ಪೆಂಡಾಲ್ ವಿಚಾರ: ಬಿಜೆಪಿ ಸದಸ್ಯರಿಂದ ಪ್ರತಿಭಟನೆ – ಗೊಂದಲದ ಗೂಡಾದ ನಗರ ಸಭೆ ಸಾಮಾನ್ಯ ಸಭೆ
ಉಡುಪಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಗುರುವಾರ ಬಿಜೆಪಿ ಪ್ರತಿಭಟನೆಯ ಪೆಂಡಾಲ್ ಕಿತ್ತ ವಿಷಯಕ್ಕೆ ಸಂಬಂಧಿಸಿದ ಗದ್ದಲದ ವಾತಾವರಣ ಉಂಟಾಗಿ ಕೇವಲ ಅರ್ಧ ಗಂಟೆಯ ಒಳಗೆ ಸಭೆ ನಡೆಸಿ ನಡಾವಳಿಯನ್ನು ಬಹುಮತದಿಂದ ಅಂಗೀಕರಿಸಿ ನಗರಸಭಾ ಅಧ್ಯಕ್ಷೆ ಹಾಗೂ ಆಡಳಿತ ಪಕ್ಷದ ಸದಸ್ಯರು ಹೊರ ನಡೆದ ಘಟನೆಗೆ ಸಾಕ್ಷಿಯಾಯಿತು.
ಬೆಳಿಗ್ಗೆ 10.30 ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ಸರ್ವರನ್ನು ಸ್ವಾಗತಿಸಿದ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪ್ರಶ್ನೋತ್ತರ ಅವಧಿಯ ಮೊದಲು ತನಗೆ ಕೆಲವೊಂದು ಮಾಹಿತಿ ನೀಡಲು ಇದೆ ಬಳಿಕ ಪ್ರಶ್ನೋತ್ತರ ನಡೆಸಲಾಗುವುದು ಎಂದು ಹೇಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಗದ್ದಲವನ್ನು ಆರಂಭಿಸಿದರು. ಪ್ರತಿಪಕ್ಷದ ಸದಸ್ಯ ಯಶ್ಪಾಲ್ ಸುವರ್ಣ ಬುಧವಾರ ರಾಷ್ಟ್ರೀಯ ಪಕ್ಷ ಬಿಜೆಪಿ ಮರಳುಗಾರಿಕೆ ವಿಷಯದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆಗಾಗಿ ಹಾಕಲಾಗಿದ್ದ ಪೆಂಡಾಲನ್ನು ಜೆಸಿಬಿ ಮೂಲಕ ತೆರವುಗೊಳಿಸಿರುವುದರ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಅಲ್ಲದೆ ಪೆಂಡಾಲ್ ತೆಗೆಯಲು ಕಾರಣಿಕರ್ತರಾದ ಕಮೀಷನರ್ ಕಾಂಗ್ರೆಸಿನ ಎಂಜೆಂಟರಂತೆ ವರ್ತಿಸುತ್ತಿದ್ದು ಅವರು ಈ ಕುರಿತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಅದಕ್ಕೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷಳಾಗಿ ನನಗೆ ನಗರಸಭೆಯ ಅಭಿವೃದ್ಧಿಯ ವಿಚಾರದಲ್ಲಿ ಒಂದೆರಡು ಮಾತುಗಳನ್ನು ಆಡಬೇಕು ಬಳಿಕ ನಿಮ್ಮ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಹೇಳಿದರೂ ಅದಕ್ಕೆ ಅವಕಾಶ ನೀಡದೆ ಬಿಜೆಪಿ ಸದಸ್ಯರು ಅಧ್ಯಕ್ಷರ ಪೀಠದ ಬಳಿ ಬಂದು ಧಿಕ್ಕಾರ ಕೂಗಲೂ ಆರಂಭಿಸಿದರು. ಅಧ್ಯಕ್ಷರು ಹಲವು ಬಾರಿ ಮನವಿ ಮಾಡಿದರೂ ಕೂಡ ಇದಕ್ಕೆ ಒಪ್ಪದ ಪ್ರತಿಪಕ್ಷ ಸದಸ್ಯರು ಗದ್ದಲ ಮಾಡುತ್ತಿದ್ದರೆ ಇನ್ನೊಂದು ಕಡೆಯಿಂದ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರು ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು ಎಂದು ಧಿಕ್ಕಾರ ಕೂಗಲು ಆರಂಭಿಸಿದರು ಈ ವೇಳೆ ಸಭೆ ಸಂಪೂರ್ಣ ಗೊಂದಲದ ಗೂಡಾಗಿ ಮಾರ್ಪಟ್ಟಿತು.
ಇದೇ ವೇಳೆ ನಗರಸಭಾ ಸದಸ್ಯ ಮಹೇಶ್ ಠಾಕೂರ್ ಮತ್ತು ಯಶ್ಪಾಲ್ ಸುವರ್ಣ ಕಮೀಷನರ್ ಮಂಜುನಾಥಯ್ಯ ಅವರ ಅಜೆಂಡಾ ಪ್ರತಿ ಹಾಗೂ ಇತರ ಕಡತಗಳನ್ನು ಕಸಿದುಕೊಂಡು ಕ್ಷಮೆ ಕೋರುವಂತೆ ಆಗ್ರಹಿಸಿದರು. ಈ ನಡುವೆ ಅಧ್ಯಕ್ಷೆ ಸ್ವತಃ ಅಜೇಂಡಾವನ್ನು ಓದಿಕೊಂಡು ಹೋಗಿ ಬಹುಮತದಲ್ಲಿ ಅಂಗೀಕರಿಸುವುದರೊಂದಿಗೆ ಸಭೆಯಿಂದ ಹೊರ ನಡೆದರು. ಈ ವೇಳೆ ಪ್ರತಿಪಕ್ಷ ಸದಸ್ಯರು ಅಧ್ಯಕ್ಷೆ ಮೀನಾಕ್ಷಿ ಮಾಧವ ವಿರುದ್ದ ಘೋಷಣೆಗಳನ್ನು ಕೂಗಿದರು. ಅಧ್ಯಕ್ಷೆಯ ಜೊತೆ ಉಪಾಧ್ಯಕ್ಷೆ ಸಂಧ್ಯಾ ರಮೇಶ್ ಹಾಗೂ ಇತರ ಆಡಳಿತ ಪಕ್ಷದ ಸದಸ್ಯರು ಹೊರ ನಡೆದರು.
ಬಳಿಕ ಪ್ರತಿಪಕ್ಷ ಸದಸ್ಯರು ಕಮೀಷನರ್ ಮಂಜುನಾಥಯ್ಯ ಅವರನ್ನು ಸುತ್ತುವರೆದು ಕ್ಷಮೆ ಕೇಳುವಂತೆ ಆಗ್ರಹಿಸಿದರು. ಅದಕ್ಕೆ ಉತ್ತರಿಸಿದ ಅವರು ನಾನು ಕಾನೂನು ಪ್ರಕಾರವೇ ಕ್ರಮವನ್ನು ಕೈಗೊಂಡಿದ್ದು ಯಾವುದೇ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡಿಲ್ಲ ಒರ್ವ ಅಧಿಕಾರಿಯಾಗಿ ಎಲ್ಲಾ ರಾಜಕೀಯ ಪಕ್ಷಗಳನ್ನು ಕೂಡ ಗೌರವಿಸುತ್ತೇನೆ ಆದ್ದರಿಂದ ತನ್ನ ಕ್ರಮವನ್ನು ಸಮರ್ಥಿಸಿಕೊಂಡು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿ ಸಭಾಂಗಣದಿಂಧ ಹೊರ ನಡೆದಿರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಿಪಕ್ಷ ಸದಸ್ಯ ಯಶ್ಪಾಲ್ ಸುವರ್ಣ ಅವರು ಕಮೀಷನರ್ ರಾಜಕೀಯ ಒತ್ತಡಕ್ಕೆ ಮಣಿದು ರಾಷ್ಟ್ರೀಯ ಪಕ್ಷವೊಂದರ ಪ್ರತಿಭಟನಾ ಪೆಂಡಾಲ್ ತೆರವುಗೊಳಿಸಿರುವುದು ಖಂಡನೀಯ. ಅವರು ಸಂಜೆಯ ಒಳಗೆ ಸಾರ್ವಜನಿವಾಗಿ ಕ್ಷಮೆಯಾಚಿಸಬೇಕು ಇಲ್ಲದವಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ನಗರಸಭೆಗೆ ಸಪ್ಟೆಂಬರ್ 2 ರಂದು ಮುತ್ತಿಗೆ ಹಾಕಲಾಗುವುದು ಎಂದರು.
ನಗರಸಭಾಧ್ಯಕ್ಷೆ ಮೀನಾಕ್ಷ ಮಾಧವ ಬನ್ನಂಜೆ ಮಾತನಾಡಿ ವಿರೋಧ ಪಕ್ಷದ ಸದಸ್ಯರು ಪ್ರತಿ ಸಭೆಯಲ್ಲೂ ಒರ್ವ ಮಹಿಳೆ ಎನ್ನುವುದನ್ನು ಗೌರವಿಸದೆ ತನಗೆ ಮಾತನಾಡಲು ಅವಕಾಶವೇ ನೀಡುವುದಿಲ್ಲ ಆದ್ದರಿಂದ ಇಂದು ಸಭೆಯ ಆರಂಭಕ್ಕೆ ಮುನ್ನ ಪ್ರಮುಖ ಅಭಿವೃದ್ಧ ವಿಚಾರವಾದ ನಗರಸಭೆಯನ್ನು ಸೋಡಿಯಂ ಮುಕ್ತ ದಾರಿದೀಪ ನಗರಸಭೆ ಮಾಡುವ ನಿಟ್ಟಿನಲ್ಲಿ ಕೈಗೋಂಡ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಚಿಂತಿಸಿದ್ದೆ ಆದರೆ ಬಿಜೆಪಿಯವರು ಸದಾ ಅಭಿವೃದ್ಧೀಗೆ ವಿರೋಧ ಮಾಡುತ್ತಾ ಬಂದಿದ್ದಾರೆ ಅದನ್ನೇ ಇಂದು ಮುಂದುವರೆಸಿದ್ದಾರೆ. ಸಭೆಯಲ್ಲಿ ಇಬ್ಬರು ಮಹಿಳೆಯರು ಇದ್ದೇವೆ ಎನ್ನುವ ಗೌರವವನ್ನು ಕೂಡ ತೋರದೆ ನನ್ನ ಮೈಕನ್ನು ಬಿಜೆಪಿ ಸದಸ್ಯ ಯಶ್ಪಾಲ್ ಸುವರ್ಣ ಹಾಗೂ ಮಹೇಶ್ ಠಾಕೂರ್ ಕಿತ್ತುಕೊಂಡಿದ್ದಾರೆ ಇದರು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಪೆಂಡಾಲ್ ತೆಗೆದಿರುವ ವಿಚಾರದ ಕುರಿತು ಸ್ಪಷ್ಟಿಕರಣ ನೀಡಿದ ಕಮೀಷನರ್ ಅವರು ನಾವು ನಿಯಮ ಪ್ರಕಾರವೇ ಕ್ರಮ ಕೈಗೊಂಡಿದ್ದು, 4.30 ರಿಂದ 5.30 ವರೆಗೆ ಧರಣಿಗೆ ಅವಕಾಶ ನೀಡಿದ್ದು ಯಾವುದೇ ಪೆಂಡಾಲ್ ಹಾಕಲು ಅವಕಾಶ ನೀಡಿರಲಿಲ್ಲ. ಸರ್ವಿಸ್ ಬಸ್ ನಿಲ್ದಾಣದ ಪ್ರದೇಶ ಸಂಪೂರ್ಣ ಜನ ಹಾಗೂ ವಾಹನ ನಿಭಿಡತೆಯಿಂದ ಕೂಡಿದ್ದು ಅಲ್ಲಿ ಯಾವುದೇ ಪ್ರತಿಭಟನೆಗೆ ಪೆಂಡಾಲ್ ಹಾಕಲು ಅವಕಾಶ ನೀಡದಂತೆ ಪೋಲಿಸ್ ಇಲಾಖೆ ನಗರಸಭೆಗೆ ಮನವಿ ಮಾಡಿತ್ತು. ಆದರೂ ಬಿಜೆಪಿಯವರು ಪೆಂಡಾಲ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ ನಮಗೆ ಅವರ ಪ್ರತಿಭಟನೆ ಆರಂಭಕ್ಕೆ ಮುನ್ನವೇ ತಡೆಯುವ ಅವಕಾಶವಿತ್ತು ಆದರೂ ಕೂಡ ಸೌಜನ್ಯತೆಯ ದೃಷ್ಟಿಯಿಂದ ಅವರ ಪ್ರತಿಭಟನೆಯ ಬಳಿಕ ಪೋಲಿಸ್ ಇಲಾಖೆಯ ಸೂಚನೆಯ ಮೇರೆಗೆ ನಾವು ತೆರವುಗೊಳಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಅಲ್ಲದೆ ತಾನು ಏನೂ ಕೂಡ ತಪ್ಪು ಮಾಡಿಲ್ಲ ಆದ್ದರಿಂದ ಕ್ಷಮೆಯ ಪ್ರಶ್ನೆಯೇ ಬರುವುದಿಲ್ಲ ಎಂದರು. ಅಲ್ಲದೆ ನಗರಸಭೆಗೆ ಮುತ್ತಿಗೆ ಹಾಕುವ ಕುರಿತು ಅವರ ನಿರ್ಧಾರಕ್ಕೆ ನಾವೇನು ಪ್ರತಿಕ್ರಿಯಿಸಲ್ಲ ಎಂದರು.