ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಪ್ರಕರಣ – ಅಪರಾಧಿಗೆ ಜೈಲು ಶಿಕ್ಷೆ

Spread the love

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಪ್ರಕರಣ – ಅಪರಾಧಿಗೆ ಜೈಲು ಶಿಕ್ಷೆ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ ಎಂಬಲ್ಲಿ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೆಕ್ಷನ್ 333 ಗೆ 5 ವರ್ಷ ಶಿಕ್ಷೆ, ಹಾಗೂ ಸೆಕ್ಷನ್ 504 ಕ್ಕೆ 1 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆಳ್ತಂಗಡಿ ಗೇರು ಕಟ್ಟೆಯ ಕಜೆ ನಿವಾಸಿ ಉಮ್ಮರ್ ಫಾರೂಕ್ ಶಿಕ್ಷೆಗೊಳಗಾದವರು.

ಉಮ್ಮರ್ ಫಾರೂಕ್ 2015 ನೇ ಎಪ್ರಿಲ್ 17 ರಂದು ಸಂಜೆ ಚಿಕ್ಕಮಡ್ನೂರು ಗ್ರಾಮದ ಜಿಡೆಕಲ್ ಎಂಬಲ್ಲಿರುವ ತನ್ನ ಎರಡನೇ ಪತ್ನಿ ತಸ್ಮಿಯಾಳ ಮನೆಗೆ ಬಂದು ಆಕೆಗೆ ಹಲ್ಲೆ ನಡೆಸುತ್ತಿದ್ದಾಗ ತಸ್ಮಿಯಾ ಅವರ ತಾಯಿ ಝೋಹರಾ ಅವರು ಪುತ್ತೂರು ನಗರ ಠಾಣೆಗೆ ಕರೆ ಮಾಡಿ ಪುತ್ರಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಚಾರವನ್ನು ಪೊಲೀಸರಿಗೆ ಫೋನ್ ಮೂಲಕ ತಿಳಿಸಿದ್ದರು. ತಕ್ಷಣ ಸ್ಪಂದಿಸಿದ ಪುತ್ತೂರು ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಗಳಾದ ನಾರಾಯಣ್ ಮತ್ತು ವಿಶ್ವನಾಥ ಶೆಟ್ಟಿ ಅವರು ಸ್ಥಳಕ್ಕೆ ತೆರಳಿದಾಗ ುಮ್ಮರ್ ಫಾರೂಕ್ ಅವರು ಹೆಡ್ ಕಾನ್ಸ್ ಟೇಬಲ್ ನಾರಾಯಣ್ ಅವರ ತಲೆಗೆ ದೊಣ್ಣೆಯಿಂದ ಹೊಡೆಯಲು ಯತ್ನಿಸಿದ್ದು ತಲೆಗೆ ಬೀಳುವ ಏಟು ತಪ್ಪಿಸಿಕೊಳ್ಳಲು ನಾರಾಯಣ ಅವರು ಕೈ ಅಡ್ಡ ಹಿಡಿದಾಗ ಆ ಏಟು ಅವರ ಎಡ ಕೈಗೆ ಬಿದ್ದು, ಕೈ ಮೂಳೆ ಮುರಿತಕ್ಕೊಳಗಾಗಿತ್ತು. ಜತೆಗಿದ್ದ ವಿಶ್ವನಾಥ ಶೆಟ್ಟಿ ಅವರು ಹಲ್ಲೆ ತಡೆದು ಆತನನ್ನು ಹಿಡಿದು ಬಂಧಿಸಿದ್ದರು.

ಈ ಘಟನೆಗೆ ಸಂಬಂಧಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಅವಾಚ್ಯ ಶಬ್ದಗಳಿಂದ ನಿಂದಿಸಿದ, ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪ ಹೊರಿಸಿ ಉಮ್ಮರ್ ಫಾರೂಕ್ ವಿರುದ್ದ ಪ್ರಕರಣ ದಾಖಲಾಗಿತ್ತು. ಘಟನೆ ಸಂದರ್ಭದಲ್ಲಿ ಪುತ್ತೂರು ನಗರ ಪೊಲೀಸ್ ಠಾಣಾ ಆಗಿನ ವೃತ್ತ ನಿರೀಕ್ಷಕ ಮಂಜಯ್ಯರವರು ತನಿಖೆ ನಡೆಸಿದರು. ಬಳಿಕ ಬಂದ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರು ಆರೋಪಿ ವಿರುದ್ದ ಸೆಕ್ಷನ್ 333, 504 ಮತ್ತು 307 ರಂತೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಣ್ಣ ಅವರು ಆ.6ರಂದು ಅಪರಾಧಿ ಉಮ್ಮರ್ ಫಾರೂಕ್ ಗೆ ಶಿಕ್ಷೆ ಪ್ರಕಟಿಸಿದ್ದಾರೆ.

ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕ ಉದಯ್ ಕುಮಾರ್ ಅವರು ವಾದಿಸಿದ್ದರು. ವಿಶೇಷವೆಂದರೆ ಈ ಪ್ರಕರಣದಲ್ಲಿ ಅರೋಪಿ ತನ್ನ ಪರ ವಕೀಲರನ್ನು ಆರಂಭದಲ್ಲಿಯೇ ಕೈ ಬಿಟ್ಟು ಆ ಬಳಿಕ ಸ್ವತಃ ತಾನೇ ವಾದಿಸಿದ್ದ.

ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದ್ದು, 28 ದಾಖಲೆಗಳು, 1 ಕಬ್ಬಿಣದ ರಾಡ್ ಮುದ್ದೆ ಮಾರು ನ್ಯಾಯಾಲಯದ ಮುಂದಿಡಲಾಗಿತ್ತು ಎಂದು ಸರಕಾರಿ ಅಭಿಯೋಜಕ ಉದಯ ಕುಮಾರ್ ತಿಳಿಸಿದ್ದಾರೆ.


Spread the love