ಫೆ.9: ಉಡುಪಿ ಧರ್ಮಾಧ್ಯಕ್ಷರ 75ನೇ ಅಮೃತಮಹೋತ್ಸವ ಮತ್ತು ಬಿಷಪ್ ದೀಕ್ಷೇಯ ರಜತ ಮಹೋತ್ಸವ
ಉಡುಪಿ: ಕಥೊಲಿಕ ಧರ್ಮಪ್ರಾಂತ್ಯ ಉಡುಪಿ ಇದರ ಧರ್ಮಾಧ್ಯಕ್ಷರಾದ ಅತೀ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ಎರಡು ಜುಬಿಲಿ ಮಹೋತ್ಸವಕ್ಕೆ ಭಕ್ತವೃಂದ ಸಜ್ಜಾಗಿದೆ. ಧರ್ಮಾಧ್ಯಕ್ಷರು 75 ವರ್ಷಗಳ ಆಚರಣೆಯ ಅಮೃತ ಮಹೋತ್ಸವ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25 ವರ್ಷಗಳ ಬೆಳ್ಳಿ ಹಬ್ಬದ ಮಹೋತ್ಸವ 2025 ರ ಫೆಬ್ರವರಿ 9 ರಂದು ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ತೆರೆದ ಮೈದಾನದಲ್ಲಿ ಜರುಗಲಿದೆ.
ಭಾನುವಾರ ಸಂಜೆ 4 ಗಂಟೆಗೆ ಕೃತಜ್ಞತಾ ಬಲಿಪೂಜೆ ಹಾಗೂ ಸಾರ್ವಜನಿಕ ಸನ್ಮಾನ ಸಮಾರಂಭ ಜರುಗಲಿದ್ದು, ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಭಾರತ ಮತ್ತು ನೇಪಾಳದ ರಾಯಭಾರಿ ಅತೀ ವಂ|ಡಾ|ಲಿಯೊಪೊಲ್ಡೊ ಗಿರೆಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ದೇಶದ ಸುಮಾರು 18 ಮಂದಿ ಧರ್ಮಾಧ್ಯಕ್ಷರುಗಳು, 200ಕ್ಕೂ ಅಧಿಕ ಧರ್ಮಗುರುಗಳು ಹಾಗೂ 4000 ಭಕ್ತಾದಿಗಳು ಭಾಗವಹಿಸಲಿದ್ದು ಧರ್ಮಪ್ರಾಂತ್ಯದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗಲಿದೆ.
1949 ನವೆಂಬರ್ 12 ರಂದು ಬಂಟ್ವಾಳ ತಾಲೂಕಿನ ಅಗ್ರಾರ್ ನಲ್ಲಿ ಜನಿಸಿದ ಬಿಷಲ್ ಜೆರಾಲ್ಡ್ ಲೋಬೊ ಅವರ ಧಾರ್ಮಿಕ ಜೀವನ 15ನೇ ವಯಸ್ಸಿಗೆ ಆರಂಭವಾಯಿತು. 1977 ರಲ್ಲಿ ಅಂದಿನ ಮಂಗಳೂರು ಬಿಷಪ್ ದಿವಂಗತ ಅತಿ ವಂ|ಡಾ|ಬೆಸಿಲ್ ಎಸ್ ಡಿಸೋಜಾ ಅವರಿಂದ ಧಾರ್ಮಿಕ ದೀಕ್ಷೆಯನ್ನು ಸ್ವೀಕರಿಸಿದರು. ಉನ್ನತ ಹುದ್ದೆಯನ್ನು ಅಲಂಕರಿಸುವ ಮುನ್ನ ವಿವಿಧ ಚರ್ಚುಗಳಲ್ಲಿ ಧರ್ಮಗುರುಗಳಾಗಿ, ಇನ್ನಿತರ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಮಂಗಳೂರಿನ ಸಮಾಜ ಸೇವಾ ಸಂಘಟನೆ ಸಿಒಡಿಪಿ ಇದರ ನಿರ್ದೇಶಕರಾಗಿ ಬಡವರ ಸೇವೆ ಮತ್ತು ಏಳಿಗೆ ತನ್ನ ಪ್ರಮುಖ ಧ್ಯೇ ಯವೆನ್ನುವುದು ತಮ್ಮ ಕೃತಿಯಿಂದ ತೋರಿಸಿದರು.
2000 ಮಾರ್ಚ್ 20 ರಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಭಿಷಿಕ್ತರಾಗಿ ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಸಿದರು. 2012ರಲ್ಲಿ ನೂತನವಾಗಿ ಘೋಷಣೆಯಾದ ಉಡುಪಿ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕಗೊಂಡರು. ಅವರ ಅವಧಿಯಲ್ಲಿ ಪಾಲನಾ ಯೋಜನೆ 2025 ಅನುಷ್ಠಾನಗೊಂಡು 2030 ಕ್ಕೆ ಮುಂದುವರೆದಿದೆ. ಉಡುಪಿ ಧರ್ಮಪ್ರಾಂತ್ಯದ ಪಾಲನಾ ಯೋಜನೆ ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಈ ಯೋಜನೆಯು ಆಧ್ಯಾತ್ಮಿಕ ಬೆಳವಣಿಗೆ, ಪಾಲನಾ ಕಾಳಜಿಯೊಂದಿಗೆ ಸಾಮಾನ್ಯ ಜನರ, ಮಹಿಳೆಯರು, ಯುವಕರು ಮತ್ತು ವೃದ್ಧರ ಸರ್ವತೋಮುಖ ಅಭಿವೃದ್ಧಿಗೆ ಅದ್ಯತೆ ನೀಡಿದ್ದು ಇದು ಇತರ ಧರ್ಮಪ್ರಾಂತ್ಯಗಳಿಗೆ ಕೂಡ ಮಾದರಿಯಾಗಿದೆ.
ಧರ್ಮಾಧ್ಯಕ್ಷ ಲೋಬೊ ಅವರ ನೇತೃತ್ವದಲ್ಲಿ ಉಡುಪಿ ಧರ್ಮಪ್ರಾಂತ್ಯವು ಪ್ರಮುಖ ಸಂಸ್ಥೆಗಳಾದ ಪಾಲನಾ ಕೇಂದ್ರ, ನಿವೃತ್ತ ಯಾಜಕರ ನಿವಾಸ, ಕಾರ್ಕಳ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ ಸೇರಿದಂತೆ ಹಲವಾರು ನೂತನ ಚರ್ಚುಗಳನ್ನು ಸ್ಥಾಪಿಸಲು ಕಾರಣವಾಗಿದೆ. ಶಿಕ್ಷಣ, ಆರೋಗ್ಯ ಸೇವೆ ಮತ್ತು ಆಶ್ರಯವಿಲ್ಲದವರಿಗೆ ಮನೆಗಳ ವ್ಯವಸ್ಥೆ ಮಾಡುವಲ್ಲಿ ಅವರ ಕಾರ್ಯಗಳು ಸಾಮುದಾಯಿಕ ಚಿಂತನೆಯೊಂದಿಗೆ ಬಿಷಪ್ ಅವರ ಕರುಣಾಮಯ ಸೇವೆಯನ್ನು ಇನ್ನಷ್ಠು ಎತ್ತಿ ತೋರಿಸಿವೆ.
ತನ್ನ ಸರಳತೆಯ ಜೀವನ ಶೈಲಿಯೊಂದಿಗೆ ದೇವರಲ್ಲಿ ವಿಶೇಷ ಭಕ್ತಿ ಮತ್ತು ನಂಬಿಕೆಯಿಂದ ಸಾವಿರಾರು ಮಂದಿಯ ಮನಗೆಲ್ಲುವಲ್ಲಿ ಬಿಷಪ್ ಜೆರಾಲ್ಡ್ ಲೋಬೊ ಯಶಸ್ವಿಯಾಗಿರುತ್ತಾರೆ. ಅವರ ಬಿಡುವಿಲ್ಲದ ಕಾರ್ಯ ವೈಖರಿ ಹಾಗೂ ಬದ್ಧತೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಅವರು ಹಾಕಿಕೊಟ್ಟಿರುವ ಭದ್ರ ಬುನಾದಿ ಧರ್ಮಪ್ರಾಂತ್ಯದ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಧರ್ಮಾಧ್ಯಕ್ಷ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ದೂರದರ್ಶಿತ್ವ ಹಾಗೂ ನಾಯಕತ್ವಕ್ಕೆ ಗೌರವ ಅಭಿನಂದನೆ ಸಲ್ಲಿಸಲು ಧರ್ಮಪ್ರಾಂತ್ಯದ ಭಕ್ತಾದಿಗಳ ಅಪೇಕ್ಷೆಯಾಗಿದೆ. ನಿವೃತ್ತಿಯ ಅಂಚಿನಲ್ಲಿರುವ ಧರ್ಮಾಧ್ಯಕ್ಷರಿಗೆ ಉತ್ತಮ ಆರೋಗ್ಯ, ಮತ್ತು ಆಯುಷ್ಯವನ್ನು ಪ್ರಾರ್ಥಿಸುವುದರೊಂದಿಗೆ ಅವರ ಉತ್ತರಾಧಿಕಾರಿ ಕೂಡ ಅವರ ಹಾದಿಯಲ್ಲೇ ಮುನ್ನಡೆಯುವಂತಾಗಲಿ ಈ ಮೂಲಕ ಧರ್ಮಪ್ರಾಂತ್ಯವನ್ನು ಸೂಕ್ತ ದಾರಿಯಲ್ಲಿ ಮುನ್ನಡೆಸಲಿ ಎನ್ನುವುದು ಭಕ್ತವೃಂದದ ಬಯಕೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.