ಪ್ರಧಾನಿ ಮೋದಿ ಭಾನುವಾರ ಧರ್ಮಸ್ಥಳಕ್ಕೆ : ಉಜಿರೆಯಲ್ಲಿ ಮಹಾ ಸಮಾವೇಶ

Spread the love

ಪ್ರಧಾನಿ ಮೋದಿ ಭಾನುವಾರ ಧರ್ಮಸ್ಥಳಕ್ಕೆ : ಉಜಿರೆಯಲ್ಲಿ ಮಹಾ ಸಮಾವೇಶ

ಧರ್ಮಸ್ಥಳ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಧರ್ಮಸ್ಥಳ ಮತ್ತು ಉಜಿರೆಗೆ ಭೇಟಿ ನೀಡಲಿದ್ದು, ಬಿಗಿ ಭದ್ರತೆಯು ನಡುವೆ ಸುಮಾರು ಒಂದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯೊಂದಿಗೆ ಎಲ್ಲ ಸಿದ್ಧತೆಗಳು ಅಂತಿಮಗೊಂಡಿವೆ.

ಶನಿವಾರ ಸಂಜೆಯಿಂದ ಉಜಿರೆಯಲ್ಲಿ ಭದ್ರತಾ ಪಡೆಗಳ ಸರ್ಪಗಾವಲು ಬಿಗಿಗೊಂಡಿದ್ದು, ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ರೂಪಕ್ ಕುಮಾರ್ ದತ್ತಾ ಉಜಿರೆಗೆ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಪ್ರಧಾನ ಕಾರ್ಯಕ್ರಮ ನಡೆಯಲಿರುವ ಮೈದಾನದ ಇಂಚಿಂಚೂ ವ್ಯವಸ್ಥೆಯನ್ನು ಗಮನಿಸಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಜತೆ ಸಮಾಲೊಚನೆ ನಡೆಸಿದರು. ಸುಮಾರು ಎರಡೂವರೆ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಶನಿವಾರ ರಾತ್ರಿ ಇಲ್ಲೇ ತಂಗಲಿರುವ ಡಿಜಿಪಿ ಅವರು ಭಾನುವಾರ ಪ್ರಧಾನಿ ಅವರ ಕಾರ್ಯಕ್ರಮ ಮುಗಿಯುವವರೆಗೂ ಭದ್ರತಾ ಕ್ರಮಗಳ ಮೇಲುಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಈ ನಡುವೆ, ದೆಹಲಿಯಿಂದಲೇ ಬಂದಿರುವ ವಿಶೇಷ ರಕ್ಷಣಾ ತಂಡ ಈಗಾಗಲೇ ಉಜಿರೆಯಲ್ಲಿ ಸಮಾವೇಶ ನಡೆಯುವ ಶ್ರೀ ರತ್ನವರ್ಮ ಹೆಗ್ಗಡೆ ಮೈದಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಪ್ರಧಾನ ವೇದಿಕೆ, ಸಭಾಂಗಣ ಮತ್ತು ಮೈದಾನದೊಳಗೆ ಯಾರೂ ನುಸುಳದಂಥ ಭದ್ರ ಕೋಟೆ ನಿರ್ಮಿಸಿದ್ದಾರೆ.

ಧರ್ಮಸ್ಥಳದ ಹೆಲಿಪ್ಯಾಡ್‌ನಿಂದ ಉಜಿರೆ ಕ್ರೀಡಾಂಗಣದವರೆಗೆ ಎಂಟು ಕಿ.ಮೀ. ಉದ್ದದ ರಸ್ತೆ ಮಾರ್ಗದಲ್ಲಿ ಪ್ರಧಾನಿಯವರು ಸಂಚರಿಸಲಿದ್ದು, ಈ ಮಾರ್ಗದಲ್ಲಿ ಪ್ರಧಾನಿ ಬೆಂಗಾವಲು ಪಡೆಯು ಶನಿವಾರ ಅಭ್ಯಾಸ ನಡೆಸಿತು. ಭಾನುವಾರ 10.50ಕ್ಕೆ ಹೆಲಿಪ್ಯಾಡ್‌ನಲ್ಲಿ ಮೋದಿ ಬಂದಿಳಿಯಲಿದ್ದಾರೆ.

ಮಂಗಳೂರಿನಿನಿಂದ ಪ್ರಧಾನಿ ಮತ್ತವರ ತಂಡಕ್ಕಾಗಿ ನಾಲ್ಕು ಹೆಲಿಕಾಪ್ಟರ್‌ಗಳು ಬಂದಿವೆ. ಶನಿವಾರ ಹೆಲಿಪ್ಯಾಡ್‌ನಲ್ಲಿ ತಾಲೀಮು ನಡೆಸಿದರು. ಇದರ ಬೆನ್ನಲ್ಲೇ ರಸ್ತೆ ಮಾರ್ಗದಲ್ಲೂ ಅಭ್ಯಾಸ ನಡೆಯಿತು.

ಪ್ರಧಾನಿಯವರು ಹೆಲಿಪ್ಯಾಡ್‌ನಲ್ಲಿ ಇಳಿದು ಒಂದು ಕಿ.ಮೀ. ದೂರದಲ್ಲಿರುವ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಲಿದ್ದಾರೆ. ಅಲ್ಲಿ ಅರ್ಧ ಗಂಟೆ ಕಳೆದು ನಂತರ ಉಜಿರೆಗೆ ಬರಲಿದ್ದಾರೆ. ಈ ಹಾದಿಯಲ್ಲಿ ಒಟ್ಟು ಆರು ವಾಹನಗಳು ಇತರ ಬೆಂಗಾವಲು ವಾಹನಗಳೊಂದಿಗೆ ಅಭ್ಯಾಸ ನಡೆಯಿತು.

ಬೆಳ್ತಂಗಡಿಯಿಂದಲೇ ಪೊಲೀಸ್ ಭದ್ರತಾ ಕವಚ ಅಳವಡಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಉಜಿರೆ ಪಟ್ಟಣದಿಂದ ಧರ್ಮಸ್ಥಳದವರೆಗೂ ಸಂಪೂರ್ಣ ಪೊಲೀಸ್ ಬಲ ನಿಯೋಜಿಸಲಾಗಿದ್ದು, ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಜಿರೆ ಮತ್ತು ಧರ್ಮಸ್ಥಳ ನಡುವಿನ ಏಳು ಕಿ.ಮೀ. ರಸ್ತೆ ಝೀರೋ ಟ್ರಾಫಿಕ್ ಆಗಿ ಪರಿವರ್ತನೆಯಾಗಲಿದೆ.

ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಒಂದು ಲಕ್ಷ ಜನ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ರೂಪೆ ಕಾರ್ಡ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ 38 ಲಕ್ಷ ಸ್ವಸಹಾಯ ಸಂಘಗಳ ಸದಸ್ಯರ ಪೆಕಿ 10 ಲಕ್ಷ ಸದಸ್ಯರು ಜನಧನ್ ಖಾತೆ ಹೊಂದಿದ್ದು, ಇವರಿಗೆ ರೂಪೆ ಕಾರ್ಡ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಮುಕ್ಕಾಲು ಗಂಟೆ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 12.45ಕ್ಕೆ ಕಾರ್ಯಕ್ರಮ ಮುಗಿಯಲಿದೆ.


Spread the love