ಪ್ರಜ್ವಲ್ ರೇವಣ್ಣ ಪ್ರಕರಣ: ಡಿಕೆಶಿಯದ್ದಾಗಲಿ, ನನ್ನದಾಗಲಿ ಪಾತ್ರವಿಲ್ಲ:ಸಿದ್ದರಾಮಯ್ಯ
ಮೈಸೂರು: ‘ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದಾಗಲಿ ಅಥವಾ ನನ್ನದಾಗಲಿ ಪಾತ್ರವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಎಸ್‌ಐಟಿಗೆ ವಹಿಸಿದ್ದೇವೆ.
ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ಪ್ರಕಾರ ತನಿಖೆ ಮಾಡಿ ವರದಿ ಸಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.
ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಾಯ ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಆಗ, ಬಿಜೆಪಿಯವರು ಸಿಬಿಐ ಅನ್ನು ಕರಪ್ಶನ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುತ್ತಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಚೋರ್ ಬಚಾವ್ ಸಂಸ್ಥೆ ಎಂದು ಕರೆಯುತ್ತಿದ್ದರು. ಈಗ ಇದ್ದಕ್ಕಿದ್ದಂತೆಯೇ ಅವರೆಲ್ಲರಿಗೂ ಸಿಬಿಐ ಬಗ್ಗೆ ಪ್ರೀತಿ ಬಂದುಬಿಟ್ಟಿದೆ. ಇದರ ಅರ್ಥವೇನು?’ ಎಂದು ತಿರುಗೇಟು ನೀಡಿದರು.
‘ಎಸ್‌ಐಟಿಯವರು ತನಿಖೆ ನಡೆಸುತ್ತಿದ್ದಾರೆ. ಅದರಲ್ಲಿ ನಮ್ಮ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಸರಿಯಾದ ದಾರಿಯಲ್ಲಿ ತನಿಖೆ ಮಾಡುತ್ತಾರೆಂಬ ವಿಶ್ವಾಸವಿದೆ. ಕಾನೂನಿಗೆ ವಿರುದ್ಧವಾಗಿ ಮಾಡುವಂತೆ ಪೊಲೀಸರಿಗೆ ಹೇಳಿಲ್ಲ. ಹಿಂದೆಯೂ ಹೇಳಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದ ವ್ಯಾಪ್ತಿಗೆ ಬರುವ ಪ್ರಕರಣ ಇದೇನಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವೇ? ಅಪರಾಧ ಪ್ರಕರಣಗಳನ್ನು ತನಿಖೆ ನಡೆಸುವವರಾರು?’ ಎಂದು ಕೇಳಿದರು.
‘ನಾವು ಡಿ.ಕೆ. ರವಿ, ಲಾಟರಿ, ಜಾರ್ಜ್, ಪರೇಶ್ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ಅವೆಲ್ಲವೂ ಏನಾದವು? ಒಂದಾದರೂ ಶಿಕ್ಷೆ ಆಗಿದೆಯೇ? ಹಾಗೆಂದು ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಎನ್ನುವುದಿಲ್ಲ. ಆದರೆ, ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ’ ಎಂದು ಪ್ರತಿಕ್ರಿಯಿಸಿದರು.
‘ಈ ಪ್ರಕರಣಕ್ಕೆ ಅಂತರರಾಷ್ಟ್ರೀಯ ಸಂರ್ಪಕ ಇದೆ ಎಂಬುದೆಲ್ಲಾ ನಿಜವಲ್ಲ. ಸಿಬಿಐಗೆ ವಹಿಸಲಿ ಎನ್ನುವ ಕಾರಣಕ್ಕೆ ವಿರೋಧ ಪಕ್ಷದವರು ಆ ರೀತಿ ಹೇಳುತ್ತಿದ್ದಾರಷ್ಟೆ’ ಎನ್ನುವ ಮೂಲಕ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.
‘ಕಾನೂನು ಪ್ರಕಾರ ಎಸ್‌ಐಟಿ ರಚಿಸಿದ್ದೇವೆ. ಅದು ಸತ್ಯಾಸತ್ಯತೆ ಪತ್ತೆ ಹಚ್ಚಲಿದೆ. ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಬಂಧನ ಪ್ರಕರಣದಲ್ಲಿ ಯಾವ ಹಸ್ತಕ್ಷೇಪವೂ ಇಲ್ಲ. ಏನೂ ಅಪರಾಧ ಮಾಡಿಲ್ಲದಿದ್ದ ಮೇಲೆ ಅವರೇಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು, ನ್ಯಾಯಾಲಯವೇಕೆ ಜಾಮೀನು ಕೊಡಲಿಲ್ಲ, ಅವರ ಅರ್ಜಿ ತಿರಸ್ಕೃತಗೊಂಡಿದ್ದೇಕೆ?’ ಎಂದು ಕೇಳಿದರು.
‘ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಯು 5ನೇ ಸ್ಥಾನದೊಳಗೆ ಬರಬೇಕು ಎಂದು ಅಧಿಕಾರಿಗಳಿಗೆ ಗುರಿ ನೀಡಿದ್ದೆ. ಆದರೆ, ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸುಧಾರಿಸಿಕೊಳ್ಳಬೇಕಾಗುತ್ತದೆ’ ಎಂದರು.
‘ನಾನು 1994ರಲ್ಲಿ ವಿತ್ತ ಸಚಿವ ಆಗಿದ್ದಾಗ, ಸಾರಾಯಿ ಅಂಗಡಿ ಬೇಡ, ಹೆಂಡದಂಗಡಿ ಬೇಡ ವಸತಿ ಶಾಲೆ ಬೇಕು ಎನ್ನುವುದು ದಸಂಸದವರ ಬೇಡಿಕೆ ಹಾಗೂ ಘೋಷಣೆಯಾಗಿತ್ತು. ನಾನು ಅವರ ಸಂಪರ್ಕದಲ್ಲಿ ಇದ್ದಿದ್ದರಿಂದ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದವನಾಗಿದ್ದರಿಂದ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಕಾರಣದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತೆರೆಯಲಾಯಿತು’ ಎಂದು ನೆನೆದರು.
‘ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ. ಇಂದು ಬಹುತೇಕ ಪ್ರತಿ ಹೋಬಳಿಗೊಂದು ವಸತಿ ಶಾಲೆ ಇದೆ. 900ಕ್ಕೂ ಹೆಚ್ಚು ಇವೆ. ಅಂತಹ ಶಾಲೆಯ ವಿದ್ಯಾರ್ಥಿನಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ. ಎಲ್ಲ ಮಕ್ಕಳೂ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಬೇಕು ಎನ್ನುವುದು ನನ್ನ ಆಶಯ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಹಾಗೂ ನಗರ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಪಾಲ್ಗೊಂಡಿದ್ದರು.