ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಭೆ
ಮಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ನಗರ ಸಭೆ, ಪುರಸಭೆ/ಪಾಲಿಕೆ ವ್ಯಾಪ್ತಿಯ ಹಾಗೂ ಇತರ ರಸ್ತೆಗಳಲ್ಲಿ MOBILE SPEED RADAR GUN ಉಪಯೋಗಿಸಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದ್ದಾರೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಾಲನೆಯಿಂದಾಗಿ ಉಂಟಾಗುತ್ತಿರುವ ಅಪಘಾತಗಳಅನ್ನು ತಡೆಯುವ ನಿಟ್ಟಿನಲ್ಲಿ ಗುರುವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ವಿವಿಧ ವಾಹನಗಳಿಗೆ ನಿಗದಿಪಡಿಸಿರುವ ವೇಗದ ಮಿತಿಯ ಸೂಚನಾ ಫಲಕಗಳನ್ನು ರಸ್ತೆಗಳ ಬದಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಅಳವಡಿಸುವಂತೆ ಸೂಚಿಸಿದೆ. ಈ ಅಧಿಸೂಚನೆಯಲ್ಲಿ ತಿಳಿಸಿರುವ ರಸ್ತೆಗಳನ್ನು ಉಪಯೋಗಿಸುವ ಎಲ್ಲಾ ವಾಹನ ಚಾಲಕರು ವೇಗದ ಮಿತಿಯ ಸೂಚನಾ ಫಲಕಗಳಲ್ಲಿ ಕಾಣಿಸಿದ ಮಿತಿಗಿಂತ ಕಡಿಮೆ ವೇಗದಲ್ಲಿ ವಾಹನವನ್ನು ಚಲಾಯಿಸಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸೂಚಿಸಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಬಿ.ಪಿ. ದಿನೇಶ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಝ್ಮಿ, ವಿವಿಧ ಇಲಾಖೆಗಳ ಅನಿರುದ್ಧ ಕಾಮತ್, ಲಾಯಿಡ್ ಡಿಸಿಲ್ವಾ, ಮಂಜು ಕೀರ್ತಿ ಎಸ್, ಜ್ಞಾನೇಶ್, ಎಂ.ಎನ್ ಶಿವಲಿಂಗಪ್ಪ, ಮಿಥುನ್ ಉಪಸ್ಥಿತರಿದ್ದರು.