆಯುತ್ತೆ ಮತ್ತು ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸಲು ಬಿಡುವುದಿಲ್ಲ. ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದು, ಹೈಕೋರ್ಟಿನಲ್ಲಿ ಸಹ ಕೇಸನ್ನು ದಾಖಲಿಸಲಾಗಿದ್ದು, ಅದು ಜಿಲ್ಲಾಧಿಕಾರಿಯವರ ವರದಿ ಕೇಳಿದೆ. ಎಸಿ ಕೋರ್ಟಿನಲ್ಲಿ ಕೂಡ ಕೇಸು ನಡೆಯುತ್ತಿದ್ದು ಇಷ್ಟೆಲ್ಲಾ ಇರುವಾಗ ನವಯುಗ ಕಂಪೆನಿ ಏಕಾಏಕಿ ಬಂದು ಪೊಲೀಸ್ ಬಂದೋಬಸ್ತಿನಲ್ಲಿ ಟೋಲ್ ಸಂಗ್ರಹಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ ಎಂದರು.

ಸಮಿತಿಯ ಇನ್ನೋರ್ವ ಸದಸ್ಯ ಆಲ್ವಿನ್ ಅಂದ್ರಾದೆ ಮಾತನಾಡಿ ಗುರುವಾರದಿಂದ ಟೋಲ್ ಸಂಗ್ರಹಿಸುತ್ತಾರೆ ಎಂಬ ಮಾಹಿತಿ ಪಡೆದು ನಿನ್ನೆಯ ದಿನ ಸಮಿತಿಯ ಪದಾಧಿಕಾರಿಗಳು ಬಂದು ಟೋಲಿನ ಅಧಿಕಾರಿಗಳಲ್ಲಿ ಕೇಳಿದಾಗ ಅಂತಹ ಯಾವುದೇ ಪ್ರಸ್ತಾಪ ಇಲ್ಲ ಎಂದಿದ್ದರು ಆದರೆ ಇಂದು ಬೆಳಿಗ್ಗೆ ಏಕಾಏಕಿ ಸ್ಥಳೀಯ ವಾಹನಗಳಿಂದ ಟೋಲ್ ಪಡೆಯುತ್ತಿದ್ದಾರೆ. ಈಗಾಗಲೇ ಹೈಕೋರ್ಟಿನಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದ್ದು, ಜಿಲ್ಲಾಧಿಕಾರಿಯವರ ಕೋರ್ಟಿನಲ್ಲಿ ಕೂಡ ಇತ್ಯರ್ಥವಾಗಬೇಕಿದೆ. ಇಷ್ಟೆಲ್ಲಾ ಇರವುವಾಗ ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡದೆ ಕಳ್ಳದಾರಿಯಲ್ಲಿ ಬಂದು ಟೋಲ್ ವಸೂಲಿ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ನಾವು ಈಗಾಗಲೇ ಎಸಿಯವರಲ್ಲಿ ವಿನಂತಿಸಿದ್ದು ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸ್ಥಳೀಯರ ಒಂದು ಸಭೆ ಕರೆಯಬೇಕು ಎಂದು ವಿನಂತಿಸಿದ್ದೇವೆ. ಅಲ್ಲಿ ಏನು ತೀರ್ಮಾನವಾಗುತ್ತದೆ ಅದಕ್ಕೆ ನಾವೆಲ್ಲಾ ಬದ್ದರಿದ್ದೇವೆ ಎಂದರು.

ಪ್ರತಿಭಟನೆಯ ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಕುಂದಾಪುರ ಸಹಾಯಕ ಕಮೀಷನರ್ ಭೂಬಾಲನ್ ಅವರು ಜಿಲ್ಲಾಧಿಕಾರಿಗಳ ಜೊತೆ ಫೋನ್ ಮೂಲಕ ಸಂಭಾಷಣೆ ನಡೆಸಿ ಪ್ರತಿಭಟನೆ ಪರಿಸ್ಥಿತಿಯನ್ನು ವಿವರಿಸದರು. ಅಲ್ಲದೆ ಪ್ರತಿಭಟನಾಕಾರರು, ನವಯುಗ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳ ಸಭೆಯನ್ನು ನಡೆಸಬೇಕೆಂಬ ಪ್ರತಿಭಟನಾಕಾರರ ಮನವಿಯನ್ನು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಸುಮಾರು 2-3 ತಾಸು ನಡೆದ ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಯವರು ಶುಕ್ರವಾರ ಸಂಜೆ ಸಭೆ ನಡೆಸಲು ಒಪ್ಪಿಕೊಂಡಿದ್ದು, ಎಸಿಯವರು ಜಿಲ್ಲಾಧಿಕಾರಿಯವರ ಮಾಹಿತಿಯನ್ನು ಪ್ರತಿಭಟನಾಕಾರರಿಗೆ ನೀಡಿದರು. ಅಲ್ಲದೆ ಅಲ್ಲಿಯ ತನಕ ಸ್ಥಳೀಯ ವಾಹನಗಳಿಗೆ ಯಾವುದೇ ರೀತಿ ಟೋಲ್ ಸಂಗ್ರಹಿಸಬಾರದು ಎಂದು ಕಂಪೆನಿಗೆ ಸೂಚನೆ ನೀಡಿದರು. ಅದರ ಬಳಿಕ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಸ್ಥಳಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಜ್ಯೋತಿ, ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಗೋವಿಂದ ಪೂಜಾರಿ, ಐರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮೊಸೆಸ್ ರೊಡ್ರಿಗಸ್, ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷ ವಿಠಲ ಪೂಜಾರಿ, ನ್ಯಾಯವಾದಿ ಶ್ಯಾಮಸುಂದರ ನಾಯರಿ ಹಾಗೂ ಇತರರು ಪಾಲ್ಗೊಂಡಿದ್ದರು.


Spread the love

Exit mobile version