Home Mangalorean News Kannada News ಬಡತನದಲ್ಲೂ ವೇಷ ಹಾಕಿ ಅನಾರೋಗ್ಯ ಪೀಡಿತ 7 ಮಕ್ಕಳಿಗೆ ನೆರವಾದ ರವಿ ಕಟಪಾಡಿ

ಬಡತನದಲ್ಲೂ ವೇಷ ಹಾಕಿ ಅನಾರೋಗ್ಯ ಪೀಡಿತ 7 ಮಕ್ಕಳಿಗೆ ನೆರವಾದ ರವಿ ಕಟಪಾಡಿ

Spread the love

ಬಡತನದಲ್ಲೂ ವೇಷ ಹಾಕಿ ಅನಾರೋಗ್ಯ ಪೀಡಿತ 7 ಮಕ್ಕಳಿಗೆ ನೆರವಾದ ರವಿ ಕಟಪಾಡಿ

ಉಡುಪಿ: ಸಮಾಜದಲ್ಲಿ ತನಗಾಗಿ ಬಾಳುವವರೇ ಹೆಚ್ಚಿದ್ದು ಅಂತಹವರ ನಡುವೆ ರವಿ ಕಟಪಾಡಿ ಅವರ ತನ್ನ ಬಡತನದಲ್ಲೂ ಕೂಡ ಇತರರಿಗೆ ಮಿಡಿಯುತ್ತಿರುವುವ ಕೆಲಸಸ ವರ್ಣಿಸಲು ಅಸಾಧ್ಯ. ಇತರರಿಗಾಗಿ  ಬಾಳುವ ರವಿ ಕಟಪಾಡಿ ಅವರಂತಹ ನೂರಾರು ಮಂದಿ ಸಮಾಜದಲ್ಲಿ ಮೂಡಿ ಬರುವವಂತಾಗಬೇಕು ಎಂದು ಕೇಮಾರು ಶ್ರೀ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳೀದರು.

ಅವರು ಮಂಗಳವಾರ ಕಟಪಾಡಿಯಲ್ಲಿ ರವಿ ಕಟಪಾಡಿ ಮತ್ತು ಫ್ರೇಂಡ್ಸ್ ತಂಡದವರು ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷಧರಿಸಿದ ಸಂಗ್ರಹಿಸಿದ ರೂ 5.12 ಲಕ್ಷ ರೂ ದೇಣಿಗೆಯ ಮೊತ್ತವನ್ನು 7 ಬಡ ಕುಟುಂಬಗಳ ಅನಾರೋಗ್ಯಪೀಡಿತ ಮಕ್ಕಳಿಗೆ ಹಸ್ತಾಂತರ ಮಾಡಿ ಮಾತನಾಡಿದರು.

ನಾನು ನನ್ನ ಜೀವನದಲ್ಲಿ ಹಲವಾರು ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳಿಗೆ ತೆರಳಿದ್ದೇನೆ ಆದರೆ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತನಗೆ ಅತೀವ ಸಂತೋಷ ನೀಡಿದೆ ಎಂದ ಸ್ವಾಮೀಜಿಯವರು, ಇಂದು ಪ್ರತಿಯೊಂದು ಸಮುದಾಯ ದೇವಾಲಯ, ಚರ್ಚು, ಮಸೀದಿಗಳನ್ನು ಕಟ್ಟುತ್ತಾರೆ ಆದರೆ ಅದಕ್ಕಿಂತಲೂ ದೊಡ್ಡ ಕಾರ್ಯವನ್ನು ಒರ್ವ ಕೂಲಿ ಕಾರ್ಮಿಕನಾಗಿ ರವಿ ಕಟಪಾಡಿ ಮಾಡಿದ್ದು ಶ್ಲಾಘನೀಯವಾಗಿದೆ. ತಮ್ಮ ಮುಖಕ್ಕೆ ಬಣ್ಣ ಹಚ್ಚಿಕೊಂಡು ತಮ್ಮ ವಿಲಾಸೀ ಜೀವನಕ್ಕಾಗಿ ಸಮಾಜದ ಮುಂದೆ ಕೈಯೊಡ್ಡುವ ಎಷ್ಟೋ ಜನರನ್ನು ನಮ್ಮ ನಡುವೆ ನೋಡುತ್ತಿದ್ದೇವೆ ಆದರೆ ಇತರರ ಸೇವೆಗಾಗಿ ತಾನು ವೇಷ ಧರಿಸಿ ಸಮಾಜದ ಮುಂದೆ ಕೈಯೊಡ್ಡುವ ಮೂಲಕ ರವಿ ಕಟಪಾಡಿ ಮಾದರಿಯಾಗಿದ್ದಾರೆ. ಇಂತಹ ವ್ಯಕ್ತಿ ಸರಕಾರಗಳು ಗುರುತಿಸಿ ಮುಂದಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬೇಕು. ಪ್ರಶಸ್ತಿಗಳು ಇಂದು ಮಾರಾಟದ ವಸ್ತುಗಳಾಗಿವೆ ಅದರ ನಡುವೆ ರವಿ ಕಟಪಾಡಿ ಇಂತಹ ಕೆಲಸಗಳ ಮೂಲಕ ಪ್ರಶಸ್ತಿ ಪಡೆಯಲು ಅರ್ಹವ್ಯಕ್ತಿಯಾಗಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಅವರು ಮಾತನಾಡಿ ರವಿ ಕಟಪಾಡಿ ಅವರು ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಕಳೆದ 4 ವರ್ಷಗಳಿಂದ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ  ಅವರ ಸಮಾಜಮುಖಿ ಭಾವನೆ ಮಾದರಿಯಾಗಿದೆ ಎಂದರು.

ಕಟಪಾಡಿ ಕೆ.ವಿ.ಎಸ್.ಎಂ ಕಾಲೇಜಿನ ಸಂಚಾಲಕ ಮಹೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಚರ್ಮ ರೋಗದಿಂದ ಬಳಲುತ್ತಿರುವ ಮೂಡಬಿದರೆ ದರೆಗುಡ್ಡೆಯ ಒಂದುವರೆ ವರ್ಷದ ಲಾವಣ್ಯಗೆ ರೂ. 2.50 ಲಕ್ಷ, ಶಿವಮೊಗ್ಗದ ಮೆಹಕ್ ಜೀ ಅವರಿಗೆ ರೂ. 60,000, ದೆಂದೂರುಕಟ್ಟೆಯ ಸುನೀತಾ ಪ್ರಕಾಶ್ ದಂಪತಿಯ ಒಂದೂವರೆ ತಿಂಗಳ ಮಗುವಿನ ಹೃದಯ ಚಿಕಿತ್ಸೆಗೆ ರೂ. 55000, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಪಾಂಗಾಳದ ಕಿಶನ್ ಅವರಿಗೆ ರೂ 50000, ಹೃದಯ ಕಾಯಿಲೆಯಿಂದ ಬಳಲುತ್ತಿರುವ ಬನ್ನಂಜೆಯ ಅರುಷ್ ಅವರಿಗೆ ರೂ 35000, ಅಂಗವೈಕಲ್ಯದಿಂದ ಬಳಲುತ್ತಿರುವ ಅತೀಶ್ ಶೆಟ್ಟಿ ಕುಂದಾಪುರ ಅವರಿಗೆ ರೂ 30000, ಅಲೆವೂರಿನ ಅರುಷಿ ಅವರಿಗೆ ರೂ 15000 ಹಣಕಾಸಿನ ನೆರವನ್ನು ವಿತರಿಸಲಾಯಿತು.

ಕಳೆದ ಮೂರು ವರ್ಷಗಳಿಂದ ಸುಮಾರು ರೂ 9 ಲಕ್ಷ ಸಾಮಾಜಿಕ ಸೇವೆಗೆ ನೆರವು ನೀಡಿ ಗಮನ ಸೆಳೆದಿ ರುವ ರವಿ ಮತ್ತು ಅವರ ಗೆಳೆಯರು, ಈ ಬಾರಿ ನಾಲ್ವರು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ   ವೇಷ ಹಾಕಿಯೇ ಹಣ ಸಂಗ್ರಹಿಸಲು ಮುಂದಾಗಿದ್ದರು. ಅದರಂತೆ ಸೆಪ್ಟೆಂಬರ್ 13 ಮತ್ತು 14 ರಂದು ಕ್ರಾಂಪಸ್ ವೇಷದಲ್ಲಿ ಉಡುಪಿ ಮಲ್ಪೆ ಪರಿಸರದಲ್ಲಿ ತಿರುಗಾಡಿ ರೂ. 5.12 ಲಕ್ಷ ಸಂಗ್ರಹಸಿದ್ದರು. ಮೊದಲು ನಾಲ್ಕು ಅನಾರೋಗ್ಯಪೀಡಿತ ಮಕ್ಕಳಿಗೆ ನೆರವಾಗಲು ನಿರ್ಧರಿಸಿದ್ದಾದರೂ ಹೆಚ್ಚು ಮನವಿಗಳು ಬಂದ ಕಾರಣ ಕೊನೆಗೆ 7 ಮಕ್ಕಳಿಗೆ ನೀಡಲು ನಿರ್ಧರಿಸಲಾಯಿತು.

ಆಧುನಿಕ ಮಾದರಿಯ ಅದರಲ್ಲೂ ಹಾಲಿವುಡ್, ಎನಿಮೇಷನ್ ಚಿತ್ರಗಳಿಂದ ಆಯ್ದ ಮಾದರಿಯ ಕಲಾತ್ಮಕವೇಷ ಹಾಕುವುದರಲ್ಲಿ ನಿಷ್ಣಾತರಾಗಿರುವ ರವಿ ಕಟಪಾಡಿ ಅವರು ಪ್ರತೀ ವರ್ಷ ತಾನು ಹಾಕುವ ವೇಷದ ಬಗ್ಗೆಯೂ ಕುತೂಹಲ ಮೂಡಿಸುವಲ್ಲಿ ನಿಸ್ಸೀಮರು. ಈ ಬಾರಿ ಕ್ರಾಂಪಸ್ ವೇಷದಲ್ಲಿ ದೇಣಿಗೆ ಸಂಗ್ರಹಕ್ಕೆ ಇಳಿದಿದ್ದಾರೆ. ವೇಷ ಹಾಕಿ ಕೇವಲ ಜನರಿಂದ ಹಣ ಸಂಗ್ರಹಿಸುವುದಲ್ಲದೆ ಸ್ವತಃ ರವಿ ಅವರು ತಿಂಗಳ ಪ್ರತಿ ಶನಿವಾರದ ಸಂಬಳದಲ್ಲಿ ಸ್ವಲ್ಪ ಹಣವನ್ನು ಇದಕ್ಕಾಗಿ ತೆಗೆದಿರಿಸುತ್ತಾರೆ.

2014ರಲ್ಲಿ ಫ್ರಾನ್ಸ್ ಲೆಬ್ರೆಂತ್ ವೇಷ ಹಾಕಿ ರೂ. 1.04 ಲಕ್ಷ ಸಂಗ್ರಹಿಸಿ ಎಳ್ಳಂಪಳ್ಳಿಯ ಮೂಕಾಂಬಿಕ ಅವರ ಮಗಳು ಅನ್ವಿತಾಳ ಶಸ್ತ್ರ ಚಿಕಿತ್ಸೆಗೆ ನೀಡಿ ಗಮನಸೆಳೆದರು. ಈ ಸೇವೆಯಿಂದ ಪ್ರೇರಿತರಾಗಿ 2015ರಲ್ಲಿ ಮತ್ತೆ ಆಕರ್ಷಕ ಲಿಜಾರ್ಡ್ ಮ್ಯಾನ್ ವೇಷಧರಿಸಿ ರೂ. 3.20ಲಕ್ಷ ಸಂಗ್ರಹಿಸಿ ವಿವಿಧೆಡೆಯ 4 ಮಕ್ಕಳ ಆರೋಗ್ಯ ನೆರವಿಗಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿದ್ದ ಕೆ.ಅಣ್ಣಾಮಲೈ ಅವರ ಮೂಲಕ ವಿತರಿಸಿದರು.  ಇವರಿಂದ ಪ್ರೇರಿತರಾಗಿ ಎಸ್ಪಿ ಕೆ.ಅಣ್ಣಾಮಲೈ ಅವರು ಕೂಡಾ ರೂ 10 ಸಾವಿರ ದೇಣಿಗೆ ಮಕ್ಕಳಿಗೆ ನೀಡಿದ್ದರು. ಈ ಜನಸೇವೆಯನ್ನು ಮುಂದುವರಿಸುತ್ತಾ 2016 ರಲ್ಲಿ ಕೂಡಾ 4 ಮಕ್ಕಳ ಆರೋಗ್ಯ ನೆರವಿಗೆ  ಮಮ್ಮಿ ರಿಟರ್ನ್‌ ಸಿನೆಮಾದ ಮಮ್ಮಿ ವೇಷ ವೇಷಹಾಕಿ ದೇಣಿಗೆ ಸಂಗ್ರಹಿಸಿ ಅಂದಿನ ಜಿಲ್ಲಾ ಪಂಚಾಯತ್ ಸಿಇಒ ಪ್ರಸ್ತುತ ಜಿಲ್ಲಾಧಿಕಾರಿಗಳಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಂದ ವಿತರಿಸಿದ್ದರು.

ತಮಗೆ ಬಡತನವಿದ್ದರೂ ಇತರರ ನೋವಿಗೆ ಸ್ಪಂದಿಸುವ ಹೃದಯ ವಿಶಾಲತೆ ಯನ್ನು ಹೊಂದಿರುವ ಈ ತಂಡ, ಅನಾರೋಗ್ಯದಿಂದ ಬಳಲುತ್ತಿರುವ ನಾಲ್ಕು ಬಡಮಕ್ಕಳ ಜೀವರಕ್ಷಣೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love

Exit mobile version