ಪೇಜಾವರ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಹರಿದು ಬಂದ ಜನಸಾಗರ
ಉಡುಪಿ : ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥರ ಪಾರ್ಥಿವ ಶರೀರವನ್ನು ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1.56ಕ್ಕೆ ಬೆಂಗಳೂರಿಗೆ ರವಾನಿಸಲಾಯಿತು.
ಅಜ್ಜರಕಾಡು ಮೈದಾನದಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ವಿಶೇಷ ಅಂಬುಲೆನ್ಸ್ನಲ್ಲಿಟ್ಟು 1.30 ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ಗೆ ಬಿಗುಭದ್ರತೆಯಲ್ಲಿ ತರಲಾಯಿತು. ಅಲ್ಲಿ ಅಲಂಕೃತವಾದ ಮರದ ಪೆಟ್ಟಿಗೆಯಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಇಡಲಾಯಿತು. ಬಳಿಕ ಹೆಲಿಕಾಪ್ಟರ್ನಲ್ಲಿ ಸುರಕ್ಷಿತವಾಗಿ ಇಡಲಾಯಿತು. ಇದರೊಂದಿಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ಮಠದ ದಿವಾನರು ಹಾಗೂ ಆಪ್ತರು ಬೆಂಗಳೂರಿಗೆ ತೆರಳಿದ್ದರು
ಬೆಳಗ್ಗೆ 9.20ಕ್ಕೆ ಶ್ರೀಗಳ ಕೃಷ್ಣೈಕ್ಯ ಘೋಷಣೆ ಬಳಿಕ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಪೇಜಾವರಶ್ರೀಗಳ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ 12:30ಕ್ಕೆ ತೆರದ ಅಲಂಕೃತ ಜೀಪಿನಲ್ಲಿ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣಕ್ಕೆ ತರಲಾಯಿತು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದರು.
ತಮ್ಮ ಮತ್ತು ಸ್ವಾಮೀಜಿ ಒಡನಾಟ ನೆನಪಿಸಿಕೊಂಡು ಭಾವುಕರಾದ ಯಡಿಯೂರಪ್ಪ, ‘ನಾನು ಸ್ವಾಮೀಜಿ ಜೊತೆಗೆ ಕಳೆದ 50 ವರ್ಷಗಳಿಂದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಅವರು ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ಹೋದಾಗ ಅವರ ಜೊತೆಗೆ ನಾನೂ ಇದ್ದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂಬ ಕನಸು ಅವರದ್ದಾಗಿತ್ತು. ಈಗ ಸುಪ್ರೀಂ ಕೋರ್ಟ್ ಸಹ ಅದೇ ತೀರ್ಪು ನೀಡಿದೆ. ಆದರೆ ರಾಮಮಂದಿರ ನೋಡಲು ಅವರಿಗೆ ಆಗಲಿಲ್ಲ’ ಎಂದು ಹೇಳಿದರು.
‘ನಮ್ಮ ದೇಶದ ಇತಿಹಾಸದಲ್ಲಿ ಯಾವುದೇ ಸ್ವಾಮೀಜಿ ಹೀಗೆ ದೇಶದ ಉದ್ದಗಲಕ್ಕೆ ಪ್ರವಾಸ ಮಾಡಿದ್ದು ನಾನು ನೋಡಿಲ್ಲ. ಆಸ್ಪತ್ರೆ ಸೇರುವ ಎರಡು ದಿನ ಹಿಂದೆಯೂ ಪ್ರವಾಸ ಮಾಡಿದ್ದರು. ಇಂಥ ಅಪರೂಪದ ಯತಿವರೇಣ್ಯ ಸಿಗುವುದು ಕಷ್ಟ. ಅಂಥ ಮಹಾನ್ ಪೂಜ್ಯರನ್ನು ಕಳೆದುಕೊಂಡು ದೇಶ ಬಡವಾಗಿದೆ’ ಎಂದು ವಿಷಾದಿಸಿದರು.
ಮೊದಲು ಸ್ವಾಮೀಜಿ ಅವರಿಗೆ ಉಡುಪಿಯ ಸಶಸ್ತ್ರ ಮೀಸಲು ಪಡೆ ಮೂರ್ತಿ ನಾಯಕ್ ನೇತೃತ್ವದಲ್ಲಿ ಮರಣೋತ್ತರ ಗೌರವ ಅರ್ಪಿಸಲಾಯಿತು ಹಾಗೂ ಮೂರು ಸುತ್ತು ಕುಶಲ ತೋಪುಗಳನ್ನು ಹಾರಿಸಲಾಯಿತು.
ಹುಟ್ಟೂರು ರಾಮಕುಂಜ ಅಲ್ಲದೆ ಪಕ್ಕದ ಕೊಯಿಲ, ಹಳೆನೇರಿಂಕಿ ಗ್ರಾಮ ವ್ಯಾಪ್ತಿಯ ಎಲ್ಲಾ ವರ್ತಕರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ, ಸಾವಿರಾರು ಅನುಯಾಯಿಗಳು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದರು.
ಬಳಿಕ ಸುಮಾರು 1.30ರ ಸಮಯದಲ್ಲಿ ಅಂತಿಮ ದರ್ಶನ ಪೂರ್ಣಗೊಂಡ ಬಳಿಕ ಮತ್ತೆ ಶ್ರೀಗಳ ಪಾರ್ಥೀವ ಶರೀರವನ್ನು ಆಂಬುಲೆನ್ಸ್ನಲ್ಲಿ ಇರಿಸಿ, ಸೇನಾ ಹೆಲಿಕಾಪ್ಟರ್ ಇರುವಲ್ಲಿಗೆ ಕೊಂಡೊಯ್ಯಲಾಯಿತು. ಸುಮಾರು 1.55ರ ಸಮಯದಲ್ಲಿ ಶ್ರೀಗಳ ಪಾರ್ಥೀವ ಶರೀರವನ್ನು ಹೊತ್ತ ಹೆಲಿಕಾಪ್ಟರ್ ಬೆಂಗಳೂರಿನತ್ತ ಸಾಗಿತು.