Home Mangalorean News Kannada News ಪ್ರಮೋದ್ ಮಧ್ವರಾಜರಿಂದ ಕೇಂದ್ರ ಕೃಷಿ ಮತ್ತು ಕ್ರೀಡಾ ಸಚಿವರ ಭೇಟಿ

ಪ್ರಮೋದ್ ಮಧ್ವರಾಜರಿಂದ ಕೇಂದ್ರ ಕೃಷಿ ಮತ್ತು ಕ್ರೀಡಾ ಸಚಿವರ ಭೇಟಿ

Spread the love

ಸಚಿವ ಪ್ರಮೋದ್ ಮಧ್ವರಾಜರಿಂದ ಕೇಂದ್ರ ಕೃಷಿ ಮತ್ತು ಕ್ರೀಡಾ ಸಚಿವರ ಭೇಟಿ

ಉಡುಪಿ: ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಮೀನುಗಾರಿಕೆ, ಬಂದರು ಖಾತೆ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಫೆಬ್ರವರಿ 21 – 22 ರಂದು  ದೆಹಲಿಗೆ ಭೇಟಿ ನೀಡಿ ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವರುಗಳು ಹಾಗೂ ಇಲಾಖಾ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ರಾಜ್ಯ ಪ್ರಸ್ತಾವನೆಗಳನ್ನು ಶೀಘ್ರವಾಗಿ ಮಂಜೂರಾತಿ ನೀಡಿ ತ್ವರಿತವಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಸಿದರು.

ಮೀನುಗಾರಿಕೆ ಇಲಾಖೆಯ ಪ್ರಸ್ತಾವನೆಗಳಾದ ಮಂಗಳೂರು 3ನೇ ಹಂತ, ಹೊನ್ನಾವರ 2ನೇ ಹಂತದ ಮೀನುಗಾರಿಕೆ ಬಂದರುಗಳ ಅಭಿವೃದ್ಧಿ, ಅಮದಳ್ಳಿ ಮೀನುಗಾರಿಕೆ ಬಂದರಿನ ಆಧುನೀಕರಣ, ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಬ್ರೇಕ್‍ವಾಟರ್ ನಿರ್ಮಾಣ, ಮಂಗಳೂರು ಮೀನುಗಾರಿಕೆ ಬಂದರಿನ ಕಂಡತ್ತಪಳ್ಳಿ ಮತ್ತು ಮಲ್ಪೆ, ಬೆಲೇಕೇರಿ ಮತ್ತು ಕೋಡಿಕನ್ಯಾನ ಮೀನುಗಾರಿಕೆ ಬಂದರಿನಲ್ಲಿ ಡ್ರಜ್ಜಿಂಗ್ ಇತ್ಯಾದಿಗಳ ಕುರಿತಂತೆ ಕೇಂದ್ರ ಸರ್ಕಾರದ ಕೃಷಿ ಸಚಿವರಾದ   ರಾಧಾಮೋಹನ್ ಸಿಂಗ್ ಮತ್ತು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳಾದ   ಎಸ್.ಕೆ.ಪಟ್ಟ್ಟಾನಾಯಕ್ ಇವರೊಂದಿಗೆ ಚರ್ಚಿಸಿದ್ದಾರೆ.  ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಬ್ರೇಕ್‍ವಾಟರ್ ನಿರ್ಮಾಣ ಕಾಮಗಾರಿ ಯೋಜನೆಗೆ ಕೇಂದ್ರ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ರೂ.20.00 ಕೋಟಿಗಳನ್ನು ಕೂಡಲೇ ಬಿಡುಗಡೆ ಮಾಡುವ ಬಗ್ಗೆ ಭರವಸೆ ದೊರೆತಿರುತ್ತದೆ.

ಚಿತ್ರದುರ್ಗ, ಹೊಳೆನರಸೀಪುರ, ಉಡುಪಿ, ಹಾಸನ, ಹುಬ್ಬಳ್ಳಿ, ಶಿಕಾರಿಪರ, ಕಾರ್ಕಳ ಮತ್ತು ಶಿರಾಳಕೊಪ್ಪ ಈ ಸ್ಥಳಗಳಲ್ಲಿ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು  ಅನುದಾನ ಬಿಡುಗಡೆ ಮಾಡಲು ಕೋರಿ ಸಲ್ಲಿಸಿರುವ ರಾಜ್ಯದ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾದ ಕರ್ನಲ್ ರಾಜ್ಯವರ್ಧನ್‍ಸಿಂಗ್ ರಾಥೋರ್ ಮತ್ತು ಕೇಂದ್ರ ಸರ್ಕಾರದ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ರಾಹುಲ್ ಭಟ್ನಾಗರ್ ಇವರುಗಳನ್ನು ಭೇಟಿ ಮಾಡಿ ಚರ್ಚಿಸಿದ್ದು, ಅವರುಗಳು ನಮ್ಮ ಪ್ರಸ್ತಾವನೆಗಳಿಗೆ ಸಕಾರತ್ಮಕವಾಗಿ ಪ್ರತಿಕ್ರಿಯಿಸಿದ್ದು, ಅವಶ್ಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿರುತ್ತಾರೆ.


Spread the love

Exit mobile version