ಪ್ರಕಾಶ್ ರೈಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನ ವಿಫಲಗೊಳಿಸಿದ ಪೋಲಿಸರು; ಬಂಧನ
ಕುಂದಾಪುರ: ಬಹುಭಾಷಾ ನಟ, ಪ್ರಕಾಶ ರೈ ಅವರಿಗೆ ಕಾರಂತ ಹುಟ್ಟೂರು ಪ್ರಶಸ್ತಿ ನೀಡುವುದನ್ನು ವಿರೋಧಿಸಿ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಪ್ರತಿಭಟನಾಕಾರರನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ.
ಕೋಟಾದ ಕಾರಂತ ಥೀಂ ಪಾರ್ಕ್ ಬಳಿ ಜಮಾಯಿಸಿದ್ದ ಜೈ ಭಾರ್ಗವ ಬಳಗ, ಬಿಜೆಪಿ ಯುವಮೋರ್ಚಾ ಧಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನೆಗೆ ಮುಂದಾದರು. ಈ ವೇಳೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ್ದು, ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ಇವೆಲ್ಲದರ ನಡುವೆ ನಟ ಪ್ರಕಾಶ ರೈ ಅವರನ್ನು ಕೆಲ ಸಂಘಟನೆಗಳ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು. ಇದೀಗ ನಟ ರೈ ಥೀಂ ಪಾರ್ಕ್ ತಲುಪಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮಂಗಳವಾರ ಮುಂಜಾನೆಯಿಂದಲೇ ಸುಮಾರು 160ಕ್ಕೂ ಅಧಿಕ ಪೊಲೀಸರು ಕಾರಂತ ಥೀಂ ಪಾರ್ಕ್ ಬಂದೋಬಸ್ತಿನಲ್ಲಿ ತೊಡಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ ಪಾಟೀಲ್, ಎಎಸ್ಪಿ ಕುಮಾರಚಂದ್ರ, ಕಾರ್ಕಳ ಡಿವೈಎಸ್ಪಿ ರಿಷಿಕೇಶ್ ಸೋನಾವಾನೆ, ಕುಂದಾಪುರ ಡಿವೈಎಸ್ಪಿ ಪ್ರವೀಣ್ ಅವರ ನೇತೃತ್ವದಲ್ಲಿ ಕಾರಂತ ಥೀಂ ಪಾರ್ಕ್ನ ಭದ್ರತೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಡಿನ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನದ ಕುರಿತು ಕೆಲ ದಿನಗಳ ಹಿಂದೆ ಡಿವೈಎಫ್ ರಾಜ್ಯ ಸಮ್ಮೇಳನದಲ್ಲಿ ನಟ ಪ್ರಕಾಶ್ ರೈ ಟೀಕಿಸಿದ್ದರು.
ಮೋದಿಯನ್ನು ಟೀಕಿಸಿದ್ದ ರೈ ವಿರುದ್ದ ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಹಿಂದೂಪರ ಸಂಘಟನೆಗಳು ರೈ ಪ್ರಶಸ್ತಿ ಸ್ವೀಕರಿಸಲು ಬಂದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂಬ ಹೇಳಿಕೆಗಳನ್ನು ನೀಡಿತ್ತು.