ಪೌರತ್ವ ಪ್ರತಿಭಟನೆ: ಮಂಗಳೂರಿನಲ್ಲಿ ಕರ್ಫ್ಯೂ ಸಡಿಲಿಕೆ, ರಾತ್ರಿ ಮಾತ್ರ ಕರ್ಫ್ಯೂ ಜಾರಿ – ಸಿಎಂ
ಮಂಗಳೂರು: ಪೌರತ್ವ ಕಾಯಿದೆ ವಿರೋಧಿಸಿ ಹಿಂಸಾಚಾರ ನಡೆದ ನಂತರ ಮಂಗಳೂರು ನಗರದಾದ್ಯಂತ ಶನಿವಾರವು ಕರ್ಫ್ಯೂ ಜಾರಿ ಮುಂದುವರೆದಿದೆ.
ಈ ಮಧ್ಯೆ ಇಂದು ಮಂಗಳೂರಿಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಹಗಲಿನ ವೇಳೆಯಲ್ಲಿ ಕರ್ಫ್ಯೂ ಸಡಿಲಿಸಲಾಗುತ್ತಿದ್ದು, ರಾತ್ರಿ ಮಾತ್ರ ಕರ್ಫ್ಯೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗುತ್ತಿದೆ. ರಾತ್ರಿ ಕರ್ಫ್ಯೂ ಮುಂದುವರೆಯಲಿದೆ. ನಾಳೆಯೂ ಹಗಲಿನ ವೇಳೆ ಕರ್ಫ್ಯೂ ಸಡಿಲಿಸಲಾಗುತ್ತಿದ್ದು, ರಾತ್ರಿ ಮಾತ್ರ ಕರ್ಫ್ಯೂ ಜಾರಿಯಲ್ಲಿರಲಿದೆ. ಸೋಮವಾರದಿಂದ ಕರ್ಫ್ಯೂ ಹಿಂಪಡೆಯಲಾಗುತ್ತದೆ. ಆದರೆ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಕ್ಕೆ ಕಾನೂನು ರೀತಿ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಮತ್ತು ಗೋಲಿಬಾರ್ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇಂದು ಬೆಳಗ್ಗೆ 6ರಿಂದ 8 ಗಂಟೆಯವರೆಗೆ ನಗರದಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿ ಜನರಿಗೆ ದಿನ ಬಳಕೆಯ ವಸ್ತುಗಳನ್ನು ಖರೀದಿಸಲು ಪೊಲೀಸ್ ಇಲಾಖೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಈ ವಿಷಯವನ್ನು 7 ಗಂಟೆ ಸುಮಾರಿಗೆ ತಿಳಿಸಿದ್ದರಿಂದ ಸಾರ್ವಜನಿಕರು ಲಗುಬಗೆಯಲ್ಲಿ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದುದು ಕಂಡುಬಂತು. ಆದರೆ ಈ ವೇಳೆ 8 ಗಂಟೆ ಮೀರಿದ್ದರಿಂದ ಪೊಲೀಸರು ಅಂಗಡಿಗಳನ್ನು ಮುಚ್ಚಿಸಿ ಅಲ್ಲಿಂದ ಗ್ರಾಹಕರನ್ನು ಲಘು ಲಾಠಿ ಪ್ರಹಾರ ನಡೆಸಿ ಚದುರಿಸುತ್ತಿದ್ದ ದೃಶ್ಯ ಕಂಡುಬಂತು.
ನಗರದಲ್ಲಿ ಯಾವುದೇ ಬಸ್ಸು ಸೇರಿದಂತೆ ಯಾವುದೇ ವಾಹನಗಳು ಸಂಚರಿಸುತ್ತಿಲ್ಲ. ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ, ಜಿಲ್ಲೆಯಾದ್ಯಂತ ಇಂದು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ.