Home Mangalorean News Kannada News ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ ; ಕೋಟ ಶ್ರೀನಿವಾಸ...

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ ; ಕೋಟ ಶ್ರೀನಿವಾಸ ಪೂಜಾರಿ

Spread the love

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ ; ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಚಿತ್ರ ನಟ ಪ್ರಕಾಶ್ ರೈ ಅವರಿಗೆ ನೀಡುಲಾಗುವ ಡಾ. ಶಿವರಾಮ ಕಾರಂತ ಪ್ರಶಸ್ತಿ  ನೀಡುವ ವಿಚಾರದಲ್ಲಿ  ತನ್ನ ಯಾವುದೇ ಪಾತ್ರವಿಲ್ಲ. ಆಯ್ಕೆ ಪ್ರಕ್ರಿಯೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ನಟ ಪ್ರಕಾಶ್ ರೈ ಅವರಿಗೆ ಈ ಬಾರಿ ಕೋಟ ಶಿವರಾಮ ಕಾರಂತ ಹುಟ್ಟುರ ಪ್ರಶಸ್ತಿ ನೀಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನನ್ನ ಹೆಸರು ಉಲ್ಲೇಖಿಸಿರುವುದು ನನಗೆ ತುಂಬಾ ನೋವು ತಂದಿದೆ. ಡಾ. ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ನಾನು ಸೇರಿಲ್ಲ. ಹೀಗಾಗಿ ನನಗೂ ಪ್ರಶಸ್ತಿ ವಿಜೇತರ ಹೆಸರು ಅಂತಿಮಗೊಳಿಸುವ ಆಯ್ಕೆ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ. ಪ್ರಶಸ್ತಿಯವ ವಿಚಾರದಲ್ಲಿ ವಿನಾ ಕಾರಣ ನನ್ನ ಹೆಸರನ್ನು ಎಳೆದು ತಂದು ವಿವಾದ ಎಬ್ಬಸಿರುವುದು ನನಗೆ ನೋವಾಗಿದೆ. ಅ. 10 ರಂದು ಕೋಟದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಜಿಲ್ಲಾ ಬಿಜೆಪಿಯ ಹಿರಿಯ ನಾಯಕರು ಹಾಗೂ ರಾಜ್ಯದ ನನ್ನ ಮುಖಂಡರೊಂದಿಗ ಚರ್ಚಿಸಿ ಅವರ ಆದೇಶದಂತೆ ನಡೆದು ಕೊಳ್ಳುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಡಾ.ಶಿವರಾಮ ಕಾರಂತ ಟ್ರಸ್ಟ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಈ ಬಾರಿಯ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಖ್ಯಾತ ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿತ್ತು.

ಇತ್ತೀಚೆಗಷ್ಟೇ, ಗೌರಿ ಲಂಕೇಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಹೇಳಿಕೆ ನೀಡುವ ಮೂಲಕ ಪ್ರಕಾಶ್ ರೈ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ದರಿಂದ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಈ ಪ್ರಶಸ್ತಿ ಕೂಡಬಾರದೆಂದು   ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

ಕಾರಂತರು ನಮ್ಮೂರಿನ ಹೆಮ್ಮೆ ಅವರು ಸದಾ ಪರಿಸರ, ಸಮಾಜದ ಬಗ್ಗೆ ಧ್ವನಿ ಎತ್ತುತ್ತಿದ್ದರು. ಅಂಥವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ ಪ್ರಕಾಶ್ ರೈ ಓರ್ವ ಉತ್ತಮ ಆಯ್ಕೆಯಲ್ಲ. ಪ್ರಕಾಶ್ ರೈ ನಾಡಿನ ಜೀವಂತ ಸಮಸ್ಯೆಗಳಾದ ಕಾವೇರಿ, ಕಸ್ತೂರಿ ರಂಗನ್ ವರದಿ ಜಾರಿ ವಿಚಾರ, ನೇತ್ರಾವತಿ ವಿಚಾರದಲ್ಲಿ ಮಾತನಾಡಿದವರಲ್ಲ. ಹಾಗಿದ್ದ ಮೇಲೂ ಅವರನ್ನು ಪ್ರಶಸ್ತಿಗೆ ಯಾಕೆ ಆಯ್ಕೆ ಮಾಡಲಾಯಿತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗಿತ್ತು.

ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

ಕುಂದಾಪುರ ತಾಲೂಕಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರೈ ಆಯ್ಕೆಯನ್ನು ವಿರೋಧ ಮಾಡೋದು ಸರಿಯಲ್ಲ. ಕೋಟತಟ್ಟು ಗ್ರಾ.ಪಂ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಕೊಡುವ ಪ್ರಶಸ್ತಿ ಇದು. ಕಳೆದ 13 ವರ್ಷಗಳಿಂದ ಕೊಡುತ್ತಿರುವ ಪ್ರಶಸ್ತಿ ಈ ಬಾರಿ ನಟ ಪ್ರಕಾಶ್ ರೈಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಕಾಶ್ ರೈ ಈ ಪ್ರಶಸ್ತಿಗೆ ನಿಜವಾಗಿಯೂ ಅರ್ಹರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವೈಯುಕ್ತಿಕ ಹೇಳಿಕೆಗೂ ಪ್ರಶಸ್ತಿಗೂ ಸಂಬಂಧವಿಲ್ಲ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಅವರು ಹೇಳಿದರು.

ಪ್ರಶಸ್ತಿ ಆಯ್ಕೆಗೆ ಐದು ಮಂದಿ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಆಯ್ಕೆ ಮಂಡಳಿ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸಾಧಕರಿಗೆ ನೀಡುತ್ತಾ ಬಂದಂತೆಯೇ ಈ ಬಾರಿ ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ. ಕಾರಂತರ ಹೆಸರಿಗೆ ಚ್ಯುತಿ ಬರಬಾರದು. ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ರಾಜಕೀಯ ಬೇಡ ಎಂದಿದ್ದಾರೆ.

ಈ ಹಿಂದೆ ಕಾರಂತ ಪ್ರಶಸ್ತಿಗೆ ಪಾತ್ರರಾದವರು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪತ್ರಕರ್ತ ರವಿ ಬೆಳಗೆರೆ, ಸಾಹಿತಿ ಜಯಂತ್ ಕಾಯ್ಕಿಣಿ, ದಿ. ರಾಮಚಂದ್ರ ಚಿಟ್ಟಾಣಿ, ಡಾ. ಬಿ.ಎಮ್ ಹೆಗ್ಡೆ, ಸಾಲುಮರದ ತಿಮ್ಮಕ್ಕ, ಡಾ. ಎಂ ಮೋಹನ್ ಆಳ್ವ, ನಾಟಕಕಾರ ಸದಾನಂದ ಸುವರ್ಣ, ಬಿ. ಜಯಶ್ರೀ, ಗಿರೀಶ್ ಕಾಸರವಳ್ಳಿ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಕೆ.ಆರ್ ಹಂದೆ ಇವರುಗಳಿಗೆ ಕಾರಂತ ಹುಟ್ಟೂರ ಸನ್ಮಾನ ಲಭಿಸಿತ್ತು. ಈ ಬಾರಿ ನಟ ಪ್ರಕಾಶ್ ರೈ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.

 


Spread the love

Exit mobile version