Home Mangalorean News Kannada News ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿ ಕೊಂಡಿರುವ ಶ್ರೀ ಮಾರ್ಕ್ ಡೆನಿಸ್ ಡಿ’ಸೋಜ

ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿ ಕೊಂಡಿರುವ ಶ್ರೀ ಮಾರ್ಕ್ ಡೆನಿಸ್ ಡಿ’ಸೋಜ

Spread the love

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನಾಲ್ಕು ದಶಕಗಳಿಂದ ಉಧ್ಯಮಿಯಾಗಿ, ಸಮಾಜ ಸೇವಕರಾಗಿ, ಶಾರ್ಜಾ ಕರ್ನಾಟಕ ಸಂಘದ ಪೋಷಕರಾಗಿ ಜನ ಮಾನಸದಲ್ಲಿ ಗೌರವದ ಸ್ಥಾನ ಪಡೆದಿರುವ ಶ್ರೀ ಮಾರ್ಕ ಡೆನಿಸ್ ಡಿ’ಸೋಜಾ ರವರ ಸಾಧನೆಗೆ 2015 ಅಗಸ್ಟ್ 9ನೇ ತಾರೀಕು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಸ್ಟಿಸ್ ಡಾ| ರಾಮಜೋಯಿಸ್ ಮಾಜಿ ರಾಜ್ಯಪಾಲರು, ನಾಡೊಜ ಮಹೇಶ್ ಜೋಶಿ, ರಾಷ್ಟ್ರೀಯ ದೂರದರ್ಶನ ದೆಹಲಿ, ಅಡಿಶನಲ್ ಡೈರೆಕ್ಟರ್ ಜೆನರಲ್, ಶ್ರೀ ಜ್ಯೋತಿಪ್ರಕಾಶ್ ಮಿರ್ಜಿ, ನಿವೃತ್ತ ಪೋಲೀಸ್ ಕಮೀಶನರ್ ಬೆಂಗಳೂರು, ಡಾ| ಹೆಚ್. ಎಲ್, ಎನ್. ರಾವ್ ಸ್ಥಾಪಕ ಅಧ್ಯಕ್ಷರು ಆರ್ಯಭಟ ಕಲ್ಚರಲ್ ಫೌಂಡೇಶನ್ ಇವರುಗಳ ಸಮ್ಮುಖದಲ್ಲಿ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಶ್ರೀ ಮಾರ್ಕ್ ಡೆನಿಸ್ ಡಿ’ಸೋಜರವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇನ್ನಿತರ 57 ಮಂದಿಗೆ ಪ್ರಶಸ್ತಿ ಪ್ರಧಾನಿಸಲಾಯಿತು.

ಸ್ನೇಹ ಜೀವಿ ಮಾರ್ಕ್ ಡೆನಿಸ್ ಡಿಸೋಜಾ ಹೆಜ್ಜೆ ಗುರುತು…..

ಕರ್ನಾಟಕದ ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಮೂಡಬಿದರೆಯ ಬಳಿ ಕಲ್ಲಮುಂಡ್ಕುರ್ ನಲ್ಲಿ ಶ್ರೀ ಸಲ್ವಾದರ್ ಮತ್ತು ಶ್ರೀಮತಿ ಥೆರೆಸಾ ದಂಪತಿಗಳ ಆರು ಮಕ್ಕಳಲ್ಲಿ ಕಿರಿಯ ಮಗನಾಗಿ ಜನಿಸಿದವರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಲಿಟ್ಲ್ ಫ್ಲವರ್ ಜೀಸಸ್ ಎಲಿಮೆಂಟರಿ ಶಾಲೆಯಲ್ಲಿ ಮುಗಿಸಿ ಪ್ರೌಡ ಶಿಕ್ಷಣ ಐಕಳದ ಪೊಂಪೈ ಪ್ರೌಢಶಾಲೆಯಲ್ಲಿ ಮುಗಿಸಿದರು. ನಂತರದ ಶಿಕ್ಷಣ ಮುಂಬೈನ ಬ್ರಿಟೀಷ್ ಇನಿಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಮೇಶಿನ್ ಶಾಪ್ ಇಂಜಿನಿಯರಿಂಗ್ ಮುಗಿಸಿದರು.

aryabhata-mark-dennis

1972 ರಲ್ಲಿ ಗಲ್ಫ್ ರಾಷ್ಟ್ರದತ್ತ ಪಯಣ. ಬಹರೈನ್ ನಲ್ಲಿ ಮತ್ತು ಭಾರತದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪಡೆದ ಹದಿನೆಂಟು ವರ್ಷಗಳ ಅಪಾರ ಅನುಭವದೊಂದಿಗೆ 1975 ರಲ್ಲಿ ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾದಲ್ಲಿ ತಮ್ಮ ಬದುಕಿನ ನೆಲೆಯನ್ನು ಕಂಡುಕೊಂಡರು. ಉಧ್ಯಮಿಯಾಗಿ ತಮ್ಮ ಮೊದಲ ಪ್ರಯತ್ನದಲ್ಲೇ ಫಾರ್ಚೂನ ಇಂಜಿನಿಯರಿಂಗ್ ಸಂಸ್ಥೆಯನ್ನು ಸ್ಥಾಪಿಸಿ 1988 ರಲ್ಲಿ ದುಬಾಯಿಯಲ್ಲಿ ಹಡಗು ನಿರ್ಮಾಣ, ದುಬಾಯಿ ಟ್ರಾನ್ಸ್ ಪೊರ್ಟ್, ಶಾರ್ಜಾ ಅರ್ಚೊಸಿ ಜೆ.ವಿ., ಮೆಕ್ ಡೆರ್ಮೊಟ್ ಹಾಗೂ ಇನ್ನಿತರ ಬೃಹತ್ ಸಂಸ್ಥೆಗಳಿಗೆ ಬೇಕಾದ ಯೊಂತ್ರೋಪಕರಣದ ಬಿಡಿ ಭಾಗಗಳನ್ನು ತಯಾರಿಕೊಡುವುದರ ಮೂಲಕ ಹಂತ ಹಂತವಾಗಿ ಉನ್ನತ ಸ್ಥಾನಕ್ಕೆ ಮುಟ್ಟಿಸಿದ ಮಾರ್ಕ್ ಡೆನಿಸ್ ಡಿ’ಸೋಜರವರು ಇಂದು ನೂರಾರು ಮಂದಿಗೆ ಉದ್ಯೋಗ ನೀಡಿ ಅನ್ನದಾತರಾಗಿದ್ದಾರೆ.

ತಮ್ಮ ವೃತ್ತಿ ಜೀವನದೊಂದಿಗೆ ಪ್ರವೃತ್ತಿಯಲ್ಲಿ ಸಮಾಜ ಮುಖಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯು.ಎ.ಇ. ಯಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕರಾಗಿ ಭಾಷೆ, ಕಲೆ ಸಂಸ್ಕೃತಿಯನ್ನು ಉಳಿಸಿ , ಜಾಗೃತಿ ಮೂಡಿಸುವಲ್ಲಿ ಪ್ರೋತ್ಸಾಹ ಬೆಂಬಲ ನೀಡುತ್ತಿದ್ದಾರೆ.

1979 ರಲ್ಲಿ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಪ್ರತಿಷ್ಠಿತ ಸಂಸ್ಥೆಯಲ್ಲಿ ಜೀವಾವದಿ ಸದಸ್ಯತ್ವ ದೊರೆತಿದೆ. ಯು.ಎ.ಇ. ಯಲ್ಲಿ ನೆಲೆಸಿರುವ ಕರಾವಳಿ ಕರ್ನಾಟಕದ ಉಧ್ಯಮಿಗಳ ಸಂಘಟನೆ ಕೆ.ಯಿ. ಎಲ್. ನ ಸ್ಥಾಪಕ ಸದಸ್ಯರು, ನಿರ್ದೇಶಕರುಗಳಲ್ಲಿ ಒರ್ವರಾಗಿದ್ದಾರೆ. ಶಾರ್ಜಾ ಸೈಂಟ್ ಮೈಕೆಲ್ ಇಗರ್ಜಿಯ ಅಧೀನದಲ್ಲಿರುವ ಸೈಂಟ್ ಮೈಕೆಲ್ ಮಂಗ್ಲೂರ್ ಕೊಂಕಣಿ ಕಮ್ಯೂನಿಟಿಯ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2012 ರಲ್ಲಿ ತಮ್ಮ ಊರಿನಲ್ಲಿ ಫ್ಲವರ್ ಅಫ್ ನಿಡ್ಡೊಡಿ ಸಂಘಟನೆಯನ್ನು ಸ್ಥಾಪಿಸಿ ಸಲಹೆಗಾರರಾಗಿದ್ದಾರೆ.

ಯು.ಎ.ಇ.ಯಲ್ಲಿರುವ ವಿವಿಧ ಸಂಘಟನೆಗಳಾದ ಮಂಗ್ಲುರ್ ಕೊಂಕಣ್ಸ್, ಎಮಿರೇಟ್ಸ್ ಪೆರ್ಡೆಲಾ, ಯು.ಎ.ಇ. ತುಳುಕೂಟ, ಕರ್ನಾಟಕ ಸಂಘ ದುಬಾಯಿ, ದಾಯ್ಜಿ ದುಬಾಯಿ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಹಲವಾರು ಸೇವಾಶ್ರಮ, ಅಂಗವಿಕಲ, ವಿಕಲಚೇತನ, ವೃದ್ಧಾಶ್ರಮಗಳಿಗೆ ನಿರಂತರವಾಗಿ ಸಹಾಯಹಸ್ತ ನೀಡುತ್ತಾ ಬರುತ್ತಿದ್ದಾರೆ.

ಸಾಧನೆಗೆ ಸಂದ ಸನ್ಮಾನ ಗೌರವಗಳು…

ಶಾರ್ಜಾ ಕರ್ನಾಟಕ ಸಂಘದ ಆಶ್ರಯದಲ್ಲಿ ಪ್ರಾರಂಭಿಸಲಾದ ಪ್ರತಿಷ್ಠಿತ ಮಯೂರ ಪ್ರಶಸ್ತಿ ಪ್ರಥಮ ಬಾರಿಗೆ ಪಡೆದ ಮೊದಲಿಗರು. ಹಾಗೂ ಕರ್ನಾಟಕ ಸಂಘ ಶಾರ್ಜಾ ದ ಪೋಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕರಾವಳಿ ಕರ್ನಾಟಕದ ಪ್ರತಿಷ್ಠಿತ ’ರಚನಾ’ ಪ್ರಶಸ್ತಿ ಪಡೆದಿರುವುದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ. ಮಾರ್ಕ್ ಡೆನಿಸ್ ಡಿ’ಸೋಜಾರವರು ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿ ಕೊಂಡಿರುವ ಈ ಸುಸಂದರ್ಭದಲ್ಲಿ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಹಾರ್ದಿಕ ಅಭಿನಂದನೆಗಳು.

ತಮ್ಮ ಬಾಳಾಸಂಗಾತಿ ಶ್ರೀಮತಿ ಲೆನ್ನಿ ಡಿ’ಸೋಜಾ ಹಾಗೂ ಎರಡು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳನ್ನು ಪಡೆದಿರುವ ಮಾರ್ಕ್ ಡೆನಿಸ್ ಡಿ’ಸೋಜಾರವರ ಸಾಮಾಜಿಕ ಸೇವೆ ನಿರಂತರವಾಗಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭಹಾರೈಕೆಗಳು.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ


Spread the love

Exit mobile version