ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ಬಾಹಿರ – ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ
ಉಡುಪಿ: ಕೇಂದ್ರ ಸರಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಇಂದು ಎಸ್.ಐ.ಓ ಉಡುಪಿ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ, ವೆಲ್ಪೇರ್ ಪಾರ್ಟಿ ಉಡುಪಿ, ದಲಿತ ದಮನಿತ ಹೋರಾಟ ಸಮಿತಿ ಉಡುಪಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ದೇಶದ ಪ್ರಜೆಗಳು ಭಗತ್ ಸಿಂಗ್, ಅಶ್ಪಾಖುಲ್ಲಾ ಖಾನ್ ರವರ ಅನುಯಾಯಿಗಳು ಈ ದೇಶದ ಸಂವಿಧಾನದ ರಕ್ಷಣೆಗೆ ಜೀವ ಕೊಡಲು ಸಿದ್ಧ. ನೀವು ಸ್ವಾತಂತ್ರ್ಯ ಸೇನಾನಿಗಳ ಜೀವ ಪಣಕ್ಕಿಟ್ಟು ಕ್ಷಮಾಪಣಾ ಪತ್ರ ಬರೆದು ಓಡಿ ಬಂದ ಹೇಡಿಯ ಅನುಯಾಯಿಗಳು ನಮ್ಮ ಪೌರತ್ವದ ಬಗ್ಗೆ ಮಾತನಾಡುವ ಅಗತ್ಯ ಖಂಡಿತವಿಲ್ಲವೆಂದು ಹೇಳಿದರು.
ನಂತರ ಚಿಂತಕ ಜಿ.ರಾಜ್ ಶೇಖರ್ ಮಾತನಾಡಿ, ಈ ಮಸೂದೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಹೊರಗಿಟ್ಟು ಜಾರಿಗೆ ತರುವ ಪ್ರಯತ್ನ ಸಾಗಿದೆ. ಅಮಿತ್ ಶಾ ರವರ ಮಕ್ಕಳಾಟಿಕೆಯ ತರ್ಕದ ಪ್ರಕಾರ ಈ ದೇಶಗಳು ಮುಸ್ಲಿಮ್ ರಾಷ್ಟ್ರಗಳಾಗಿರುವುದರಿಂದ ಮುಸ್ಲಿಮರು ದೌರ್ಜನ್ಯಕ್ಕೆ ಒಳಗಾಗುವುದಿಲ್ಲವೆಂವ ವಾದ ಮಂಡಿಸುತ್ತಾರೆ. ಆದರೆ ವಾಸ್ತವದಲ್ಲಿ ಕಡು ಬಡತನದ ಕಾರಣ ಮುಸ್ಲಿಮರು ಭಾರತಕ್ಕೆ ಉದ್ಯೋಗ ಅರಸಿ ಬರುತ್ತಾರೆ. ಭಾರತ ಅವರಿಗೆಲ್ಲ ನೆಲೆ ನೀಡಬೇಕು. ಮಯನ್ಮಾರ್ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಅವರ ಬಗ್ಗೆ ಇವರ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು. ಶ್ರೀಲಂಕಾದ ತಮಿಳು ಹಿಂದುಗಳ ಬಗ್ಗೆ ಈ ಮಸೂದೆಯಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲವೆಂದು ಹೇಳಿದ್ದಾರೆ. ಈ ಮಸೂದೆ ಭಾರತದ ಸಂವಿಧಾನಕ್ಕೆ, ಧರ್ಮನಿರಪೇಕ್ಷತೆಗೆ ಮಸಿ ಬಳಿಯು ಹುನ್ನಾರವಾಗಿದೆ.
ಪೌರತ್ವ ತಿದ್ದುಪಡಿ ಮಸೂದೆಯ ಉದ್ದೇಶ ಮುಸ್ಲಿಮರು ಈ ದೇಶದ ಪ್ರಜೆಗಳಲ್ಲ, ಮನುಷ್ಯರು ಅಲ್ಲ ಎಂಬ ನಿಲುವುವಾಗಿದೆ. ಅಮಿತ್ ಶಾ ಮತ್ತು ಮೋದಿಯ ಕರಾಳ ಹಿನ್ನಲೆಯಲ್ಲಿ ಮಂಡಿಸಿರುವ ಈ ಮಸೂದೆಯನ್ನು ನಾವು ಒಗ್ಗಟ್ಟಾಗಿ ಬಹಿಷ್ಕರಿಸಬೇಕೆಂದು ಕರೆ ನೀಡಿದರು.
ಇತ್ತೀಚ್ಚಿಗೆ ಕೋಮುವಾದಿಗಳ ಅಟ್ಟಹಾಸ ಮಿತಿ ಮೀರಿದೆ. ಕೆಲವು ಜನರ ಧ್ವನಿ ದೊಡ್ಡ ಮಟ್ಟದಲ್ಲಿ ರಾರಜಿಸುತ್ತಿದೆ. ಇಂದು ಕೇಂದ್ರ ಸರಕಾರ ದೇವರ, ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದೆ. ವಾಸ್ತವದಲ್ಲಿ ಉದ್ಯೋಗ, ಅಭಿವೃದ್ದಿಯ ಆಧಾರದಲ್ಲಿ ಬರಬೇಕಿತ್ತು. ಆದರೆ ಯುವಕರನ್ನು ಧ್ರುವೀಕರಣದ ಉನ್ಮಾದದಲ್ಲಿ ತೇಲಿಸಿ ವೋಟ್ ಬ್ಯಾಂಕ್ ನ್ನಾಗಿ ಬದಲಾಯಿಸಲಾಗಿದೆ. ಇಂದು ನಾನು ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದರೂ ನಾನು ಒಬ್ಬ ಭಾರತೀಯ. ಒಂದು ವೇಳೆ ನನಗೆ ಹಿಂದು ಧರ್ಮದಿಂದ ಬಂದ ಕಾರಣಕ್ಕೆ ಪೌರತ್ವ ಕೊಡುತಿದ್ದರೆ ಅದನ್ನು ಬಹಿಷ್ಕರಿಸುತ್ತೇನೆ. ನಾನು ಜಾತ್ಯತೀತ ವಾದದಲ್ಲಿ ನಂಬಿಕೆಯಿಟ್ಟವನ್ನು ಎಂದು ಹೇಳಿದರು.
ಕೊನೆಯಲ್ಲಿ ಇದ್ರಿಸ್ ಹೂಡೆ ಮಾತನಾಡಿ, ಕರಿಯರ ವಿರುದ್ಧದ ತಾರತಮ್ಯವನ್ನು ವಿರೋಧಿಸಿ ಹೋರಾಟ ಕಟ್ಟಿ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧಿಯ ಆಶಯ ನುಚ್ಚು ನೂರು ಮಾಡಿ ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರುತ್ತಿದೆಯೆಂದು ಖೇದ ವ್ಯಕ್ತಪಡಿಸಿದರು.ಆಡಳಿತಾತ್ಮಕ ವೈಫಲ್ಯ ಮುಚ್ಚಿ ಹಾಕುವ ಪ್ರಯತ್ನದ ಭಾಗವಾಗಿ ಈ ಮಸೂದೆಗಳ ನಾಟಕವಾಡುತ್ತಿದೆಯೆಂದು ಎಂದು ಹೇಳಿದರು.
ಈ ದೇಶದ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗುವಂತೆ ಮಾಡುತ್ತಿರುವ ಅಮಿತ್ ಶಾ ಅವರನ್ನುಈಗಾಗಲೇ ಅಮೇರಿಕಾದ ಆಯೋಗಗಳು ನಿರ್ಬಂಧಕ್ಕೆ ಆಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಝೀಜ್ ಉದ್ಯಾವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಅಮೃತ್ ಶೆಣೈ, ವಿಠಲ ತೊಟ್ಟಂ, ಶಬ್ಬೀರ್ ಮಲ್ಪೆ,ಎಸ್.ಐ.ಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಶಾರೂಕ್ ತೀರ್ಥಹಳ್ಳಿ, ಜಿ.ಐ.ಓ ಜಿಲ್ಲಾಧ್ಯಕ್ಷೆ ಅಮ್ನಾ ಕೌಸರ್, ಜೆ.ಐ.ಎಚ್ ಹೂಡೆಯ ಅಬ್ದುಲ್ ಖಾದೀರ್ ಹೂಡೆ, ಮುನೀರ್ ಅಹ್ಮದ್, ಕೆ.ಆರ್.ಎಸ್ ಪಕ್ಷದ ರಫೀಕ್ ಕಲ್ಯಾಣಪುರ, ಖತೀಬ್ ರಶೀದ್ ಮಲ್ಪೆ, ಮೆಹರುನ್ನಿಸಾ, ನಿಸಾರ್ ಉಡುಪಿ, ರಫೀಕ್ ಮಲ್ಪೆ ಮುಂತಾದವರು ಉಪಸ್ಥಿತರಿದ್ದರು. ಹುಸೇನ್ ಕೋಡಿಬೇಂಗ್ರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಕೊನೆಯಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮಸೂದೆ ತಿರಸ್ಕರಿಸುವಂತೆ ಮನವಿ ಸಲ್ಲಿಸಲಾಯಿತು.