ಪ್ರಕೃತಿ ವಿಕೋಪ: 10 ದಿನಗಳಲ್ಲಿ ಪರಿಹಾರ: ಸಚಿವ ಯು.ಟಿ.ಖಾದರ್
ಮಂಗಳೂರು: ಪ್ರಕೃತಿ ವಿಕೋಪದಿಂದಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 23 ಮನೆಗಳು ಸಂಪೂರ್ಣ ಹಾಗೂ ಭಾಗಶಃ ಹಾನಿಯಾಗಿದ್ದು, ಆ ಎಲ್ಲಾ ಮನೆಗಳ ಕುಟುಂಬಿಕರಿಗೆ 10 ದಿನಗಳೊಳಗಾಗಿ ಪರಿಹಾರ ವಿತರಿಸಲು ಅಧಿಕಾರಿಗಳಿಗೆ, ಸಂಬಂಧಿಸಿದ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಗಾಳಿ ಮಳೆಯಿಂದ ಸಂಪೂರ್ಣ ಹಾನಿಗೀಡಾದ ಮಂಗಳೂರು ಕ್ಷೇತ್ರದ ವಿವಿದೆಡೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.
ಸಚಿವರು ಹಾನಿಗೀಡಾದ ಸುಭಾ಼ಶ್ ನಗರದ ಇಸ್ಮಾಯಿಲ್, ಮುನ್ನೂರು ಮಜಲ್ ತೋಟದಲ್ಲಿ ಹಾನಿಗೀಡಾದ ಸುಂದರ ಹಾಗೂ ಲೂಸಿ ಅವರ ಮನೆಯನ್ನು ಸಂದರ್ಶಿಸಿ ಶೀಘ್ರ ಪರಿಹಾರದ ಭರವಸೆ ನೀಡಿದರು.
ಬಳಿಕ ಅಂಬ್ಲಮೊಗರು-ಮುನ್ನೂರು ಸೇತುವೆ ನಿರ್ಮಾಣದ ಕಾಮಗಾರಿ ವೀಕ್ಷಿಸಿ ಅದಕ್ಕೆ ಪರ್ಯಾಯವಾಗಿ ನಿರ್ಮಿಸಿದ ರಸ್ತೆಯ ತುಂಬಾ ಮಳೆ ನೀರು ತುಂಬಿ ಹಾನಿಯಾಗಿದ್ದು, ಅದನ್ನು ದುರಸ್ತಿಗೊಳಿಸಲು ಸ್ಥಳೀಯ ಗ್ರಾ.ಪಂ.ಗೆ ಸೂಚಿಸಿದರು.
ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ರಫೀಕ್ ಮದಕ, ಸದಸ್ಯರಾದ ಇಕ್ಬಾಲ್, ಶಶಿಪ್ರಭಾ ಶೆಟ್ಟಿ, ದಯಾನಂದ ಶೆಟ್ಟಿ, ಜಾನ್ ಇವರು ಸೇರಿ ಪರ್ಯಾಯ ರಸ್ತೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಸೇತುವೆ ಪೂರ್ಣವಾಗುವ ತನಕ ಪರ್ಯಾಯ ರಸ್ತೆ ಹಾನಿಯಾದರೆ ದುರಸ್ತಿಗೊಳಿಸಿ ಯಥಾಸ್ಥಿತಿಯಲ್ಲಿಡುವಂತೆ ಸಚಿವ ಯು.ಟಿ.ಖಾದರ್ ಸೇತವೆ ಗುತ್ತಿಗೆದಾರರಿಗೆ ಸೂಚಿಸಿದರು.
ವಿವಿಧೆಡೆ ಭೇಟಿಯಿತ್ತ ಸಚಿವ ಯು.ಟಿ.ಖಾದರ್
ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾದ ಯು.ಟಿ.ಖಾದರ್ ಅವರು ಭಾನುವಾರ ದ.ಕ.ಜಿಲ್ಲೆಯ ವಿವಿಧ ಕಡೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.
ಪ್ರಾರಂಭದಲ್ಲಿ ಬೆಳಿಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಸಚಿವರು, ಬಳಿಕ ಸಯ್ಯಿದ್ ಉಜಿರೆ ತಂಙಳ್ ಅವರ ಸಂಸ್ಥೆ ಮಲ್’ಜಅ ಸಂಸ್ಥೆಯನ್ನು ಸಂದರ್ಶಿಸಿದರು. ಧರ್ಮಸ್ಥಳದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರವನ್ನು ಯು.ಟಿ.ಖಾದರ್ ಸಂದರ್ಶಿಸಿದರು.
ಈ ಸಂದರ್ಭ ಸಚಿವರ ಜೊತೆ ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಬಳಿಕ ಸಚಿವರು, ಮಾಜಿ ಸಚಿವ ಬಿ. ರಮಾನಾಥ ರೈ, ಮೂಡಬಿದಿರೆ ಮಾಜಿ ಶಾಸಕ ಅಭಯಚಂದ್ರ ಜೈನ್, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರನ್ನು ಅವರವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.