Home Mangalorean News Kannada News ಪ್ರೀತಿ-ವಿಶ್ವಾಸದಿಂದ ರೋಗಿಗಳ ಸೇವೆ ಮಾಡಬೇಕು. ಸೇವೆಯಿಂದ ಮಾನಸಿಕ ಶಾಂತಿ ಸಿಗುತ್ತದೆ – ಅರವಿಂದ ಕೇಜ್ರಿವಾಲ್

ಪ್ರೀತಿ-ವಿಶ್ವಾಸದಿಂದ ರೋಗಿಗಳ ಸೇವೆ ಮಾಡಬೇಕು. ಸೇವೆಯಿಂದ ಮಾನಸಿಕ ಶಾಂತಿ ಸಿಗುತ್ತದೆ – ಅರವಿಂದ ಕೇಜ್ರಿವಾಲ್

Spread the love

ಮೂಡಬಿದಿರೆ: ನಿಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ವಿನಿಯೋಗಿಸಿ. ಇದರಿಂದಾಗಿ “ಅಹಂ” ಕಡಿಮೆಯಾಗಿ ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ. ಸಮಯ ದಾನ ಶ್ರೇಷ್ಠ ದಾನವಾಗಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ. ಎಂದೂ ತಪ್ಪು ಕೆಲಸ ಮಾಡಬೇಡಿ. ಅಕ್ರಮವಾಗಿ ಹಣ ಸಂಪಾದನೆ ಮಾಡಬಾರದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ನೂತನ ಪದವೀಧರರಿಗೆ ಕಿವಿ ಮಾತು ಹೇಳಿದರು.

ಉಜಿರೆಯಲ್ಲಿ ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸಿದ ಪದವೀಧರರಿಗೆ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾ ಭವನದಲ್ಲಿ ಬುಧವಾರ ಪದವಿ ಪ್ರದಾನ ಮಾಡಿ ಮಾತನಾಡಿದರು.

1-cm-kejriwal-dharmastala-20150909



54 ಮಂದಿ ಪದವೀಧರರಿಗೆ ಮತ್ತು 10 ಮಂದಿ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವುಗಳನ್ನು ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿ ಮಾನವೀಯತೆಯೊಂದಿಗೆ ರೋಗಿಗಳ ಸೇವೆ ಮಾಡಬೇಕು. ಪ್ರಕೃತಿ ಚಿಕಿತ್ಸಾ ಪದ್ಧತಿಯ ರಾಯಬಾರಿಗಳಾಗಿ ಸಮಾಜದಲ್ಲಿ ನೂತನ ವೈದ್ಯರು ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಬಾಲ್ಯದಿಂದಲೇ ತಾನು ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವುದಾಗಿ ತಿಳಿಸಿದ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಂದಾಲ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆದು ಪೂರ್ಣ ಗುಣಮುಖನಾಗಿ ಸಂತೃಪ್ತಿ ಮತ್ತು ಸಂತೋಷ ಹೊಂದಿರುವುದಾಗಿ ತಿಳಿಸಿದರು.

ಸದಾ ಒತ್ತಡದ ಕೆಲಸ ಹಾಗೂ ಆಧುನಿಕ ಜೀವನ ಶೈಲಿಯಿಂದ ಮತ್ತು ಆಹಾರ ಸೇವನಾ ಕಾರ್ಯಕ್ರಮದಿಂದಾಗಿ ಇಂದು ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸಮಗ್ರ ವೈದ್ಯಕೀಯ ಪದ್ಧತಿ: (ಆಲ್ ಎಡಿಷನ್ – ಬಾಕ್ಸ್ ಐಟಮ್)

ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೇಪತಿ ಪ್ರಕೃತಿ ಚಿಕಿತ್ಸೆ, ಯುನಾನಿ ಮೊದಲಾದ ಹಲವು ವಿಧಾನಗಳಿವೆ. ಪ್ರತಿಯೊಂದರಲ್ಲಿಯೂ ವಿಶೇಷ ಪರಿಣಾಮಕಾರಿ ಚಿಕಿತ್ಸಾ ಕ್ರಮವಿದೆ.  ಒಂದೇ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ ಲಭ್ಯವಾಗಬೇಕು.

ರೋಗಿಯ ರೋಗದ ಕಾರಣ, ಹಿನ್ನೆಲೆ ಮತ್ತು ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಬೇಕಾದ ಚಿಕಿತ್ಸಾ ಪದ್ಧತಿಯಲ್ಲಿ ಶುಶ್ರೂಷೆ ನೀಡಬೇಕು ಎಂದು ಕೇಜ್ರಿವಾಲ್ ಸಲಹೆ ನೀಡಿದರು. ವಿಶ್ವದಲ್ಲೇ ಪ್ರಥಮವಾಗಿ ಇಂತಹ ಘಟಕವನ್ನು ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಬೇಕು ಎಂದು ಅವರು ಕೋರಿದರು.

ಧರ್ಮಸ್ಥಳದಲ್ಲಿ ಹೆಗ್ಗಡೆಯವರ ನೇತೃತ್ವದಲ್ಲಿ ಅನುಷ್ಠಾನಗೊಳಿಸಿದ ವಿವಿಧ ಜನ ಮಂಗಳ ಕಾರ್ಯಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.

ವೈದ್ಯರು ಪ್ರೀತಿ-ವಿಶ್ವಾಸದಿಂದ, ಮಾನವೀಯತೆಯೊಂದಿಗೆ ರೋಗಿಗಳ ಸೇವೆ ಮಾಡಬೇಕು ಎಂದು ಅವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯಲ್ಲಿ ಆಯುಷ್ ಇಲಾಖೆಯ ಮೂಲಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮೊದಲಾದ ನಮ್ಮ ಪಾರಂಪರಿಕ ಚಿಕಿತ್ಸಾ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.  ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ ಘಟಕಗಳನ್ನು ತೆರೆಯಲಾಗುವುದು. ಈಗಾಗಲೇ 10 ಜಿಲ್ಲಾ ಕೇಂದ್ರಗಳಲ್ಲಿ ಆಯುಷ್ ಘಟಕಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮುಖ್ಯಮಂತ್ರಿ ಕೇಜ್ರಿವಾಲ್‍ರ ಸಲಹೆಯಂತೆ ವಿವಿಧ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡುವ ಸೇವಾ ಕೇಂದ್ರವನ್ನು ಧರ್ಮಸ್ಥಳದ ವತಿಯಿಂದ ದೆಹಲಿಯಲ್ಲಿ ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ತಿಳಿಸಿ ಈ ಬಗ್ಗೆ ಮುಖ್ಯಮಂತ್ರಿಯವರ ಪೂರ್ಣ ಸಹಕಾರವನ್ನು ಕೋರಿದರು.

ಕೇಜ್ರಿವಾಲ್‍ರ ಎಲ್ಲಾ ಕನಸು ನನಸಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿರುವುದಾಗಿ ಹೇಳಿದ ಹೆಗ್ಗಡೆಯವರು ಅವರಿಗೆ ಸರ್ವ ರೀತಿಯ ಯಶಸ್ಸನ್ನು ಹಾರೈಸಿದರು.

ಪ್ರಕೃತಿ ಚಿಕಿತ್ಸಾ ಪದ್ಧತಿಯು ಔಷಧಿ ರಹಿತ ಶುಶ್ರೂಷೆಯಾಗಿದ್ದು ನಮ್ಮ ಆಹಾರ ಸೇವನೆ ಮತ್ತು ವರ್ತನೆಯಲ್ಲಿ ಪರಿವರ್ತನೆ ಆದರೆ ಆರೋಗ್ಯಪೂರ್ಣ ಜೀವನ ನಡೆಸಬಹುದು. ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಶುಚಿ-ರುಚಿಯಾದ, ಹಿತ-ಮಿತವಾದ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.

ವೈದ್ಯರು ಪ್ರೀತಿಯಿಂದ ರೋಗಿಗಳ ಸೇವೆ ಮಾಡಿ ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು.

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಮತ್ತು ಶಾಂತಿವನ ಟ್ರಸ್ಟ್‍ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪ್ಪಾಡಿತ್ತಾಯ ಉಪಸ್ಥಿತರಿದ್ದರು.

ಎಸ್.ಡಿ.ಎಮ್. ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದವಿತ್ತರು.

ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉಜಿರೆಯಲ್ಲಿ ‘ಪ್ರಕೃತಿ’ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಿದರು.

ಲೋಕಪಾಲ್ ಮಸೂದೆ ಜಾರಿ

ಇದೇ ಅಕ್ಟೋಬರ್ ತಿಂಗಳೊಳಗೆ ಲೋಕಪಾಲ್ ಮಸೂದೆ ಜಾರಿಗೆ ತರಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಬುಧವಾರ ಅವರು ಮಾಧ್ಯಮದವರು ಮತ್ತು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದರು.

ಸರ್ಕಾರದ ವಿವಿಧ ಯೋಜನೆಗಳಿಗೆ ಭೂಮಿ ವಶಪಡಿಸಿಕೊಳ್ಳುವಾಗ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪಂಚಾಬ್‍ನಲ್ಲಿ ತಮ್ಮ ಪಕ್ಷದ ಸರ್ಕಾರ ರಚಿಸುವುದು ತನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು.


Spread the love

Exit mobile version