ಬಗೆಹರಿಯದ ಕಾಪು ತಾಲೂಕು ಕಛೇರಿ ಸಮಸ್ಯೆ – ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ

Spread the love

ಬಗೆಹರಿಯದ ಕಾಪು ತಾಲೂಕು ಕಛೇರಿ ಸಮಸ್ಯೆ – ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ

ಉಡುಪಿ: ಕಾಪು ತಾಲೂಕು ಘೋಷಣೆಯಾಗಿ ವರ್ಷಗಳೇ ಕಳೆದರೂ ಮತ್ತೆ ಕಾಪು ತಾಲೂಕಿನ ಜನರ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಕಳೆದ ಬಾರಿ ಕಾಪು ತಾಲೂಕಿಗೆ ಪೂರ್ಣಕಾಲಿಕ ತಹಶೀಲ್ದಾರ್ ಬೇಕು ಎಂಬ ಬಗ್ಗೆ ಕಾಪು ಯುವ ಕಾಂಗ್ರೆಸ್ ತಹಶೀಲ್ದಾರ್ ನೇಮಕಕ್ಕಾಗಿ ಆಗ್ರಹಿಸಿದ್ದು ಈಗ ತಹಶೀಲ್ದಾರ್ ನೇಮಕವಾದರೂ ಇನ್ನೂ ಅನೇಕ ಸಮಸ್ಯೆಗಳು ಪರಿಹಾರ ಕಾಣದೇ ಹಾಗಯೇ ಉಳಿದುಕೊಂಡಿವೆ. ಸರ್ವೆ ಇಲಾಖೆ ಕಾಪುವಿಗೆ ಸ್ಥಳಾಂತರಗೊಂಡಿದ್ದರೂ ಅದಕ್ಕೆ ಸಂಬಂಧಪಟ್ಟ ಭೂಮಿ ಶಾಖೆ ಇನ್ನೂ ಕೂಡಾ ಉಡುಪಿಯಲ್ಲಿ ಕಾರ್ಯನಿರ್ವಯಿಸುತ್ತಿದ್ದು ಇದರಿಂದ ಜನರಿಗೆ ತಂಬಾ ಸಮಸ್ಯೆಯಾಗುತ್ತಿದೆ. ಭೂಮಿ ಶಾಖೆ ಕಾಪುವಿಗೆ ವರ್ಗಾವಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ ಭೂನ್ಯಾಯ ಮಂಡಳಿ ಕಡತಗಳಿಗಾಗಿ, ಹಳೆಯ ಜನನ ಪ್ರಮಾಣಪತ್ರ, ಕೈಬರಹದ ಪಹಣಿಪತ್ರಿಕೆ, ಮ್ಯುಟೇಶನ್‍ಗಳ ನಕಲು ಪ್ರತಿಗಳಿಗಾಗಿ ಜನರು ಉಡುಪಿಗೆ ಅಲೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಉಡುಪಿಯಲ್ಲಿ ತಾಲೂಕು ಕಚೇರಿ ನಗರದಿಂದ ತುಂಬಾ ದೂರದಲ್ಲಿದೆ. ಅಲ್ಲದೆ ಕಾಪುವಿನಲ್ಲಿ ಆರಂಭವಾಗಬೇಕಾಗಿದ್ದ ಸಬ್ ರಿಜಿಸ್ಟ್ರಾರ್ ಕಚೇರಿ ಇನ್ನೂ ಉಡುಪಿ ಮತ್ತು ಮೂಲ್ಕಿಯಲ್ಲೇ ಇದೆ. ಭೂನ್ಯಾಯಮಂಡಳಿಯಲ್ಲಿ ಅನೇಕ ಪ್ರಕರಣಗಳು ಬಾಕಿ ಉಳಿದಿದ್ದು ಒಂದು ವರ್ಷದಿಂದ ಸಮಿತಿಯೇ ರಚನೆಯಾಗಿಲ್ಲ. ಇದಕ್ಕೆ ಕೂಡಲೇ ಪರಿಹಾರ ಸಿಗಲು ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಶ್ರಮಿಸಬೇಕೆಂದು ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಮೆಲ್ವಿನ್ ಡಿಸೋಜ ಒತ್ತಾಯಿಸಿದ್ದಾರೆ.

ಅಲ್ಲದೆ ಭೂಪರಿವರ್ತನೆಯ ನಿಯಮಗಳು ಪದೇ ಪದೇ ಬದಲಾಗುತ್ತಿದ್ದು ಜನರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ. ಅದೇ ರೀತಿಯಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರವರ ನ್ಯಾಯಲಯದ ಪ್ರಕರಣಗಳು ಕಾಪುವಿನಲ್ಲಿ ನಡಯದೇ ಉಡುಪಿಯಲ್ಲೇ ನಡೆಯುತ್ತಿದ್ದು ಸುಮಾರು ಮೂರು ತಿಂಗಳಿನಿಂದ ಸದ್ರಿ ಬೈಠಕ್‍ಗಳು ನಡೆಯದೆ ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿವೆ. ಮ್ಯೂಟೇಶನ್ ಪ್ರಕ್ರಿಯೆಯಲ್ಲಿ ಆನ್ಲೈನ್ ಸಿಸ್ಟಮ್‍ನಲ್ಲಿ ತಪ್ಪುಗಳು ನಡೆಯುತ್ತಿದ್ದು ಅದನ್ನು ಸರಿಪಡಿಸಲು ಜನರು ಕುಂದಾಪುರ ಸಹಾಯಕ ಕಚೇರಿಗೆ ನಲಿಯುವಂತಾಗಿದೆ. ಅಪೀಲು ಸಲ್ಲಿಸಿ ಒಂದು ವರ್ಷವಾದರೂ ಆದೇಶಗಳು ಬರುತ್ತಿಲ್ಲ. ಪದೇ ಪದೇ ಸಹಾಯಕ ಕಮಿಷನರ್ ರವರ ವರ್ಗಾವಣೆಗಳೂ ಇದಕ್ಕೆ ಕಾರಣವಾಗಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಂದಾಗಿ ಜನರು ನಿತ್ಯ ಪರದಾಡುವಂತಾಗಿದೆ.

ಸಾಕಷ್ಟು ಪ್ರಯತ್ನ ಪಟ್ಟು ಪಡೆದುಕೊಂಡ ಕಾಪು ತಾಲೂಕಿನ ಲಾಭ ಜನರಿಗೆ ನ್ಯಾಯವಾಗಿ ಸಿಗಬೇಕಾಗಿದ್ದು ತಾಲೂಕು ಕಛೇರಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಅಗತ್ಯ ಕ್ರಮ ಕೈಗೊಳ್ಳಲಿ ಎಂದವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.


Spread the love