ಪೋಲಿಸರಿಂದ 10 ಕೆಜಿ ಗಾಂಜಾ ನಾಶ
ಉಡುಪಿ: ವಿವಿಧ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾದ ಸುಮಾರು 10 ಕೆ.ಜಿ. ಗಾಂಜಾವನ್ನು ನ್ಯಾಯಾಲಯದ ಆದೇಶದಂತೆ ಶುಕ್ರವಾರ ಎಸ್ಪಿ ಕಚೇರಿಯ ಆವರಣದಲ್ಲಿ ನಾಶಪಡಿಸಲಾಯಿತು.
ಜಿಲ್ಲಾ ಮಟ್ಟದ ಡ್ರಗ್ ಡಿಸ್ ಪೋಸಲ್ ಕಮಿಟಿ ಇದರ ಅಧ್ಯಕ್ಷ ಎಸ್ಪಿ ಡಾ. ಸಂಜೀವ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯದಂತೆ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು.
ಐದು ವಿವಿಧ ಠಾಣೆಗಳಾದ ಮಲ್ಪೆ ಠಾಣೆಯಲ್ಲಿ 1.25 ಕೆ.ಜಿ., ಉಡುಪಿ ನಗರ ಠಾಣೆಯಲ್ಲಿ 1.426 ಕೆಜಿ, ಸೆನ್ ಪೋಲಿಸ್ ಠಾಣೆಯಲ್ಲಿ 2.938 ಕೆಜಿ, ಮಣಿಪಾಲ ಠಾಣೆಯಲ್ಲಿ 1.361 ಕೆಜಿ ಮತ್ತು ಅಮಾಸೆಬೈಲು ಠಾಣೆಯಲ್ಲಿ ವಶಪಡಿಸಿಕೊಳ್ಳಲಾದ 4.800 ಕೆಜಿ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಪಿ ಡಾ. ಸಂಜೀವ್ ಪಾಟೀಲ್, ಎಎಸ್ಪಿ ಕುಮಾರ್ ಚಂದ್ರ, ಎಎಸ್ಪಿ ಕಾರ್ಕಳ ಋಷಿಕೇಶ್ ಸೋನಾವನೆ, ಡಿವೈಎಸ್ಪಿ ಕುಮಾರಸ್ವಾಮಿ, ಪ್ರವೀಣ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.