ಪ್ರಶಸ್ತಿಯ ಮೊತ್ತವನ್ನು ದೇಣಿಗೆಯಾಗಿ ಯಕ್ಷಗಾನ ಕಲಾಕೇಂದ್ರಕ್ಕೆ ನೀಡಿದ ಬನ್ನಂಜೆ ಸಂಜೀವ ಸುವರ್ಣ

Spread the love

ಪ್ರಶಸ್ತಿಯ ಮೊತ್ತವನ್ನು ದೇಣಿಗೆಯಾಗಿ ಯಕ್ಷಗಾನ ಕಲಾಕೇಂದ್ರಕ್ಕೆ ನೀಡಿದ ಬನ್ನಂಜೆ ಸಂಜೀವ ಸುವರ್ಣ

ಉಡುಪಿ: ಯಕ್ಷಗಾನ ಕಲಾಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಇತ್ತೀಚೆಗೆ ತಮಗೆ ನೀಡಲಾದ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಸ್ಮಾರಕ ಯಕ್ಷಗಾನ ಕಲಾರಂಗ ಪ್ರಶಸ್ತಿಯ ಮೊತ್ತವನ್ನು ತಾನು ದುಡಿಯುತ್ತಿರುವ ಯಕ್ಷಗಾನ ಕಲಾ ಕೇಂದ್ರದ ಬಡಮಕ್ಕಳ ಊಟೋಪಚಾರಕ್ಕಾಗಿ ದೇಣಿಗೆಯಾಗಿ ಸಮರ್ಪಿಸಿದ್ದಾರೆ.

ತಮಗೆ ನೀಡಲಾದ ಪ್ರಶಸ್ತಿ ಮೊತ್ತ 40 ಸಾವಿರ ರು.ಗೆ ತಮ್ಮ ಕೈಯಿಂದ ಹೆಚ್ಚುವರಿ 10 ಸಾವಿರ ರು.ಗಳನ್ನು ಸೇರಿಸಿ ಒಟ್ಟು 50 ಸಾವಿರ ರು,.ಗಳನ್ನು ಕೇಂದ್ರದ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಅವರಿಗೆ ಮಂಗಳವಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜೀವ ಸುವರ್ಣರು, ನನ್ನನ್ನು ಬೆಳೆಸಿದ್ದು ಕಲಾಕೇಂದ್ರ, ನನಗೆ ಊಟ ಹಾಕಿ ಸಾಕಿ ಸಲಹಿದ ಕೇಂದ್ರ ಇದು, ಆದ್ದರಿಂದ ಇಲ್ಲಿರುವ ಬಡ ಮಕ್ಕಳ ಊಟಕ್ಕಾಗಿಯೇ ಈ ಮೊತ್ತವನ್ನು ನೀಡುತ್ತಿದ್ದೇನೆ, ಅದನ್ನು ಅದೇ ಕಾರಣಕ್ಕೆ ಬಳಸಬೇಕು ಎಂದು ನಿರ್ದೇಶಕರಲ್ಲಿ ವಿನಂತಿ ಮಾಡಿದರು.ದಶಕಗಳ ಹಿಂದೆ, ಯಕ್ಷಗಾನ ಕಲಾಕೇಂದ್ರ ಮತ್ತಷ್ಟು ಬೆಳವಣಿಗೆಯಾಗಬೇಕು ಎಂಬ ಉದ್ದೇಶದಿಂದ ಪ್ರಶಸ್ತಿ ಜತೆ ಬಂದಿದ್ದ ಮೊತ್ತವನ್ನು ನೀಡಿದ್ದೇನೆ ಎಂದರು.ಹಿಂದೆ, ಯಕ್ಷಗಾನ ಕಲಾಕೇಂದ್ರ ಆರಂಭಿಸಿದಾಗ ವಿದ್ಯೆಯಿಂದ ವಂಚಿತರಾಗಿದ್ದ 10 ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದೆ. ವಿದ್ಯೆಯಿಂದ ವಂಚಿತನಾಗಿದ್ದ ನನಗೆ ಶಿಕ್ಷಣದ ಮಹತ್ವದ ಅರಿವಿತ್ತು. ಹಾಗಾಗಿ, ಪ್ರಾರಂಭದಲ್ಲಿ ಎರಡು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದೆ. ಈಗ 60 ಮಕ್ಕಳು ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

ಕೇಂದ್ರದ ನಿರ್ದೇಶಕ ವರದೇಶ ಹಿರೇಗಂಗೆ ಮಾತನಾಡಿ, ಬನ್ನಂಜೆ ಸಂಜೀವ ಸುವರ್ಣರು ಅದ್ಭುತ ಕಲಾವಿದರು. ಈಗ ಅವರೊಬ್ಬ ಬಂಗಾರದಂತಹ ಮನುಷ್ಯ, ಅದ್ಭುತ ಮಾನವೀಯ ಗುಣಗಳ ವ್ಯಕ್ತಿಯೂ ಹೌದು ಎಂದು ತೋರಿಸಿಕೊಟ್ಟಿದ್ದಾರೆ, ಅವರ ಇಚ್ಚೆಯಂತೆ ಅವರ ದೇಣಿಗೆಯನ್ನು ಬಳಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಜೀವ ಸುವರ್ಣ ಅವರ ಪತ್ನಿ ವೇದಾ ಸುವರ್ಣ ಮತ್ತು ಅವರಲ್ಲಿ ಯಕ್ಷಗಾನ ಕಲಿಯುತ್ತಿರುವ ಜರ್ಮನಿಯ ಕ್ಯಾಥರಿನ್ ಬಂದರ್ ಕೂಡ ಇದ್ದರು.


Spread the love