ಬಜಪೆ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ; ಐದು ದ್ವಿಚಕ್ರ ವಾಹನ ಕಳ್ಳರ ಬಂಧನ
ಮಂಗಳೂರು: ಬಜ್ಪೆ ಠಾಣಾ ಪೊಲೀಸರು ಕಳವು ಮಾಡಿದ್ದ ಏಳು ಬೈಕ್ ಗಳ ಸಮೇತ ಐವರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸುರತ್ಕಲ್ 3 ನೇ ಬ್ಲಾಕ್ ಜನತಾ ಕಾಲೋನಿ ನಿವಾಸಿ ವಿಜಯ ಅಲಿಯಾಸ್ ವಿಜಯ ಬೋವಿ, ಗುರುಪುರ ಉಳಾಯಿಬೆಟ್ಟು ಗ್ರಾಮ ನಿವಾಸಿ ಪ್ರದೀಪ್ ಪೂಜಾರಿ(27), ಮೂಲ್ಕಿ ಚಿತ್ರಾಪು ಅಶ್ವಥಕಟ್ಟೆಯ ಬಳಿಯ ನಿವಾಸಿ ಅಭಿಜಿತ್(26), ಕೃಷ್ಣಾಪುರ 5ನೇ ಬ್ಲಾಕ್ ನಿವಾಸಿ ರಕ್ಷಿತ್ ಕುಲಾಲ್(22) ಮತ್ತು ಹೂಹಾಕುವಕಲ್ಲು ನಿವಾಸಿ ಸುದೀಶ್ ನಾಯರ್ ಅಲಿಯಾಸ್ ಸುದೀಶ್ ಕೆ.ಕೆ ಯಾನೆ ಮುನ್ನಾ(20) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಅಗಸ್ಟ್ 6 ರಂದು ಸಂಜೆ 4 ಗಂಟೆಯ ಸುಮಾರಿಗೆ ಬಜ್ಪೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಪಿ ಎಸ್ ಐ ಸಿಬ್ಬಂದಿಯೊಂದಿಗೆ ಠಾಣಾ ವ್ಯಾಪ್ತಿಯ ದಡ್ಡಿ ಕ್ರಾಸ್ ಎಂಬಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಮಯ ಸಂಶಯಾಸ್ಪದ ರೀತಿಯಲ್ಲಿ 2 ಬೈಕುಗಳಲ್ಲಿ ಬರುತ್ತಿದ್ದ ನಾಲ್ವರು ಯುವಕರನ್ನು ತಡೆದು ನಿಲ್ಲಿಸಿ ದಾಖಲೆಪತ್ರ ತೋರಿಸುವಂತೆ ತಿಳಿಸಿದಾಗ ಅವರಲ್ಲಿ ಯಾವುದೇ ದಾಖಲೆಗಳು ಇಲ್ಲದೇ ಇದ್ದು ವಿಚಾರಣೆ ನಡೆಸಿದಾಗ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಸಿ.ಸಿ. ಬ್ಯಾಂಕ್ ಬಳಿಯಿಂದ ಬಜಾಜ್ ಡಿಸ್ಕವರ್ ಬೈಕ್, ಈಶ್ವರಕಟ್ಟೆಯ ಬಳಿಯಿಂದ ಕೆಂಪು ಬಣ್ಣದ ಪಲ್ಸರ್ ಎನ್.ಎಸ್. ಬೈಕ್, ಎಡಪದವು ಎಂಬಲ್ಲಿಂದ ಕಪ್ಪು ಬಣ್ಣದ ಪಲ್ಸಾರ್ ಬೈಕ್, ಎಡಪದವು ಗಣೇಶ್ ಮಿಲ್ ಬಳಿಯಿಂದ ಬೈಕ್ ಹಾಗು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರಿನಿಂದ ಕೆಂಪು ಬಣ್ಣದ ಪಲ್ಸರ್ ಬೈಕ್ ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕಡೆಯಿಂದ ಬಿಳಿ ಬಣ್ಣದ ಹೋಂಡಾ ಆಕ್ಟಿವಾ ಸ್ಕೂಟರ್ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಅಂದಾಜು 5 ಲಕ್ಷ ರೂ. ಮೌಲ್ಯದ ಒಟ್ಟು 7 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿ ವಿಜಯ ಎಂಬಾತನ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು ಪ್ರಕರಣಗಳು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು ಪ್ರಕರಣಗಳು, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 1 ಬೈಕ್ ಕಳವು ಪ್ರಕರಣ, ಪಣಂಬೂರು ಪೊಲೀಸ್ ಠಾಣೆಯಲ್ಲಿ 1 ಬೈಕ್ ಕಳವು ಪ್ರಕರಣ, ಕಾವೂರಿನಲ್ಲಿ ಒಂದು ಬೈಕ್ ಕಳವು ಮತ್ತು ಒಂದು ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
ಆರೋಪಿ ಪ್ರದೀಪ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಭೂಗತ ಪಾತಕಿ ಮಾಡೂರು ಯುಸೂಪ್ ಕೊಲೆ ಪ್ರಕರಣ, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು, ಆರ್ಮ್ಸ್ ಆಕ್ಟ್ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಟಿಕ್ಕಿ ಮೋಹನ್ ಕೊಲೆಗೆ ಯತ್ನ ಪ್ರಕರಣ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು ಪ್ರಕರಣಗಳು, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 1 ಬೈಕ್ ಕಳವು ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿ ಅಭಿಜಿತ್ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಗಲಾಟೆಗೆ ಸಂಬಂಧಿಸಿದ 3 ಪ್ರಕರಣ, ಮೈಸೂರು ನರಸಿಂಹ ರಾಜ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ, ಬಜಪೆ ಪೊಲೀಸ್ ಠಾಣೆಯಲ್ಲಿ 2 ಬೈಕ್ ಕಳವು ಪ್ರಕರಣ ದಾಖಲಾಗಿರುತ್ತದೆ.
ರಕ್ಷಿತ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಬಜ್ಪೆ ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
ಆರೋಪಿ ಸುದೀಶ್ ನಾಯರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು ಪ್ರಕರಣಗಳು, ಉಳ್ಳಾಲ್ ಪೊಲೀಸ್ ಠಾಣೆಯಲ್ಲಿ ಗಲಾಟೆಗೆ ಸಂಬಂಧಿಸಿದ 1 ಪ್ರಕರಣ, ಬಜ್ಪೆ ಮತ್ತು ಪಣಂಬೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಆರೋಪಿಗಳು ಮೂಡಬಿದ್ರೆ ಪೇಟೆಯ ಆಂಜನೇಯ ದೇವಸ್ಥಾನದ ಎದುರು ಇರುವ ಚಿನ್ನದ ಅಂಗಡಿಯೊಂದರ ದರೋಡೆ ಮಾಡಲು ಸಂಚು ರೂಪಿಸಿರುವುದಾಗಿ ತಿಳಿದು ಬಂದಿರುತ್ತದೆ.
ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಅವರ ಮಾರ್ಗದರ್ಶನದಂತೆ, ಎಸಿಪಿ ಅರುಣಾಂಶು ಗಿರಿ ಮತ್ತು ಲಕ್ಷ್ಮೀಗಣೇಶ್ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ಮತ್ತು ಪೊಲೀಸ್ ನಿರೀಕ್ಷಕ ಕೆ. ಆರ್ ನಾಯ್ಕ್ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಪಿ.ಎಸ್.ಐ ಕಮಲಾ, ಪಿ.ಎಸ್.ಐ ಸತೀಶ್ ಎಂ.ಪಿ, ಪಿ.ಎಸ್.ಐ ರಾಘವೇಂದ್ರ ನಾಯ್ಕ, ಸಿಬ್ಬಂದಿ ಎ.ಎಸ್.ಐ ರಾಮ ಪೂಜಾರಿ, ರಾಮಚಂದ್ರ, ಹೊನ್ನಪ್ಪ ಗೌಡ, ಸುಧೀರ್ ಶೆಟ್ಟಿ, ರಾಜೇಶ್, ಸಂತೋಷ್ ಡಿ.ಕೆ., ರೋಹಿತ್ ಕುಮಾರ್, ವಕೀಲ್ ಎನ್ ಲಮಾಣಿ, ರಶೀದ ಶೇಖ್, ಕುಮಾರ್ ಸ್ವಾಮಿ ಮತ್ತು ಸಂಜೀವ ಅವರುಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.