Home Mangalorean News Kannada News ಬರ ನಿರ್ವಹಣೆಗೆ ಹಣಕಾಸು ಸಮಸ್ಯೆ ಇಲ್ಲ: ಸಚಿವೆ ಡಾ.ಜಯಮಾಲ

ಬರ ನಿರ್ವಹಣೆಗೆ ಹಣಕಾಸು ಸಮಸ್ಯೆ ಇಲ್ಲ: ಸಚಿವೆ ಡಾ.ಜಯಮಾಲ

Spread the love

ಬರ ನಿರ್ವಹಣೆಗೆ ಹಣಕಾಸು ಸಮಸ್ಯೆ ಇಲ್ಲ: ಸಚಿವೆ ಡಾ.ಜಯಮಾಲ

ಉಡುಪಿ: ‘ಜಿಲ್ಲೆಯ 84 ಗ್ರಾಮ ಪಂಚಾಯಿತಿ ವ್ಯಾಪ್ತಿಯ 126 ಗ್ರಾಮಗಳಿಗೆ 141 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಖಾಸಗಿ ಬಾವಿ, ಬೋರ್‌ವೆಲ್‌ಗಳನ್ನು ಬಳಸಿಕೊಂಡು ನೀರು ಕೊಡಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದರು.

ಶುಕ್ರವಾರ ನಗರದದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಬಜೆ ಅಣೆಕಟ್ಟೆಯ ಹೂಳೆತ್ತಲು ನಿರ್ಧರಿಸಲಾಗಿದ್ದು, ಜಲಾಶಯಕ್ಕೆ ನೀರು ಹರಿದುಬರಲು ಅಡ್ಡಿಯಾಗಿರುವ ಕಲ್ಲುಬಂಡೆಗಳನ್ನು ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಮುಂದೆ ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ತೊಂದರೆ ಎದುರಾಗದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬರ ನಿರ್ವಹಣೆಗೆ ಹಣಕಾಸು ತೊಂದರೆ ಇಲ್ಲ, ಸರ್ಕಾರದಿಂದ ಅಗತ್ಯ ಅನುದಾನ ಬಂದಿದೆ’ ಎಂದು ಸಚಿವರು ತಿಳಿಸಿದರು.

‘ಬರ ನಿರ್ವಹಣೆಗೆ ₹ 33 ಕೋಟಿ ಹಣ ಲಭ್ಯವಿದೆ. ಜಿಲ್ಲಾಡಳಿತದ ಮತ್ತೊಂದು ಖಾತೆಯಲ್ಲಿ ₹ 6 ಕೋಟಿ ಲಭ್ಯವಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಹೂಳೆತ್ತುವ ಕೆಲಸವನ್ನು ನರೇಗಾ ಮೂಲಕ ನಡೆಸಲು ಚರ್ಚಿಸಲಾಗಿದೆ. ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಸಮುದ್ರ ಸೇರುವುದನ್ನು ತಡೆಯಲು ಭೂಮಿಗೆ ನೀರು ಇಂಗಿಸಲು ಮಳೆನೀರು ಸಂಗ್ರಹ ಪದ್ಧತಿ ಅಳವಡಿಕೆಗೆ ಉತ್ತೇಜನ ನೀಡಲಾಗುವುದು. ಜಿಲ್ಲೆಯಲ್ಲಿರುವ 400 ಮದಗಗಳನ್ನು ಹೂಳೆತ್ತಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

ನಗರದಲ್ಲಿ 15 ದಿನಗಳಿಗೆ ಸಾಲುವಷ್ಟು ಕುಡಿಯುವ ನೀರು ಲಭ್ಯವಿದೆ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ. ನದಿಗಳಿಗೆ ಅನಧಿಕೃತವಾಗಿ ಹಾಕಲಾಗಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.


Spread the love

Exit mobile version