ಪ್ರಮೋದ್ ಮಧ್ವರಾಜ್ ಜನಾಶೀರ್ವಾದ ಸಮಾವೇಶಕ್ಕೆ ಸಾಕ್ಷಿಯಾದ ಜನ ಸಾಗರ
ಉಡುಪಿ: ಉಡುಪಿ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಜನಾಶೀರ್ವಾದ ಸಮಾವೇಶಕ್ಕೆ ಸಾವಿರಾರು ಜನರು ಸಾಕ್ಷಿಯಾದರು.
ಕಾರ್ಯಕ್ರಮವನ್ನು ರಾಜ್ಯದ ಮಾಜಿ ನಗರಾಭಿವೃದ್ಧಿ ಸಚಿವ ಹಾಗೂ ಕಾಪು ಕ್ಷೇತ್ರದ ಶಾಸಕ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿ ಪ್ರಮೋದ್ ಮಧ್ವರಾಜ್ ಅವರು ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಶ್ಲಾಘಿಸುವುದರೊಂದಿಗೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಪ್ರಮೋದ್ ಮಧ್ವರಾಜ್ ಅವರು ಕಳೆದ ವಿಧಾನಸಭಾ ಚುನಾವಣೇಯಲ್ಲಿ ಉಡುಪಿ ಜನತೆ ತನ್ನನ್ನು ಗೆಲ್ಲಿಸಿ ಸೇವೆ ಮಾಡುವ ಅವಕಾಶವನ್ನು ನೀಡಿದ್ದು ನಿಮಗೆ ಕೊಟ್ಟ ಮಾತಿನಂತೆ ಓರ್ವ ಸೇವಕನಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದ್ದಿದ್ದೇನೆ ಎಂಬ ತೃಪ್ತಿ ಇದೆ. ಕ್ಷೇತ್ರದಲ್ಲಿ ಇನ್ನಷ್ಟು ಕೆಲಸಗಳು ಬಾಕಿ ಇದ್ದು ಮತ್ತೊಮ್ಮೆ ಚುನಾವಣೇಯಲ್ಲಿ ತನ್ನನ್ನು ಗೆಲ್ಲಿಸಿ ಅವುಗಳನ್ನು ಮುಗಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಇದರ ಅಧ್ಯಕ್ಷ ಡಾ ಎಮ್ ಎನ್ ರಾಜೇಂದ್ರ ಕುಮಾರ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಮುನಿಯಾಲು ಉದಯ್ ಶೆಟ್ಟಿ, ಎಐಸಿಸಿ ಸದಸ್ಯ ಅಮೃತ್ ಶೆಣೈ, ಕೆಪಿಸಿಸಿ ಸದಸ್ಯರಾದ ವೆರೋನಿಕಾ ಕರ್ನೆಲಿಯೋ, ಡಾ ದೇವಿಪ್ರಸಾದ್ ಶೆಟ್ಟಿ, ಜಯಶ್ರೀ ಕೃಷ್ಣರಾಜ್, ಕಾಂಗ್ರೆಸ್ ನಾಯಕರಾದ ಕ್ರಿಸ್ಟನ್ ಡಿ ಆಲ್ಮೇಡಾ, ವಿಶ್ವಾಸ್ ಅಮೀನ್, ಮೀನಾಕ್ಷಿ ಮಾಧವ ಬನ್ನಂಜೆ, ಜನಾರ್ದನ ಭಂಡಾರ್ಕರ್, ಸತೀಶ್ ಅಮೀನ್, ನಿತ್ಯಾನಂದ ಶೆಟ್ಟಿ, ದಿನೇಶ್ ಪುತ್ರನ್, ಎಮ್ ಎ ಗಫೂರ್, ಹಾಗೂ ಇತರರು ಉಪಸ್ಥಿತರಿದ್ದರು.