ಫೈಲು, ಬಂದೋಬಸ್ತು ಜಂಜಾಟ ಮರೆತು ಕೊಲ್ಲೂರಿನ ಕೊಡಚಾದ್ರಿ ಬೆಟ್ಟವೇರಿದ ಕುಂದಾಪುರದ ಪೊಲೀಸರು!

Spread the love

ಫೈಲು, ಬಂದೋಬಸ್ತು ಜಂಜಾಟ ಮರೆತು ಕೊಲ್ಲೂರಿನ ಕೊಡಚಾದ್ರಿ ಬೆಟ್ಟವೇರಿದ ಕುಂದಾಪುರದ ಪೊಲೀಸರು!

ಕುಂದಾಪುರ: ದಿನಾಲು ಕೇಸು, ಫೈಲು, ಬಂದೋಬಸ್ತ್, ಗಸ್ತು ತಿರುಗುವ ಜಂಜಾಟಗಳಿಂದ ಬಸವಳಿದು ಹೋಗಿದ್ದ ಪೊಲೀಸರು ಪಿಕ್ನಿಕ್ಗೆ ತೆರಳಿ ಮನಸ್ಸನ್ನು ಕೊಂಚ ರಿಲ್ಯಾಕ್ಸ್ ಮಾಡಿಕೊಂಡಿದ್ದಾರೆ. ಕುಂದಾಪುರ ಪೊಲೀಸ್ ಸಿಬ್ಬಂದಿಗಳು ಸಾಮೂಹಿಕವಾಗಿ ಪಿಕ್ನಿಕ್ಗೆ ತೆರಳಿದ್ದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವುದು ಮತ್ತೊಂದು ವಿಶೇಷ.

ಹಗಲಿರುಳು ದುಡಿದು ತಾಲೂಕಿನ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಈ ಪ್ರವಾಸ ಸಾಕಷ್ಟು ಮನೋಲ್ಲಾಸ ನೀಡಿದೆ. ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ಹರೀಶ್ ಆರ್ ನಾಯ್ಕ್ ನೇತೃತ್ವದಲ್ಲಿ ಪ್ರೊಬೇಶನರಿ ಪಿಎಸ್ಐ ಗಡ್ಡೇಕರ್, ಎಎಸ್ಐ ಸುಧಾಕರ್, ಹೆಡ್ಕಾನ್ಸ್ಟೇಬಲ್ಗಳು ಹಾಗೂ ಕಾನ್ಸ್ಟೇಬಲ್ಗಳು ಸೇರಿದಂತೆ 23 ಮಂದಿ ಕೊಲ್ಲೂರಿನ ಕೊಡಚಾದ್ರಿ ಬೆಟ್ಟವನ್ನು ಹತ್ತಿ ಸೂರ್ಯೋದಯ ಸೇರಿದಂತೆ ಅಲ್ಲಿನ ರಮಿಣೀಯವಾದ ಪೃಕೃತಿ ಸೌಂದರ್ಯವನ್ನು ಆಸ್ವಾದಿಸಿಕೊಂಡಿದ್ದಾರೆ.

ಕುಂದಾಪುರ ಪಿಎಸ್ಐ ಹರೀಶ್ ಆರ್ ನಾಯ್ಕ್ ಮನೋರಂಜನೆಗಾಗಿ ಠಾಣೆಯಲ್ಲಿರುವ ಸಿಬ್ಬಂದಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಪತ್ರದ ಮೂಲಕ ವಿನಂತಿಸಿಕೊಂಡಿದ್ದರು. ಆದರೆ ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಪ್ರವಾಸವನ್ನು ಮೊಟಕುಗೊಳಿಸಲಾಗಿದ್ದು, ತೀರ್ಪಿನ ಬಳಿಕ ಮತ್ತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಮನವಿ ಮಾಡಿಕೊಂಡು ಅವರಿಂದ ಅನುಮತಿ ಬಳಿಕ ಪ್ರವಾಸಕ್ಕೆ ತಯಾರಿ ನಡೆಸಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ 23 ಮಂದಿ ಪುರುಷ ಸಿಬ್ಬಂದಿಗಳು ಪ್ರವಾಸದಲ್ಲಿ ಭಾಗಿಯಾಗಿದ್ದು, ಉಳಿದ ಆರು ಸಿಬ್ಬಂದಿಗಳು ಠಾಣೆಯಲ್ಲೇ ಇದ್ದು, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಗುರುವಾರ ಸಂಜೆ ತಮ್ಮ ಖಾಸಗಿ ವಾಹನಗಳಲ್ಲಿ ತೆರಳಿದ ಪೊಲೀಸರ ತಂಡ ಕೊಲ್ಲೂರಿಗೆ ತೆರಳಿ ಅಲ್ಲಿಂದ ಕೊಡಚಾದ್ರಿಯಲ್ಲಿ ರಾತ್ರಿ ತಂಗಲು ಕೊಲ್ಲೂರಿನ ಅರಣ್ಯಾಧಿಕಾರಿಗಳ ಅನುಮತಿ ಪಡೆದು ಜೀಪ್ನ ಮೂಲಕ ಕೊಡಚಾದ್ರಿ ಬೆಟ್ಟವೇರಿದ್ದಾರೆ. ರಾತ್ರಿ ಅಲ್ಲಿಯೇ ಊಟ ತಯಾರಿಸಿಕೊಂಡು ರಾತ್ರಿಯಿಡೀ ಜಾಗರಣೆ ನಡೆಸಿ ಅಪರೂಪಕ್ಕೆ ತಮಗೆ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಬೆಳಿಗ್ಗೆ ಸೂರ್ಯೋದಯ ವೀಕ್ಷಿಸಿ ಮೂರು ಕಿಮೀ ದೂರದ ಸರ್ವಜÐಪೀಠಕ್ಕೆ ಟ್ರೆಕ್ಕಿಂಗ್ ಮೂಲಕ ಸಾಗಿ ಕೊಡಚಾದ್ರಿ ಬೆಟ್ಟದ ತುತ್ತತುದಿಯನ್ನೇರಿ ಅಲ್ಲಿನ ಪ್ರಕೃತಿ ರಮಣೀಯ ಸೌಂದರ್ಯವನ್ನು ಮೈದುಂಬಿಕೊಂಡಿದ್ದಾರೆ. ಶುಕ್ರವಾರ ಸಂಜೆ ಕುಂದಾಪುರಕ್ಕೆ ವಾಪಾಸಾದ ಪೊಲೀಸರು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇದೊಂದು ವಿಶೇಷ ಅನುಭವ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಠಾಣಾ ಸಿಬ್ಬಂದಿಗಳಿಗೆ ಒಂದಷ್ಟು ಮನೋರಂಜನೆ ನೀಡಲು ಕೊಡಚಾದ್ರಿ ಪ್ರವಾಸ ಕೈಗೊಂಡೆವು. ಮನೋರಂಜನೆಯಿಂದ ಸ್ವಲ್ಪ ರಿಲ್ಯಾಕ್ಸ್ ಆಗಿದ್ದರಿಂದ ಸಿಬ್ಬಂದಿಗಳು ಠಾಣೆಯಲ್ಲಿ ಇನ್ನೂ ಉತ್ತಮವಾಗಿ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಕಾನೂನು ಕಾಪಾಡಿಕೊಳ್ಳುವ ಜೊತೆಯಲ್ಲಿ ಮನೋರಂಜನೆಗೂ ಅವಕಾಶ ಕಲ್ಪಿಸಿದ್ದೇವೆ. ಒಂದು ದಿನದ ಪ್ರವಾಸ ಮನಸ್ಸಿಗೆ ಮುದ ನೀಡಿದೆ ಎನ್ನುತ್ತಾರೆ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್.

ಪೊಲೀಸ್ ಹಾಗೂ ಬೆರಳೆಣಿಕೆಯ ಇನ್ನಿತರ ಇಲಾಖೆಗಳನ್ನು ಹೊರತುಡಿಸಿ ಸರ್ಕಾರಿ ಸಂಬಳ ಪಡೆಯುವ ಎಲ್ಲಾ ಇಲಾಖೆಯ ನೌಕರರಿಗೂ ಎಂಜಾಯ್ ಮಾಡಲು ಸಮಯ ಸಿಗುತ್ತದೆ. ಆದರೆ ಪೊಲೀಸರು ಒತ್ತಡದಲ್ಲೇ ಕೆಲಸ ನಿರ್ವಹಿಸುತ್ತಾರೆ. ಕುಂದಾಪುರ ಪೊಲೀಸರು ಪ್ರವಾಸ ಕೈಗೊಂಡಿರುವುದು ಒಂದು ಒಳ್ಳೆಯ ಬೆಳವಣಿಗೆ. ಸದಾ ಒತ್ತಡದಲ್ಲಿರುವವರಿಗೆ ಇಂತಹ ಮನೋರಂಜನೆ ಅತ್ಯಗತ್ಯ. ನಿಜವಾಗಿಯೂ ಇಲಾಖೆಯೇ ಮುತುವರ್ಜಿ ವಹಿಸಿ ಇಂತಹ ಅವಕಾಶಗಳನ್ನು ಮತ್ತೆ ಮತ್ತೆ ಕಲ್ಪಿಸಿಕೊಡಬೇಕು ಎನ್ನುವ ಅಭಿಪ್ರಾಯ ಬರಹಗಾರರಾದ ಉದಯ್ ಶೆಟ್ಟಿ ಪಡುಕೆರೆ ಅವರದ್ದು.

ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೋಸ್ಕರ ಕುಟುಂಬದಿಂದ ದೂರ ಉಳಿಯುವ ಪೊಲೀಸರು ಪ್ರವಾಸ ಕೈಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರವಾಸ ಕೈಗೊಂಡಿರುವುದರಿಂದ ಯಾವಾಗಲೂ ಕರ್ತವ್ಯದ ಒತ್ತಡದಲ್ಲೇ ಇರುತ್ತಿದ್ದ ಪೊಲೀಸರು ಓಂದಷ್ಟು ಮಾತು, ಹರಟೆ, ತಮಾಶೆಯ ಮೂಲಕ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಕುಂದಾಪುರ ಪೊಲೀಸರು ಕೈಗೊಂಡಿರುವ ಈ ಪ್ರವಾಸದ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪೊಲೀಸರ ಪ್ರವಾಸಕ್ಕೆ ಸಾರ್ವಜನಿಕರು ಭೇಷ್ ಎಂದಿದ್ದಾರೆ.


Spread the love