Home Mangalorean News Kannada News ಪ್ರಾರ್ಥನೆ ದೇವರೊಂದಿಗೆ ನಾವು ಇಟ್ಟುಕೊಳ್ಳುವ ಪ್ರೀತಿಯ ಸಂಬಂಧ – ಬಿಷಪ್ ಜೆರಾಲ್ಡ್ ಲೋಬೊ

ಪ್ರಾರ್ಥನೆ ದೇವರೊಂದಿಗೆ ನಾವು ಇಟ್ಟುಕೊಳ್ಳುವ ಪ್ರೀತಿಯ ಸಂಬಂಧ – ಬಿಷಪ್ ಜೆರಾಲ್ಡ್ ಲೋಬೊ

Spread the love

ಪ್ರಾರ್ಥನೆ ದೇವರೊಂದಿಗೆ ನಾವು ಇಟ್ಟುಕೊಳ್ಳುವ ಪ್ರೀತಿಯ ಸಂಬಂಧ – ಬಿಷಪ್ ಜೆರಾಲ್ಡ್ ಲೋಬೊ

ಕುಂದಾಪುರ: ಪ್ರಾರ್ಥನೆ ಎನ್ನುವುದು ದೇವರೊಂದಿಗೆ ನಾವು ಇಟ್ಟುಕೊಳ್ಳುವ ಪ್ರೀತಿಯ ಸಂಬಂಧವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಗುರುವಾರ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಬಲಿಪೂಜೆಯನ್ನು ನೇರವೇರಿಸಿ ಆಶೀರ್ವಚನ ನೀಡಿದರು.

ಕುಟುಂಬವು ಪ್ರಾರ್ಥನೆ ಮಾಡಲು ಇರುವ ಪ್ರಥಮ ಶಾಲೆಯಾಗಿದ್ದು ಅಲ್ಲಿಯೇ ಪ್ರತಿಯೊಬ್ಬ ವ್ಯಕ್ತಿಯು ಬೆಳೆದು ದೊಡ್ಡವನಾಗುವಾಗ ಪ್ರಾರ್ಥನೆಯ ಮಹತ್ವವನ್ನು ಅರಿಯುತ್ತಾನೆ. ನಮ್ಮ ಕುಟುಂಬಗಳು ಪ್ರಾರ್ಥನೆ ದೇಗುಲಗಳಾಗಬೇಕಾದ ಅವಶ್ಯಕತೆ ಇದ್ದು ಪ್ರತಿನಿತ್ಯ ಕುಟುಂಬದ ಸದಸ್ಯರು ಜೊತೆಯಾಗಿ ಸೇರಿ ಪ್ರಾರ್ಥಿಸಿದಾಗ ನಮ್ಮ ಕೋರಿಕೆಗಳನ್ನು ದೇವರು ಮನ್ನಿಸುತ್ತಾರೆ. ಯಾರು ದೀನತೆಯಿಂದ ಪ್ರಾರ್ಥಿಸುತ್ತಾರೋ ಆತನ ಪ್ರಾರ್ಥೆನಯನ್ನು ದೇವರು ಆಲಿಸುತ್ತಾರೆ.

ಪ್ರಾರ್ಥನೆ ಮತ್ತು ಕ್ರೈಸ್ತರ ಜೀವನ ಬೇರೆ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಸಂತ ಅಂತೋನಿಯವರು ಪ್ರಮುಖ ಉದಾಹರಣೆಯಾಗಿದ್ದಾರೆ. ಪ್ರಾರ್ಥನೆ ಅವರ ಜೀವನದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಅವರಿಗೆ ಸದಾ ಪ್ರೇರಣೆಯಾಗಿತ್ತು. ಪ್ರಾರ್ಥನೆ ಎನ್ನುವುದು ಸ್ವರ್ಗದ ಬಾಗಿಲು ತೆರೆಯುವ ಕೀಲಿ ಕೈ ಆಗಿದ್ದು, ಪ್ರತಿನಿತ್ಯ ನಮ್ಮ ಮನೆಗಳಲ್ಲಿ ಪ್ರಾರ್ಥನೆಯನ್ನು ಮಾಡುವಂತೆ ಕರೆ ನೀಡಿದರು.

ಪವಾಡ ಪುರುಷ ಸಂತ ಅಂತೋನಿಯವರ ಮಹೋತ್ಸವಕ್ಕೆ ಉಡುಪಿ, ದಕ್ಷಿಣಕನ್ನಡ, ಶಿವಮೊಗ್ಗ, ಉತ್ತರಕನ್ನಡದಿಂದ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ತಮ್ಮ ಕೋರಿಕೆಗಳನ್ನು ಸಂತ ಅಂತೋನಿಯವರಲ್ಲಿ ತೋಡಿಕೊಂಡು ಕೃತಾರ್ಥರಾದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೋನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ವಲಯ ಧರ್ಮಗುರು ವಂ|ಪಾವ್ಲ್ ರೇಗೊ, ಪುಣ್ಯಕ್ಷೇತ್ರದ ಮುಖ್ಯಸ್ಥರಾದ ವಂ|ಸುನೀಲ್ ವೇಗಸ್ ಸೇರಿದಂತೆ ಹಲವು ಧರ್ಮಗುರುಗಳು ಉಪಸ್ಥಿತರಿದ್ದರು.


Spread the love

Exit mobile version