ಫ್ಲ್ಯಾಟ್ ನಿಂದ ಚಿನ್ನಾಭರಣ ಕಳವು ಪ್ರಕರಣ; ಏಳು ಆರೋಪಿಗಳ ಬಂಧನ
ಮಂಗಳೂರು: ನಗರದ ಬಲ್ಮಠದ ಸಮೀಪದ ಅಪಾರ್ಟ್ಮೆಂಟ್ನ 6ನೇ ಮಹಡಿಯ ಫ್ಲ್ಯಾಟ್ವೊಂದರಿಂದ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಏಳು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಭಾಗ್ ಕದ್ರಿ ನಿವಾಸಿ ರಾಕೇಶ್ ಬೋನಿಪಾಸ್ ಡಿಸೋಜ(37), ಗೋವಾ ಮಡಗಾಂವ್ ನಿವಾಸಿಗಳಾದ ಅಶೋಕ್ ಬಂಡ್ರಗಾರ್ (36), ಗಣೇಶ್ ಬಾಪು ಪರಾಬ್ (37), ಬೆಂದೂರ್ವೆಲ್ ನಿವಾಸಿ ಶಾಹೀರ್ ಮುಹಮ್ಮದ್ (43), ಸೋಮೇಶ್ವರ ನಿವಾಸಿ ಜನಾರ್ದನ ಆಚಾರ್ಯ (41), ಮಂಗಳಾದೇವಿ ನಿವಾಸಿ ಚಂದನ್ ಆಚಾರ್ಯ (44) ಹಾಗೂ ಕೋಟೆಕಾರ್ ಬೀರಿ ನಿವಾಸಿ ಪುರುಷೊತ್ತಮ್ ಆಚಾರ್ಯ (46) ಬಂಧಿತ ಆರೋಪಿಗಳು.
ಸೆ.8ರಿಂದ 13ರ ಬೆಳಗ್ಗೆ 10 ಗಂಟೆ ಮಧ್ಯೆ ಯಾರೋ ಕಳ್ಳರು ಬೆಂದೂರ್ವೆಲ್ ಫ್ಲಾಟ್ ನ ಡಕ್ಟ್ ವೆಂಟಿಲೇಟರ್ ನ ಮೂಲಕ 604 ನೇ ಪ್ಲಾಟ್ ನ ಬಾತ್ ರೂಮ್ ಮುಖಾಂತರ ಒಳಗೆ ಪ್ರವೇಶಿಸಿ ಪ್ಲಾಟ್ ನ ಒಳಗೆ ಮಾಸ್ಟರ್ ಬೆಡ್ ರೂಮ್ ನಲ್ಲಿದ್ದ ಲಾಕರ್ ನ್ನು ಆಯುಧದಿಂದ ಮುರಿದಿದ್ದರು. ಅದರಲ್ಲಿದ್ದ 65,000 ರೂ. ನಗದು ಹಾಗೂ ಸುಮಾರು 35 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಕಿವಿಯೋಲೆ, ಚಿನ್ನದ ಬಳೆಗಳು, ಚಿನ್ನದ ಬ್ರಾಸ್ ಲೈಟ್ , ಚಿನ್ನದ ನೆಕ್ಲೇಸ್, ಡೈಮಂಡ್ ನೆಕ್ಲೇಸ್, ಡೈಮಂಡ್ ರಿಂಗ್, ಚಿನ್ನದ ವಾಚ್, ಚಿನ್ನದ ನಾಣ್ಯಗಳನ್ನು ಕಳವುಗೈದಿದ್ದರು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತ ಆರೋಪಿಗಳಿಂದ ಸುಮಾರು ಅಂದಾಜು 34 ಲಕ್ಷ ರೂ. ಮೊತ್ತದ ಬಂಗಾರದ ಮತ್ತು ವಜ್ರದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ಕ್ಕೆ ಬಳಸಿದ ಚಿನ್ನ ಕರಗಿಸುವ ಯಂತ್ರ ಕೃತ್ಯಕ್ಕೆ ಉಪಯೋಗಿಸಿದ ಎರಡು ಕಾರು, ಒಂದು ಮೋಟಾರ್ ಸೈಕಲ್ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.