Home Mangalorean News Kannada News ಪ್ರಥಮ ಪರಿವರ್ತನ ಮಂಗಳಮುಖಿಯರ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯ ಲೋಗೊ ಬಿಡುಗಡೆ

ಪ್ರಥಮ ಪರಿವರ್ತನ ಮಂಗಳಮುಖಿಯರ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯ ಲೋಗೊ ಬಿಡುಗಡೆ

Spread the love

ಪ್ರಥಮ ಪರಿವರ್ತನ ಮಂಗಳಮುಖಿಯರ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯ ಲೋಗೊ ಬಿಡುಗಡೆ

ಮಂಗಳೂರು: ಮಂಗಳಮುಖಿಯರ ಏಳಿಗೆಗಾಗಿ ಶ್ರಮಿಸುತ್ತಿರುವ ಪರಿವರ್ತನಾ ಚಾರಿಟೇಬಲ್ ಸಂಸ್ಥೆಯ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಪರಿವರ್ತನ ಮಂಗಳಮುಖಿಯರ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ ಅಕ್ಟೋಬರ್ 14 ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜರುಗಲಿದೆ.

ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲಣ್ಣ ಗೌಡ ಅವರು ಕಾರ್ಯಕ್ರಮದ ಲೋಗೊವನ್ನು ಮಂಗಳವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಬಿಡುಗಡೆಗೊಳಿಸಿದರು.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಒಂದು ಹೊಸ ಪ್ರಯತ್ನಕ್ಕೆ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಕೈ ಹಾಕಿದ್ದು, ಸ್ಪರ್ಧೆಯಲ್ಲಿ ಮಂಗಳಮುಖಿಯರು ತಮ್ಮ ಸೌಂದರ್ಯ ಪ್ರದರ್ಶನದೊಂದಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಸ್ಪರ್ಧೆಯು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದು ಫ್ಯಾಷನ್ ಎಬಿಸಿಡಿ ಮತ್ತು ವಿ4 ಚಾನೆಲ್ ಸ್ಪರ್ಧೆಗೆ ಸಹಯೋಗ ನೀಡಲಿವೆ.

ಮಂಗಳಮುಖಿಯರ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ 2016ರಲ್ಲಿ ಆರಂಭಗೊಂಡ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಅಂದಿನಿಂದ ಇಂದಿನ ವರೆಗೆ ಮಂಗಳಮುಖಿಯರ ಹಕ್ಕಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಮಾರ್ಚ್ 12ರಂದು ಸಂಸ್ಥೆಯ ಸಂಸ್ಥಾಪಕಿ ಹಾಗೂ ಮ್ಯಾನೆಜಿಂಗ್ ಟ್ರಸ್ಟಿ ವಾಯ್ಲೆಟ್ ಪಿರೇರಾ ಅವರ ಹುಟ್ಟಿದ ದಿನವನ್ನು ಮಂಗಳಮುಖಿಯರ ದಿನವನ್ನಾಗಿ ಕಳೆದ ಎರಡು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಪ್ರಥಮವಾಗಿ ಮಂಗಳಮುಖಿಯರೊಂದಿಗೆ ಕ್ರಿಸ್ ಮಸ್ ಆಚರಣೆ ಮಾಡುವುದರೊಂದಿಗೆ ಅವರಿಗೂ ಸಂತೋಷಕೂಟಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟ ಕೀರ್ತಿ ಟ್ರಸ್ಟಿನದ್ದು.

ಕಳೆದ ವರ್ಷಅಗಸ್ಟ್ ನಲ್ಲಿ ಹರಿಯಾಣದ ಗುರ್ಗಾಂವ್ ಪ್ರದೇಶದ ಮಂಗಳಮುಖಯೋರ್ವರು ಇತರ 16 ಸುಂದರಿಯರ ಮಧ್ಯ ಟ್ರಾನ್ಸ್ ಕ್ವಿನ್ ಇಂಡಿಯಾ ಆಗಿ ಆಯ್ಕೆಯಾಗಿದ್ದು ಇತಿಹಾಸವಾಗಿದ್ದು ಪ್ರಥಮವಾಗಿ ಒರ್ವ ಮಂಗಳಮುಖಿ ಗೆದ್ದು ಬಂದಿದ್ದರು. ಅದರ ಬಳಿಕ ಥಾಯ್ಲೆಂಡ್ ನಲ್ಲಿ ಮಾರ್ಚ್ 2018ರಲ್ಲಿ ನಡೆದ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶವನ್ನು ಪ್ರತಿನಿಧಿಸಿದ ಕೀರ್ತಿ ರೀನಾ ರೈ ಅವರಿಗೆ ಸಲ್ಲುತ್ತದೆ.

ರೀನಾ ರೈ ಅಂತಹ ಸೌಂದರ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದರೆ ಮಂಗಳೂರಿನ ಮಂಗಳಮುಖಿಯರು ಕೂಡ ಯಾಕೆ ಪ್ರಯತ್ನಿಸಬಾರದು ಎಂಬ ಸದುದ್ಧೇಶದಿಂದ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಫ್ಯಾಷನ್ ಎಬಿಸಿಡಿ ಇದರ ಚರಣ್ ಸುವರ್ಣ ಮತ್ತು ಮಂಗಳೂರಿನ ಹೆಸರಾಂತ ಸುದ್ದಿ ವಾಹಿನಿ ವಿ4 ಇದರ ಲಕ್ಷ್ಮಣ್ ಕುಂದರ್ ಜೊತೆ ಚರ್ಚಿಸಿ ಇಂತಹ ಒಂದು ವಿನೂತನ ಸೌಂದರ್ಯ ಸ್ಪರ್ಧೆ ನಡೆಸಲು ನಿರ್ಧರಿಸಲಾಗಿದೆ.

ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಮಂಗಳಮುಖಿಯರ ಏಳಿಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಅವರ ಬಗ್ಗೆ ಕೀಳು ಅಭಿಪ್ರಾಯ ಹೊಂದದಂತೆ ಅವರೂ ಸಹ ನಮ್ಮಂತೆ ಮನುಷ್ಯರು ಎಂಬ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಕೂಡ ಮಾಡಿಕೊಂಡು ಬಂದಿದೆ. ಸಮಾಜದಲ್ಲಿ ಮಂಗಳಮುಖಿಯರಿಗೂ ಕೂಡ ಸಮಾನ ಸ್ಥಾನಮಾನ ಕೊಡಿಸುವ ನಿಟ್ಟಿನಲ್ಲಿ ಪರಿವರ್ತನಾ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಾಮಾನ್ಯ ಜನರಂತೆ ಮಂಗಳಮುಖಿಯರಿಗೂ ಕೂಡ ತಮ್ಮ ಆಸೆ ಆಕಾಂಕ್ಷೆಗಳಿದ್ದು ಅವರೂ ಕೂಡ ಇಂತಹ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಅವಕಾಶ ನೀಡಬೇಕು ಈ ಮೂಲಕ ಮಂಗಳೂರಿನ ಕೀರ್ತಿ ಪತಾಕೆ ಏರಿಸುವಲ್ಲಿ ಅವರ ಪಾತ್ರ ಕೂಡ ಇರಬೇಕು ಎನ್ನುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಸಿದ್ದು ಹೆಚ್ಚಿನ ಸಂಖ್ಯೆಯ ಮಂಗಳಮುಖಿಯರು ಇದರಲ್ಲಿ ಭಾಗವಹಿಸುವ ನೀರಿಕ್ಷೆ ನಮ್ಮದು.

ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದವರು: ವಾಯ್ಲೆಟ್ ಪಿರೇರಾ, ಸಂಸ್ಥಾಪಕರು ಹಾಗೂ ಮ್ಯಾನೆಜಿಂಗ್ ಟ್ರಸ್ಟಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ , ಲಕ್ಷ್ಮಣ್ ಕುಂದರ್ – ಮುಖ್ಯಸ್ಥರು ವಿ4 ಸುದ್ದಿವಾಹಿನಿ ,ಚರಣ್ ಸುವರ್ಣ –ಎಬಿಸಿದ ಫ್ಯಾಷನ್ಸ್


Spread the love

Exit mobile version