ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿದ “ಇನಿದನಿ” ಸಂಗೀತ ರಸಸಂಜೆ
ಕುಂದಾಪುರ: ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ, ನಗುವ ನಯನ ಮಧುರ ಮೌನ. . . ಖ್ಯಾತ ಗಾಯಕ ಅಜಯ್ ವಾರಿಯರ್ ಧ್ವನಿಯಲ್ಲಿ ಮೂಡಿಬಂದ ಈ ಹಾಡುಗಳು ಸುಮಾರು ಎಂಟು ಸಾವಿರ ಪ್ರೇಕ್ಷಕರನ್ನು ಭಾವಲೋಕದಲ್ಲಿ ತೇಲಿಸಿತು. ಹೌದು ಇದು ಭಾನುವಾರ ಸಂಜೆ ಕುಂದಾಪುರದಲ್ಲಿ ನಡೆದ ಇನಿದನಿ ಕಾರ್ಯಕ್ರಮದಲ್ಲಿ ಕಂಡುಬಂದ ಕ್ಷಣ.
ಕಿಶೋರ್ ಕುಮಾರ್ ಸಾರಥ್ಯದ ಕಲಾಕ್ಷೇತ್ರ ಕುಂದಾಪುರ ಪ್ರಸ್ತುತಪಡಿಸಿದ 9ನೇ ವರ್ಷದ ಕಾರ್ಯಕ್ರಮವಾದ ಇನಿದನಿ ಭಾನುವಾರ ಸಂಜೆ 6ಗಂಟೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆಯಿತು. ಇನಿದನಿ ಪ್ರತೀವರ್ಷವೂ ಕುಂದಾಪುರ ತಾಲೂಕಿನ ಸುತ್ತಮುತ್ತಲಿನ ಜನ ಕಾದು ನೋಡುವ ಕಾರ್ಯಕ್ರಮವಾಗಿದ್ದು, ಆಯ್ದ ಹಳೆಯ ಕೆಲವು ಕನ್ನಡ ಚಿತ್ರಗೀತೆಗಳನ್ನು ಸುಮಧುರ ಕಂಠಸಿರಿಯ ಕಲಾವಿದರ ಮೂಲಕ ಹಾಡಿಸುವ ಅಪೂರ್ವ ಕಾರ್ಯಕ್ರಮವಾಗಿದೆ.
ಕೇವಲ 150 ಮಂದಿ ಕುಳಿತು ನೋಡುತ್ತಿದ್ದ ಇನಿದನಿ ಕಾರ್ಯಕ್ರಮ ಇದೀಗ ಸಹಸ್ರಾರು ಸಂಖ್ಯೆಯಲ್ಲಿ ಜನರು ಮಧುರ ಸಂಗೀತ ರಸಸಂಜೆಯನ್ನು ಸವಿಯುತ್ತಿದ್ದಾರೆ. ಭಾನುವಾರ ನಡೆದ ಇನಿದನಿ ಕಾರ್ಯಕ್ರಮದಲ್ಲಿ ಸುಮಾರು 8,000 ಮಿಕ್ಕಿ ಜನರಿಂದ ಕಿಕ್ಕಿರಿದು ತುಂಬಿದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಖ್ಯಾತ ಗಾಯಕ ಅಜಯ್ ವಾರಿಯರ್, ಶೃತಿ ಭಿಡೆ ಧ್ವನಿಯಲ್ಲಿ ಹೊರಹೊಮ್ಮಿದ ಹಳೆಯ ಗೀತೆಗಳನ್ನು ಕೇಳಿ ಮೈಮರೆತರು.
ದಿವ್ಯ ರಾಮಚಂದ್ರ ಕಂಠಸಿರಿಯಲ್ಲಿ ಹೊರಹೊಮ್ಮಿದ ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ ಹಾಡು ಕೇಳಿ ಶೋತೃ ವರ್ಗ ತಲೆದೂಗಿದರೆ, ವಿನಯ್ ಅಡಿಗರ ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಹಾಡು ಪ್ರೇಕ್ಷಕರ ಚಪ್ಪಾಳೆಗೆ ಸಾಕ್ಷಿಯಾಯಿತು.
ಗಾಯಕರಾದ ನಯನ ರಾಜಗೋಪಾಲ್, ವೈಎನ್ ರವೀಂದ್ರ, ಅಶೋಕ್ ಸಾರಂಗ್, ಸ್ಥಳೀಯ ಪ್ರತಿಭೆ ಅನನ್ಯ ಕಾಂಚನ್ ಕಂಠಸಿರಿಯಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಕಾರ್ಯಕ್ರಮದ ಕೊನೆತನಕವೂ ಪ್ರೇಕ್ಷಕರು ಕೇಳಿ ಆನಂದಿಸಿದರು. ನಾಲ್ಕು ಗಂಟೆಗಳ ಕಾಲ ಪ್ರೇಕ್ಷಕರು ಕುರ್ಚಿಬಿಟ್ಟು ಕದಲದಿರುವುದು ಇನಿದನಿಯ ಯಶಸ್ಸಿಗೆ ಸಾಕ್ಷಿಯಾಗಿದೆ.
ಹಿನ್ನಲೆಯಲ್ಲಿ ಡ್ರಮ್ಸ್ ವಾದಕ ಕಾರ್ಕಳದ ವಾಮನ್ ಹಾಗೂ ತಬಲ ವಾದಕ ರಾಜೇಶ್ ಭಾಗವತ್ ಅವರ ಕೈಚಳಕ ಅದ್ಭುತವಾಗಿದ್ದು, ಗಿಟಾರ್‍ನಲ್ಲಿ ರಾಜಗೋಪಾಲ್, ಬೇಸ್ ಗಿಟಾರ್‍ನಲ್ಲಿ ಟೋನಿ ಡಿಸಿಲ್ವ ಉಡುಪಿ, -ಕೊಳಲು ಜಯಪ್ರಕಾಶ್, ಸಿತಾರ್‍ನಲ್ಲಿ ಸುಮುಖ್, ಕೀಬೋರ್ಡ್‍ನಲ್ಲಿ ದೀಪಕ್ ಶಿವಮೊಗ್ಗ, ಶಿಜಿಮೋನ್, -ಕಾಂಗೊದಲ್ಲಿ ಗಣೇಶ್ ಹೊಸಬೆಟ್ಟು ಸುರತ್ಕಲ್, ಡೋಲಕ್‍ನಲ್ಲಿ ಭಾಸ್ಕರ ಕುಂಬ್ಳೆ ಸಹಕರಿಸಿದರು. 70-80ರ ದಶಕದ ಹಾಡುಗಳೆಗೆ ಅದೇ ದಾಟಿಯಲ್ಲಿ ಹಿನ್ನಲೆ ಸಂಗೀತ ನೀಡಿದ ಕಲಾವಿದರ ಶ್ರಮ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ. ನಿರೂಪಕ ಕೆವಿ ರಮಣ್ ಮೂಡಬಿದಿರೆ ಇನಿದನಿ ಕಾರ್ಯಕ್ರಮವನ್ನು ಹೊಸ ಹೊಸ ಶಬ್ದಗಳಿಂದ ವರ್ಣಿಸಿದ ರೀತಿ ನೋಡುಗರನ್ನು ಆಕರ್ಷಿಸಿದೆ.
ಇನಿದನಿ ಕಾರ್ಯಕ್ರಮದ ಮಧ್ಯೆ ಐದು ನಿಮಿಷಗಳ ಕಾಲ ಚುಟುಕು ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ, ಮತ್ಸ್ಯೋದ್ಯಮಿ ಆನಂದ ಸಿ ಕುಂದರ್ ಅವರನ್ನು ಸನ್ಮಾನಿಸಲಾಯಿತು. ಈ ವೇಳೆಯಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಹೆಮ್ಮಾಡಿಯ ಮೂವತ್ತುಮುಡಿ ನಿವಾಸಿ ವಾಲಿಬಾಲ್‍ಪಟು ರೈಸನ್ ಅವರನ್ನು ಸನ್ಮಾನಿಸಲಾಯಿತು.
ಬಿ. ಕಿಶೋರ್ ಕುಮಾರ್, ಅಧ್ಯಕ್ಷರು ಕಲಾಕ್ಷೇತ್ರ ಕುಂದಾಪುರ ಮಾತನಾಡಿ ನಾಲ್ಕು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಾಮಾನ್ಯ ಮಾತಲ್ಲ. ನಾವು ಆಯ್ಕೆ ಮಾಡಿದ ಹಾಡುಗಳನ್ನು ಪೂರ್ವ ತಯಾರಿಯೊಂದಿಗೆ ಕಲಾವಿದರು ಪ್ರಸ್ತುತಪಡಿಸಿದ್ದಾರೆ. ಗುಣಮಟ್ಟದ ಕಾರ್ಯಕ್ರಮ ಕೊಟ್ಟರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದಕ್ಕೆ ಸಾಕ್ಷಿ ಇನಿದನಿ. ಕೇವಲ ಸಂಘಟನೆಯಿಂದ ಈ ಯಶಸ್ಸು ಸಿಕ್ಕಿಲ್ಲ. ಕಲಾಕ್ಷೇತ್ರ ಮಾಡುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹಕರು, ಪ್ರೇಕ್ಷಕರು, ಪ್ರಚಾರ ನೀಡುವ ಮಾಧ್ಯಮಗಳಿಂದ ಈ ಯಶಸ್ಸು ಸಿಕ್ಕಿದೆ ಎಂದರು.
ಗಣೇಶ್ ಕ್ಯಾಶ್ಯೂ ಮಾಲೀಕರಾದ ಗಣೇಶ್ ಕಿಣಿ, ನಂದಿನಿ ಹೊಟೇಲ್ ಪಾಲುದಾರರಾದ ರಘುರಾಮ ರಾವ್, ಎಮ್‍ಡಿ ಡೆವಲಪರ್ಸ್‍ನ ಮಹಾಬಲ ಪೂಜಾರಿ, ಗೋಪಾಲಕೃಷ್ಣ ಸಾಮಗ, ನಿತ್ಯಾನಂದ ಹವಲ್ದಾರ್, ಉದಯ್ ಶೇಟ್, ಪುರಸಭಾ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪುರಸಭಾ ಸದಸ್ಯ ಗಿರೀಶ್ ಜಿ.ಕೆ, ಕಿಶೋರ್ ಕುಮಾರ್ ವೇದಿಕೆಯಲ್ಲಿ ಇದ್ದರು.