ಪೊಲೀಸ್ ವ್ಯವಸ್ಥೆ ಜನಸ್ನೇಹಿ ಆಗಲಿ – ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಹರ್ಷ ಪಿ.ಎಸ್.
ಮಂಗಳೂರು: ಪೊಲೀಸ್ ಠಾಣೆಯನ್ನು ಮತ್ತಷ್ಟು ಸದೃಢವಾಗಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ. ಗಸ್ತು ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನಸ್ನೇಹಿಯಾಗೋಣ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಹರ್ಷ ಪಿ.ಎಸ್. ತಿಳಿಸಿದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಕಮಿಷನರೇಟ್ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಮಾಡುವ ರೌಡಿ ಶೀಟರ್ ಗಳು, ಕಿಡಿಗೇಡಿಗಳ ಮೇಲೆ ಸದಾ ನಿಗಾ ಇಡಬೇಕಿದ್ದು, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗಿದೆ. ಡ್ರಗ್ ಮಾಫಿಯಾ ನಗರದಲ್ಲಿ ದೊಡ್ಡ ಮಟ್ಟದಲ್ಲಿದ್ದು, ಅದನ್ನು ಸಂಪೂರ್ಣ ಮಟ್ಟಹಾಕಲು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಠಿಣ ಕಾರ್ಯಾಚರಣೆ ನಡೆಸಬೇಕಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಡ್ರಗ್ಸ್ ಹಾವಳಿ ಯುವ ಜನಾಂಗದ ದಾರಿಯನ್ನು ತಪ್ಪಿಸುತ್ತಿದೆ. ಇತ್ತೀಚೆಗೆ ಡ್ರಗ್ಸ್ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಪೊಲೀಸ್ ವ್ಯವಸ್ಥೆಯನ್ನು ಠಾಣಾ ಹಂತದಲ್ಲಿ ಮತ್ತಷ್ಟು ಬಲಪಡಿಸಲು, ಎಲ್ಲ ಹಂತಗಳಲ್ಲಿ ಜನಸ್ನೇಹಿ ಆಡಳಿತ ನಡೆಸಲು ಆದ್ಯತೆ ನೀಡಲಾಗುವುದು. ಸಂಘಟಿತ ಅಪರಾಧ ಮಟ್ಟ ಹಾಕುವ ಬಗ್ಗೆ ಈ ಹಿಂದಿನ ಆಯುಕ್ತರ ಮಾದರಿಯಲ್ಲೇ ಕ್ರಮ ವಹಿಸಲಾಗುವುದು. ರೌಡಿ ಚಟುವಟಿಕೆಯನ್ನು ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಡಾ.ಹರ್ಷ ಅವರು ಟ್ವೀಟ್ ಮಾಡಿದ್ದಾರೆ.