ಪ್ರವಾಸಿಗರ ಸುರಕ್ಷತೆ ವಿಚಾರ: ಹೋಂಸ್ಟೇ, ರೆಸಾರ್ಟ್​ ಮಾಲೀಕರಿಗೆ ಮೈಸೂರು ಎಸ್ಪಿ ವಿಷ್ಣುವರ್ಧನ್ ಖಡಕ್​ ಸೂಚನೆ

Spread the love

ಪ್ರವಾಸಿಗರ ಸುರಕ್ಷತೆ ವಿಚಾರ: ಹೋಂಸ್ಟೇ, ರೆಸಾರ್ಟ್​ ಮಾಲೀಕರಿಗೆ ಮೈಸೂರು ಎಸ್ಪಿ ವಿಷ್ಣುವರ್ಧನ್ ಖಡಕ್​ ಸೂಚನೆ

ಮೈಸೂರು: ರಾಜ್ಯದಲ್ಲಿ ಪ್ರವಾಸಿಗರ ವಿರುದ್ಧ ವಿವಿಧೆಡೆ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಮೈಸೂರು ಜಿಲ್ಲಾ ವ್ಯಾಪ್ತಿಯ ಹೋಂಸ್ಟೇ, ರೆಸಾರ್ಟ್​ ಮಾಲೀಕರಿಗೆ ಮೈಸೂರು ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್​ ಖಡಕ್​ ಸೂಚನೆ ನೀಡಿದ್ದಾರೆ.

ಗುರುವಾರ ನಜರಾಬಾದ್​ನಲ್ಲಿರುವ ಎಸ್.ಪಿ. ಕಚೇರಿಯ ಸಭಾಂಗಣದಲ್ಲಿ ಏರ್ಪಡಿಲಾಗಿದ್ದ, ಮೈಸೂರು ಜಿಲ್ಲಾ ವ್ಯಾಪ್ತಿಯ ರೆಸಾರ್ಟ್​ ಮಾಲೀಕರು ಹಾಗೂ ಪೊಲೀಸ್​ ಅಧಿಕಾರಿಗಳ ಸಭೆಯಲ್ಲಿ ಎಸ್.ಪಿ. ವಿಷ್ಣುವರ್ಧನ್​ ಮಾತನಾಡಿದರು.

“ರೆಸಾರ್ಟ್​ಗಳಲ್ಲಿ ಅಹಿತಕರ ಘಟನೆಗಳು ನಡೆಯಲು ಮಾಲೀಕರ ನಿರ್ಲಕ್ಷ್ಯ ಕಾರಣ. ಕೊಠಡಿ ಕೇಳಿಕೊಂಡು ಬರುವ ಪ್ರವಾಸಿಗರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೇ, ಕೊಠಡಿಗಳನ್ನು ನೀಡುತ್ತಿರುವುದು ಅನಾಹುತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಸಂಪೂರ್ಣ ವಿವರಗಳನ್ನು ನೀವು ಪಡೆದುಕೊಳ್ಳಬೇಕು” ಎಂದು ಸೂಚಿಸಿದರು.

ಪ್ರವಾಸಿಗರಿಂದ ಯಾವುದೇ ಸೂಕ್ತ ದಾಖಲಾತಿಗಳನ್ನು ಪಡೆಯದೇ ತರಾತುರಿಯಲ್ಲಿ ರೆಸಾರ್ಟ್​ ಕೊಠಡಿಗಳನ್ನು ನೀಡಿದಲ್ಲಿ ಹಾಗೂ ಸುರಕ್ಷತಾ ಕ್ರಮಗಳಿಲ್ಲದಿದ್ದಲ್ಲಿ ಅಂತಹ ಮಾಲೀಕರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್​ ಹೇಳಿದರು.

ಉಳಿದ ಸೂಚನೆಗಳು ಹೀಗಿವೆ:

ಎಲ್ಲರ ಮಾಹಿತಿ ಪಡೆಯಿರಿ: ರೆಸಾರ್ಟ್​ನಲ್ಲಿ 10 ಮಂದಿ ಕೊಠಡಿ ಪಡೆದಲ್ಲಿ ಒಬ್ಬರ ಆಧಾರ್​​ ಕಾರ್ಡ್​ ದಾಖಲೆಯನ್ನು ಮಾತ್ರ ಪಡೆಯುತ್ತೀರಿ, ಉಳಿದವರ ಬಗ್ಗೆ ಮಾಹಿತಿ ಪಡೆಯುವುದಿಲ್ಲ. ಇನ್ನು ಮುಂದೆ ಕೊಠಡಿಯಲ್ಲಿ ಉಳಿದುಕೊಳ್ಳುವ ಎಲ್ಲರ ದಾಖಲೆಗಳನ್ನೂ ಪಡೆದುಕೊಳ್ಳಬೇಕು.

ಸಿಸಿ ಕ್ಯಾಮೆರಾ ಅಳವಡಿಸಿ : ರೆಸಾರ್ಟ್​ಗಳಲ್ಲಿ ಕೆಲವೆಡೆ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿರುವುದು ಕಂಡುಬಂದಿದೆ. ಕೊಠಡಿಗೆ ತೆರಳುವ ಮಹಡಿ ಮೆಟ್ಟಿಲುಗಳು, ಹಾಲ್ ಸೇರಿದಂತೆ ಎಲ್ಲೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.

ಮಾದಕ ವಸ್ತು ಬಳಸುವಂತಿಲ್ಲ: ರೆಸಾರ್ಟ್​ಗಳಲ್ಲಿ ಉಳಿಯುವ ಪ್ರವಾಸಿಗರು, ಗಾಂಜಾ ಸೇರಿದಂತೆ ಯಾವುದೇ ಮಾದಕ ವಸ್ತುಗಳನ್ನು ಬಳಸುವಂತಿಲ್ಲ. ಬಹಿರಂಗವಾಗಿ ಮದ್ಯ ಸೇವನೆ ಮಾಡುವಂತಿಲ್ಲ. ಈ ಬಗ್ಗೆ ದೂರು ಬಂದಲ್ಲಿ ಕಠಿಣ ಕ್ರಮ.

ಡಿಜೆ ಬಳಸುವಂತಿಲ್ಲ: ವಾರಾಂತ್ಯದಲ್ಲಿ ರಾಜ್ಯದ ವಿವಿಧೆಡೆಯಿಂದ ಬರುವ ಯುವ ಸಮೂಹ ರೆಸಾರ್ಟ್​ಗಳಲ್ಲಿ ಬೀಡು ಬಿಟ್ಟಿರುತ್ತಾರೆ. ರಾತ್ರಿ ಹೊತ್ತಿನಲ್ಲಿ ಡಿಜೆ ಬಳಸಿ, ಅಕ್ಕಪಕ್ಕದ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡಬಾರದು.

ಈಜುಕೊಳದ ಬಗ್ಗೆ ಎಚ್ಚರ : ರೆಸಾರ್ಟ್​ಗಳಲ್ಲಿ ವಾಟರ್​ಗೇಮ್ಸ್​ ಹಾಗೂ ಈಜು ಕೊಳಗಳು ಇದ್ದಲ್ಲಿ, ನುರಿತ ಈಜು ತಜ್ಞರು ಇರಬೇಕು. ಇಲ್ಲವಾದಲ್ಲಿ ಪ್ರವಾಸಿಗರನ್ನು ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು. ಬೋಟಿಂಗ್ ಮಾಡಿಸಿದಲ್ಲಿ ಅಗತ್ಯವಿರುವಷ್ಟು ಜನರನ್ನು ಮಾತ್ರ ಕರೆದೊಯ್ಯಬೇಕು. ರೆಸಾರ್ಟ್​ಗಳಲ್ಲಿ ಲೈಫ್ ಜಾಕೆಟ್ ಇಟ್ಟಿರಬೇಕು.

ದಿಢೀರ್ ತಪಾಸಣೆ: ಜಿಲ್ಲಾ ವ್ಯಾಪ್ತಿಯಲ್ಲಿ ಆಯಾ ವಿಭಾಗದ ಡಿವೈಎಸ್ಪಿ ಹಾಗೂ ಇನ್​ಸ್ಪೆಕ್ಟರ್​ಗಳು ರೆಸಾರ್ಟ್​ಗಳಿಗೆ ದಿಢೀರ್​ ಭೇಟಿ ನೀಡಲಿದ್ದಾರೆ. ಅಂತಹ ವೇಳೆ ಪೊಲೀಸರಿಗೆ ಸಂಪೂರ್ಣ ಸಹಕಾರ ನಿಡಬೇಕು.

ಇನ್ನು ಈ ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಸುಮಾರು 130 ರೆಸಾರ್ಟ್​ಗಳ ಮಾಲೀಕರು, ಎಲ್ಲಾ ಪೊಲೀಸ್​ ಠಾಣೆಗಳ ಇನ್​ಸ್ಪೆಕ್ಟರ್​ ಹಾಗೂ ಅಧಿಕಾರಿಗಳು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ತಿಳಿಸಿದರು.


Spread the love