ಪ್ರತಿಫಲಾಪೇಕ್ಷೆಯಿಲ್ಲದೆ ಸಾರ್ವಜನಿಕರ ಸೇವೆಯಲ್ಲಿ ಕೋರೊನಾ ಸೈನಿಕರು
ಬ್ರಹ್ಮಾವರದಲ್ಲಿನ ಮನೆಯಲ್ಲಿ ಇಬ್ಬರೇ ಇರುವ ವೃಧ್ದ ದಂಪತಿ, ಲಾಕ್ ಡೌನ್ ಕಾರಣ ಅಂಗಡಿಗಳು ಕ್ಲೋಸ್, ಮನೆಯಿಂದ ಹೊರ ಹೋಗುವ ಹಾಗಿಲ್ಲ, ಗಂಡನಿಗೆ ಸಕ್ಕರೆ ಕಾಯಿಲೆ ಜೊತೆಗೆ ಹೃದಯ ಸಂಬಂದಿ ಸಮಸ್ಯೆ, ದಂಪತಿಗೆ ಬ್ರೆಡ್ ಮತ್ತು ರಸ್ಕ್ ಅವಶ್ಯಕತೆಯಿದೆ, ಈ ಬಗ್ಗೆ ಸಮಸ್ಯೆ ಕೋರಿದ ದಂಪತಿಗೆ 20 ನಿಮಿಷದಲ್ಲಿ ಬ್ರೆಡ್ ಮತ್ತು ರಸ್ಕ್ ನೊಂದಿಗೆ ಅವರು ಕೋರಿದ ಇತರೆ ಅಗತ್ಯ ವಸ್ತುಗಳು ಯುವತಿಯೊಬ್ಬರಿಂದ ಪೂರೈಕೆಯಾಗುತ್ತದೆ.
ಕಾರ್ಕಳದ ಗ್ರಾಮೀಣ ಪ್ರದೇಶದಲ್ಲಿನ ರೋಗಿಗೆ ಅಗತ್ಯ ಔಷಧಿಗಳು ತುರ್ತಾಗಿ ಬೇಕಿದೆ, ಆ ಔಷದಗಳು ಉಡುಪಿಯಲ್ಲಿ ಮಾತ್ರ ದೊರೆಯುವುದು, ಮನೆಯಲ್ಲಿ ಉಡುಪಿಗೆ ಹೋಗಿ ಔಷಧ ತರುವ ವ್ಯಕ್ತಿಗಳು ಯಾರೂ ಇಲ್ಲ, ರೋಗಿಯ ಸಮಸ್ಯೆ ಅರಿತ ಯುವಕನಿಂದ , ಅವರಿಗೆ ಸಕಾಲದಲ್ಲಿ ಅಗತ್ಯ ಔಷಧಗಳು ಪೂರೈಕೆಯಾಗುತ್ತವೆ..
ದಿನಸಿ ವಸ್ತುಗಳು ಮತ್ತು ಪಡಿತರ ವಿತರಣೆ ನಡೆಯುತ್ತಿದೆ, ಸರದಿಯಲ್ಲಿ ನಿಂತಿರುವ ಸಾರ್ವಜನಿಕರಿಲ್ಲಿ ಸಾಮಾಜಿಕ ಅಂತರ ಎಂಬುದೇ ಇಲ್ಲ , ಆದರೆ ಅಲ್ಲಿಗೆ ಆಗಮಿಸುವ ಒಬ್ಬ ವ್ಯಕ್ತಿ ಸರದಿಯಲ್ಲಿದ್ದ ಎಲ್ಲರಿಗೂ ಕೊರೋನಾ ಕುರಿತು ಜಾಗೃತಿ ಮೂಡಿಸಿ, ಸಾಮಾಜಿಕ ಅಂತರದ ಮಹತ್ವ ತಿಳಿಸಿದ ನಂತರ , ಪರಸ್ಪರ ನಿಗಧಿತ ಅಂತರದಲ್ಲಿ ನಿಂತುಕೊಂಡು ದಿನಸಿ ವಸ್ತುಗಳು ಮತ್ತು ಪಡಿತರ ವಿತರಣೆ ನಡೆಯುತ್ತದೆ…
ಕೋರೋನಾ ರೋಗಿಗಳ ಬಗ್ಗೆ, ಶಂಕಿತರ ಬಗ್ಗೆ ಸಾಮಾಜಿಕ ಮಾದ್ಯಮದಲ್ಲಿ ಅತಿರೇಕ ಎನ್ನುವ ಸುದ್ದಿಗಳು ಬಂದು ಸಾರ್ವಜನಿಕರು ಅದನ್ನು ನಿಜವೆಂದು ನಂಬುವ ಸಂದರ್ಭದಲ್ಲಿ, ಯುವಕನೊಬ್ಬ ಅದೇ ಸೋಷಿಯಲ್ ಮಾಧ್ಯಮದಲ್ಲಿ , ಖಚಿತ ಸಾಕ್ಷ್ಯಾದಾರಗಳ ಮೂಲಕ ಆ ಸುದ್ದಿಗಳು ಸುಳ್ಳು ಎಂದು ತಿಳಿಸಿ, ಸಾರ್ವಜನಿಕರಲ್ಲಿನ ಭೀತಿಯನ್ನು ನಿವಾರಿಸುತ್ತಾನೆ….
ಈ ಎಲ್ಲಾ ಕಾರ್ಯಗಳನ್ನು ಮಾಡುತ್ತಿರುವುದು ಯಾವುದೋ ಒಂದು ಸ್ವಯಂ ಸೇವಾ ಸಂಘಟನೆಯಲ್ಲ, ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಕಾರ್ಮಿಕ ತರಬೇತಿ ಸಂಸ್ಥೆ, ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ರಚಿಸಲಾಗಿರುವ ಕೊರೋನ ಸೈನಿಕರ ತಂಡದ , ಉಡುಪಿ ಜಿಲ್ಲೆಯ ಕೋರೊನಾ ಸೈನಿಕರು ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಈ ಕಾರ್ಯದಲ್ಲಿ ತೊಡಗಿದ್ದಾರೆ…
ರಾಜ್ಯದಲ್ಲಿ ಸುಮಾರು 20000 ಕ್ಕೂ ಅಧಿಕ ಮಂದಿ ಕೋರೊನಾ ಸೈನಿಕರಿಗೆ ಕಾರ್ಯ ನಿರ್ವಹಿಸಲು ನೊಂದಾಯಿಸಿಕೊಂಡಿದ್ದು, ಉಡುಪಿ ಜಲ್ಲೆಯಲ್ಲಿ 260 ಕ್ಕೂ ಅಧಿಕ ಮಂದಿ ಕೊರೋನಾ ಸೈನಿಕರಾಗಿ ನೊಂದಾಯಿಸಿಕೊಂಡಿದ್ದು, ಇದರಲ್ಲಿ ವೈದ್ಯರು, ಇಂಜಿನಿಯರ್ಗಳು, ಟೆಕ್ಕಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗಗಳ ಪ್ರತಿನಿಧಿಗಳಿದ್ದು , 7 ತಾಲೂಕುಗಳಲ್ಲಿ ಪ್ರತ್ಯೇಕ ವಾಟ್ಸ್ ಅಫ್ ಗ್ರೂಪ್ ಗಳನ್ನು ಮಾಡಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಬರುವ ಕೋರೋನಾ ಕುರಿತು ಸಮಸ್ಯೆಗಳಿಗೆ ಅಗತ್ಯ ನೆರವು ನೀಡುತ್ತಿದ್ದಾರೆ.
ಪ್ರಮುಖವಾಗಿ ಈ ಕೋರೋನಾ ಸೈನಿಕರು, ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಕೊರೋನಾ ಕುರಿತಂತೆ ಯಾವುದೇ ಸುಳ್ಳು ಮತು ಅತಿರೇಕದ ಸುದ್ದಿಗಳು ಬಂದಲ್ಲಿ ಅದನ್ನು ಬೆಂಗಳೂರಿನಲ್ಲಿನ ಕೋರೊನಾ ವಾರಿಯರ್ಸ್ ನ ಪ್ರಮುಖರಿಗೆ ತಲುಪಿಸುತ್ತಾರೆ ಅಲ್ಲಿನ ಪ್ರಮುಖರು ಸದ್ರಿ ಸುದ್ದಿಗಳ ಕುರಿತು ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ಈ ಬಗ್ಗೆ ಸ್ಪಷ್ಟನೆಯನ್ನು ನೀಡಲಿದ್ದು, ಈ ಸ್ಪಷ್ಟನೆಯನ್ನು ಸುಳ್ಳು ಸುದ್ದಿ ಸೃಷ್ಠಿಯಾದ ಮಾಧ್ಯಮದ ಮೂಲಕವೇ ಸಾರ್ವಜನಿಕರಿಗೆ ನಿಜವಾದ ಮಾಹಿತಿ ನೀಡುವ ಕೆಲಸವನ್ನು ಕೊರೋನ ಸೈನಿಕರ ತಂಡ ಮಾಡುತ್ತಿದೆ.
ಉಡುಪಿ ಕಾರ್ಮಿಕ ಇಲಾಖೆ ಮತು ರೆಡ್ಕ್ರಾಸ್ ವತಿಯಿಂದ ಉಡುಪಿ ಜಿಲ್ಲೆಯಲ್ಲಿನ ಸುಮಾರು 15000 ಅಸಂಘಟಿತ ಕಾರ್ಮಿಕರಿಗೆ ಕೊರೋನ ನಿಯಂತ್ರಣ ಕ್ರಮವಾಗಿ ಸೋಪುಗಳು, ಮಾಸ್ಕ್ ಗಳು ಮತ್ತು ಮಾಹಿತಿ ಕರಪತ್ರಗಳನ್ನು ವಿತರಿಸುವಲ್ಲಿ ಉಡುಪಿ ಜಿಲ್ಲೆಯ ಕೊರೋನಾ ಸೈನಿಕರು ತಮ್ಮ ಸಂಪೂರ್ಣ ನೆರವು ನೀಡಿದ್ದಾರೆ.
ದೇಶ ಕಾಯವ ಯೋಧರಂತೆ , ಯಾವುದೇ ಸಮಯದಲ್ಲಿ , ಸಾರ್ವಜನಿಕರಿಗೆ ತಮ್ಮಿಂದ ಸಹಾಯ ನೀಡಲು ಸಿದ್ದವಾಗಿರುವ ಉಡುಪಿ ಜಿಲ್ಲೆಯ ಕೋರೊನಾ ಸೈನಿಕರು, ಸಾರ್ವಜನಿಕರಿಂದ ಬರುವ ಸಮಸ್ಯೆಗಳಿಗೆ ಶೀಘ್ರದಲ್ಲಿ ಸ್ಪಂದಿಸುತ್ತಿದ್ದು, ಉಡುಪಿ ಜಿಲ್ಲೆಯ ಪ್ರಮುಖ ಸಂಘಟಕರಾಗಿ ಸುಕೇತ್ ಶೆಟ್ಟಿ (ಮೊ.8310155994) ಕಾರ್ಯ ನಿರ್ವಹಿಸುತ್ತಿದ್ದು, ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಬೆಂಗಳೂರಿನಲ್ಲಿ ಸಹನಾ (9164448287 ) ಕಾರ್ಯ ನಿರ್ವಹಿಸುತ್ತಿದ್ದು, ಉಡುಪಿ ಎಲ್ಲಾ ತಾಲೂಕುಗಳಲ್ಲಿನ ಕೋರೊನಾ ಸೈನಿಕರು ಪರಸ್ಪರ ಸಮನ್ವಯದಿಂದ , ಜಿಲ್ಲೆಯ ಯಾವುದೇ ಭಾಗದಿಂದ ಬರುವ ಸಮಸ್ಯೆಗಳಿಗೆ ಸೂಕ್ತ ನೆರವು ನೀಡುತ್ತಿದ್ದು , ವೈದ್ಯಕೀಯ ತುರ್ತು ಪರಿಸ್ಥಿತಿಯ ಈ ಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದಾರೆ…
ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋರೋನ ಸೈನಿಕ ತಂಡ , ಫೇಸ್ಬುಕ್, ಟ್ವಿಟರ್, ವಾಟ್ಸಾಪ್, ಟೆಲಿಗ್ರಾಂ ನಲ್ಲಿ ಸಹಾಯ ಕೋರಿ ಬರುವ ರಾಜ್ಯದ ಎಲ್ಲಾ ಭಾಗಗಳ ಸಾರ್ವಜನಿಕರ ಸಮಸ್ಯೆಗಳನ್ನು , ಸಂಬಂದಪಟ್ಟ ತಾಲೂಕಿನ ಕೊರೋನಾ ಸೈನಿಕರಿಗೆ ತಲುಪಿಸುವ ಮೂಲಕ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎನ್ನುತ್ತಾರೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಹನಾ..
ಕೋರೊನಾ ಕುರಿತು ಕಾರ್ಯಗಳು ಮಾತ್ರವಲ್ಲದೇ ಜಿಲ್ಲಾಡಳಿತ ಸೂಚಿಸುವ ಇತರೇ ಯಾವುದೇ ಕಾರ್ಯಗಳನ್ನು ನಿರ್ವಹಿಸಲು ಕೋರೊನಾ ಸೈನಿಕರು ಸಿದ್ದವಾಗಿದೆ ಎನ್ನುವ ಉಡುಪಿ ಜಿಲ್ಲಾ ಸಂಘಟಕ ಸುಕೇತ್ ಶೆಟ್ಟಿ, ಜಿಲ್ಲೆಯ ಯಾವುದೇ ಭಾಗದ ಸಾರ್ವಜನಿಕರು ಯಾವುದೇ ಸಮಯದಲ್ಲಿ ಸಂಪರ್ಕಿಸಿದಲ್ಲಿ , ಅವರ ಸಮಸ್ಯೆಗೆ ಅಗತ್ಯ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಮ್ಮ ತಂಡ ಸದಾ ಸಿದ್ದವಿದೆ ಎನ್ನುತ್ತಾರೆ….