Home Mangalorean News Kannada News ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ; ಬಿಜೆಪಿ ಯುವಮೋರ್ಚಾ ಉಸ್ತುವಾರಿ ಯಶ್‍ಪಾಲ್ ಸುವರ್ಣ...

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ; ಬಿಜೆಪಿ ಯುವಮೋರ್ಚಾ ಉಸ್ತುವಾರಿ ಯಶ್‍ಪಾಲ್ ಸುವರ್ಣ ವಿರೋಧ

Spread the love

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ; ಬಿಜೆಪಿ ಯುವಮೋರ್ಚಾ ಉಸ್ತುವಾರಿ  ಯಶ್‍ಪಾಲ್ ಸುವರ್ಣ ವಿರೋಧ

ಉಡುಪಿ: ಜ್ಞಾನಪೀಠ ಪುರಸ್ಕøತ ದಿವಂಗತ ಕೋಟ ಶಿವರಾಮ ಕಾರಂತರ ಹೆಸರಲ್ಲಿ ಪ್ರಧಾನ ಮಾಡಲಾಗುತ್ತಿರುವ ಪ್ರಶಸ್ತಿಯನ್ನು ಈ ಬಾರಿ ಕಾರಂತ ಪ್ರತಿಷ್ಟಾನವು ಬಹುಭಾಷಾನಟ ಪ್ರಕಾಶ್ ರೈ ಅವರಿಗೆ ಕೊಡಲು ನಿರ್ಧರಿಸಿದ್ದು, ಇದನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಗ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಯುವಮೋರ್ಚಾ ಉಸ್ತುವಾರಿ ಯಶ್‍ಪಾಲ್ ಸುವರ್ಣ ಹೇಳಿದ್ದಾರೆ.

ಕಾರಂತರ ಆಸಕ್ತಿಯ ಕ್ಷೇತ್ರಗಳಾದ ಸಾಹಿತ್ಯ,ಯಕ್ಷಗಾನ,ಪರಿಸರ,ಸಿನಿಮಾ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕಳೆದ ಹದಿಮೂರು ವರ್ಷಗಳಿಂದ ನೀಡಿಕೊಂಡು ಬರಲಾಗಿದೆ. ಪ್ರತಿಬಾರಿಯೂ ಆಯ್ಕೆ ಸಮಿತಿ ಅರ್ಹ ವ್ಯಕ್ತಿಗಳನ್ನೇ ಗುರುತಿಸುತ್ತಾ ಬಂದಿದೆ. ಆದರೆ ಈ ಬಾರಿ ಆಯ್ಕೆ ಸಮಿತಿ ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡಲು ಮುಂದಾಗಿದ್ದು ನಮ್ಮೆಲ್ಲರ ಮನಸ್ಸಿಗೆ ನೋವು ತಂದಿದೆ. ಪ್ರಕಾಶ ರೈ ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯನ ಬಟ್ಟಂಗಿಗಳ ಪಾಳೆಯದಲ್ಲಿ ಗುರುತಿಸಿಕೊಂಡು ಪುಕ್ಕಟೆ ಪ್ರಚಾರಕ್ಕಾಗಿ ತಲೆಬುಡವಿಲ್ಲದ ಹೇಳಿಕೆಗಳನ್ನು ನೀಡುತ್ತಾ ತಿರುಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಬ್ಬ ನನಗಿಂತಲೂ ಉತ್ತಮ ನಟ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಒಬ್ಬ ಡಬಲ್ ರೋಲ್ ಪೂಜಾರಿ ಎಂದು ಅವಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ.

ರಾಜ್ಯ ಪೊಲೀಸರು ನಡೆಸುತ್ತಿರುವ ಗೌರಿ ಹತ್ಯೆಯ ತನಿಖೆ ವಿಳಂಬವಾಗುತ್ತಿರುವುದನ್ನು ಕೇಂದ್ರದ ಸರಕಾರದ ತಲೆಗೆ ಕಟ್ಟುವ ಪ್ರಯತ್ನವನ್ನು ಇವರು ಮಾಡುತ್ತಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಇದೆ ಹಾಗಾಗಿ ನಾನು ನನ್ನ ಅವಾರ್ಡನ್ನು ವಾಪಾಸು ಮಾಡುತ್ತೇನೆ ಎಂದು ಹೇಳಿಕೆ ನೀಡಿ ದೇಶದ ಮಾನ ಹರಾಜು ಹಾಕುವ ಕೆಲಸ ಮಾಡುತ್ತಿದ್ದಾರೆ. ಕೇವಲ ಮೂವರು ವಿಚಾರವಾದಿಗಳ ಹತ್ಯೆ ನಡೆದ ಕಾರಣಕ್ಕೆ ದೇಶದಲ್ಲಿ ಅಸಹಿಷ್ಣುತೆಇದೆ ಎನ್ನುವವರು ಕೇರಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 267 ಸ್ವಯಂ ಸೇವಕರನ್ನು ಈವರೆಗೆ ಹತ್ಯೆ ಮಾಡಿದ ಬಗ್ಗೆ ಯಾಕೆ ದನಿ ಎತ್ತುವುದಿಲ್ಲ.? ಅದೇ ಕಮ್ಯುನಿಷ್ಟ್ ಪಕ್ಷದ ಸಮರ್ಥಕರಾಗಿರುವ ಪ್ರಕಾಶ್ ರೈ ಅವರಿಗೆ ಅಸಹಿಷ್ಣುತೆ ಬಗ್ಗೆ ಮಾತನಾಡುವ ಅಧಿಕಾರವಿದೆಯೇ..? ಓರ್ವ ನಟನಾಗಿ ಇಡೀ ಸಮಾಜವೇ ಒಪ್ಪುವ ರೀತಿಯಲ್ಲಿ ರಾಜಕೀಯಾತೀತವಾಗಿ ಬದುಕಬೇಕಿದ್ದ ಪ್ರಕಾಶ್ ರೈ ರಾಜಕೀಯ ಪಕ್ಷವೊಂದರ ಬಾಡಿಗೆ ಭಾಷಣಕಾರನಂತೆ ವರ್ತಿಸುತ್ತಿದ್ದು, ಇದಕ್ಕಾಗಿ ರಾಜ್ಯ ಸರಕಾರ ಈಗಾಗಲೇ ಇವರಿಗೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ. ಇವರನ್ನು ಕರ್ನಾಟಕ ಸರಕಾರ ವನ್ಯಜೀವಿ ಸಂರಕ್ಷಣಾ ರಾಯಭಾರಿಯಾಗಿ ನೇಮಿಸಿದ್ದು, ಮುಂದಿನ ದಿನಗಳಲ್ಲಿ ಮೋದಿಯನ್ನು ಬೈದ ಘನಕಾರ್ಯಕ್ಕೆ ಸಿದ್ದರಾಮಯ್ಯ ಸರಕಾರ ಇನ್ನಷ್ಟು ಪ್ರಶಸ್ತಿಗಳನ್ನು ನೀಡಿ ಉತ್ತೇಜಿಸಬಹುದು.

ಇಂತಹ ಹೆಸರಿನ ಹಪಹಪಿ ಇರುವ, ಪ್ರಶಸ್ತಿಗಳ ಹುಚ್ಚಿರುವ ಪ್ರಕಾಶ್ ರೈಗೆ ಪ್ರತಿಷ್ಟಿತ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ಯಾವುದೇ ಕಾರಣಕ್ಕೂ ನೀಡಬಾರದು. ಕಾವೇರಿ ವಿಚಾರ ಬಂದಾಗ ತಮಿಳರ ಪರವಾಗಿ ನಿಲ್ಲುವ ಈ ಪ್ರಕಾಶ್ ರೈ ತೆಲಂಗಾಣಕ್ಕೆ ಹೋಗಿ ಅಲ್ಲಿಯ ಒಂದು ಹಳ್ಳಿಯನ್ನು ದತ್ತು ಪಡೆದುಕೊಳ್ಳುತ್ತಾರೆ. ತಮಿಳು ರೈತರ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಾರೆ. ಆದರೆ ಕರ್ನಾಟಕದ ರೈತರ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದಾಗ ನಾನೊಬ್ಬ ಚಿತ್ರನಟ ನಾನು ರಾಜಕೀಯದಲ್ಲಿ ಮೂಗು ತೂರಿಸುವುದಿಲ್ಲ ಎಂದು ಹೇಳಿಕೆ ಕೊಡುತ್ತಾರೆ. ಕರ್ನಾಟಕದಲ್ಲಿ ಸುಮಾರು 18 ಹಿಂದೂ ಯುವಕರು ಮತಾಂಧ ಶಕ್ತಿಗಳಿಗೆ ಬಲಿಯಾಗಿದ್ದಾರೆ. ಆದರೆ ಆಗ ತಮಿಳುನಾಡಿನಲ್ಲಿ ತೆಪ್ಪಗೆ ಮಲಗಿದ್ದ ಈ ಪ್ರಕಾಶ್ ರೈ ಎಡಪಂಥೀಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಕೂಡಲೆ ಬೆಂಗಳೂರಿಗೆ ಓಡೋಡಿ ಬಂದು ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಾ ಕಾರಣ ನಿಂದಿಸುತ್ತಿದ್ದಾರೆ.

ಈ ರೀತಿಯ ಅವಕಾಶವಾದಿ,ಪೂರ್ವಾಗ್ರಹ ಪೀಡಿತ ಮನುಷ್ಯನಿಗೆ ಕಾರಂತರಂಥ ನಿಷ್ಟುರ,ಪ್ರಾಮಾಣಿಕ ಸಾಹಿತಿಯ ಹೆಸರಿನ ಪ್ರಶಸ್ತಿಯನ್ನು ಯಾವುದೇ ಕಾರಣಕ್ಕೂ ನೀಡ ಬಾರದು. ಕೂಡಲೆ ಈ ನಿರ್ಧಾರದಿಂದ ಸಮಿತಿ ಹಿಂದಕ್ಕೆ ಸರಿಯ ಬೇಕು. ಒಂದು ವೇಳೆ ಪ್ರಶಸ್ತಿ ನೀಡಲು ಮುಂದಾದರೆ ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ಆಯೋಜಿಸಲಾಗುವುದು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ತಡೆಯಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದು ಯಶ್‍ಪಾಲ್ ಸುವರ್ಣ ಅವರು ತಿಳಿಸಿದ್ದಾರೆ.


Spread the love

Exit mobile version