ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಟ್ವೀಟ್: ಸಂಸದ ಪ್ರತಾಪ ಸಿಂಹ ಪೊಲೀಸ್ ವಶಕ್ಕೆ, ವಿಶೇಷ ನ್ಯಾಯಾಲಯ ಆದೇಶ
ಬೆಂಗಳೂರು: ಚಲನಚಿತ್ರ ನಟ ಪ್ರಕಾಶ್ ರೈ ವಿರುದ್ಧ ಟ್ಟಿಟರ್ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಅವರನ್ನು ಪೊಲೀಸ್ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಶುಕ್ರವಾರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾದ ಪ್ರತಾಪ್ ಸಿಂಹ ಅವರನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಕಳೆದ ಬಾರಿಯ ವಿಚಾರಣೆಗೆ ಪ್ರತಾಪ ಸಿಂಹ ಹಾಗೂ ಅವರ ವಕೀಲರು ಗೈರು ಹಾಜರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್, ಆರೋಪಿಯನ್ನು ಜಾಮೀನು ರಹಿತ ವಾರಂಟ್ ಅಡಿಯಲ್ಲಿ ಕೋರ್ಟ್ಗೆ ಹಾಜರುಪಡಿಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಪ್ರತಾಪ ಸಿಂಹ ಇಂದು ಕೋರ್ಟ್ ಗೆ ಹಾಜರಾಗಿದ್ದರು ಮತ್ತು ವಾರಂಟ್ ಹಿಂಪಡೆಯುವಂತೆ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ವಿ.ಪಾಟೀಲ ಅವರು ಪ್ರತಾಪ ಸಿಂಹ ಅವರನ್ನು ಪೊಲೀಸರು ಸ್ವಲ್ಪ ಹೊತ್ತು ವಶದಲ್ಲಿ ಇರುವಂತೆ ನಿರ್ದೇಶಿಸಿದರು.