ಫೆ. 12ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ
ಮಂಗಳೂರು : ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನು ಇದೇ ಫೆಬ್ರವರಿ 12 ರಂದು ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 4 ಲಕ್ಷಕ್ಕಿಂತಲೂ ಅಧಿಕ ಮಕ್ಕಳು ಇದ್ದು ಅವರಲ್ಲಿ ಜಂತುಹುಳದ ಕುರಿತು ಮಾಹಿತಿಯನ್ನು ಈಗಾಗಲೇ ಶಾಲಾ ಕಾಲೇಜುಗಳ ಮೂಲಕ ನೀಡಲಾಗಿದ್ದು ಅದರ ಅರಿವನ್ನು ಮೂಡಿಸಲಾಗಿದೆ ಹಾಗೂ 1 ರಿಂದ 19 ವರ್ಷದೊಳಗಿನ ಮಕ್ಕಳಲ್ಲಿ ಜಂತುಹುಳ ಕಾಣಿಸಿಕೊಳ್ಳುತ್ತಿರುವುದರಿಂದ ಅವರಿಗೆ ಜಂತುಹುಳ ಮಾತ್ರೆಯ ಅವಶ್ಯಕತೆ ಇದೆ ಎಂಬುದನ್ನು ತಿಳಿಸಿದರು. ಅಲ್ಲದೇ ಈ ಮಾತ್ರೆಯ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ ಇದನ್ನು ನಿರಾತಂಕವಾಗಿ ಸೇವಿಸಬಹುದು ಎಂದು ಸ್ಪಷ್ಟ ಪಡಿಸಿದ್ದಾರೆ.
ಜಂತುಹುಳ ಭಾದೆಯಿಂದಾಗಿ ಹೆಚ್ಚಿನ ಮಕ್ಕಳು ರೋಗಗ್ರಸ್ಥರಾಗಿ ಶಾಲೆಗಳಿಗೆ ಗೈರು ಹಾಜರಾಗುತ್ತಾರೆ ಹಾಗೂ ತರಗತಿಯಲ್ಲಿ ಪಾಠದ ಬಗ್ಗೆ ಏಕಾಗ್ರತೆ ನೀಡಲು ವಿಫಲರಗುತ್ತಾರೆ ಮತ್ತು ಶಾರೀರಿಕ ಹಾಗೂ ಭೌದ್ಧಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮಥ್ರ್ಯ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಮುಖ್ಯವಾಗಿ ಆ ವಯಸ್ಸಿನ ಮಕ್ಕಳಿಗೆ ಜಂತುಹುಳ ನಿವಾರಣೆಯ ಮಾತ್ರೆಯನ್ನು ನೀಡುವುದು ಅವಶ್ಯಕವಾಗಿರುತ್ತದೆ ಎಂದು ಹೇಳಿದರು.
ಜಂತುಹುಳ ಭಾದೆಯ ಮಾತ್ರೆಯನ್ನು ಸೇವಿಸುವುದರಿಂದ ರಕ್ತ ಹೀನತೆಯನ್ನು ತಡೆಗಟ್ಟಬಹುದು, ಪೌಷ್ಠಿಕತೆಯಲ್ಲಿ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಳ ಹಾಗೂ ಕಲಿಕೆಯ ಮೇಲೆ ಏಕಾಗ್ರತೆ ಬೆಳೆಯಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಜಂತುಹುಳ ಭಾದೆಯಿಂದ ರಕ್ಷಿಸಿಕೊಳ್ಳಲು ನೈರ್ಮಲ್ಯವನ್ನು ಕಾಪಾಡುವುದು, ಆಹಾರ ಪದಾರ್ಥಗಳನ್ನು ಮುಚ್ಚಿಡುವುದು, ಶುದ್ಧೀಕರಿಸಿದ ನೀರಿನ ಸೇವನೆ, ಪಾದರಕ್ಷೆಗಳ ಬಳಕೆಯನ್ನು ಮಾಡುವುದರ ಮೂಲಕ ಸಾಧ್ಯವಿದೆ ಎಂದು ಹೇಳಿದರು. ಈ ಮಾತ್ರೆಯನ್ನು ಸಾಮಾನ್ಯವಾಗಿ ಊಟದ ಬಳಿಕ ಉಚಿತವಾಗಿ ನೀಡಲಾಗುವುದು ಇದು ಚೀಪುವ ಮಾತ್ರೆಯಾಗಿರುತ್ತದೆ. ಈ ಮಾತ್ರೆಯನ್ನು ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರ ಉಪಸ್ಥಿಯಲ್ಲಿ ನೀಡಲಾಗುವುದು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಮಂಗಳೂರಿನಲ್ಲಿನ ಬಂದರು ಸರ್ಕಾರಿ ಶಾಲೆಯಲ್ಲಿ ಇದೇ ಸೋಮವಾರದಂದು ಪ್ರಸಕ್ತ ವರ್ಷದಲ್ಲಿ ಮೊದಲನೇಯದಾಗಿ ಜಂತುಹುಳ ನಿವಾರಣಾ ಮಾತ್ರೆಯನ್ನು ನೀಡಿ ಈ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ಸರ್ಕಾರಿ ಶಾಲೆ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆ, ಹಾಗೂ ವಸತಿ ಶಾಲೆಗಳಲ್ಲಿಯೂ ಕೂಡ ಈ ಮಾತ್ರೆಯನ್ನು ನೀಡಲಾಗುತ್ತದೆ ಎಂದರು, ಸುದ್ದಿಗೋಷ್ಠಿಯಲ್ಲಿ ಕುಟುಂಬ ಕಲ್ಯಾಣಾಧಿಕಾರಿ ಸಿಕಂದರ್ ಪಾಷಾ, ಡಾ ಅಶೋಕ್ ಉಪಸ್ಥಿತರಿದ್ದರು.