ಬಲವಂತದ ಬಂದ್ ಮಾಡಲು ಯತ್ನಿಸಿದರೆ ಸೂಕ್ತ ಕ್ರಮ – ದಕ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಎಚ್ಚರಿಕೆ
ಮಂಗಳೂರು: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯನ್ನು ಖಂಡಿಸಿ ಸಪ್ಟೆಂಬರ್ 10 ರಂದು ಕೆಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಭಾರತ್ ಬಂದ್ ವೇಳೆ ಯಾವುದೇ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಬಲವಂತವಾಗಿ ಬಂದ್ ಮಾಡಲು ಪ್ರಯತ್ನಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಎಚ್ಚರಿಕೆ ನೀಡಿದ್ದಾರೆ.
ಬಂದ್ ಆಚರಣೆಯ ಸಂದರ್ಭ ಬಂದೋಬಸ್ತ್ ಕರ್ತವ್ಯಕ್ಕಾಗಿ ಮಂಗಳೂರು ನಗರ ಪೋಲಿಸ್ ವತಿಯಿಂದ ಈಗಾಗಲೇ 1 ಡಿಸಿಪಿ, 4 ಎಸಿಪಿ, 25 ಪಿಐ, 30 ಪಿ ಎಸ್ ಐ ಮತ್ತು 1000 ಸಿವಿಲ್ ಸಿಬಂದಿಗಳು, 150 ಹೋಮ್ ಗಾರ್ಡ್ಸ್, 4 ಕೆ ಎಸ್ ಆರ್ ಪಿ ತುಕಡಿ, 10 ಸಿ ಎಆರ್ ತುಕುಡಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಸಮಾಜಘಾತುಕ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ಇಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಘಟಕದ ವತಿಯಿಂದ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ 2 ಡಿವೈಎಸ್ಪಿ, 7 ಇನ್ಸ್ ಪೆಕ್ಟರ್, 20 ಸಬ್ ಇನ್ಸ್ ಪೆಕ್ಟರ್, 40 ಎಎಸ್ ಐ, 400 ಹೆಚ್ ಸಿ/ಪಿಸಿ ಮತ್ತು 175 ಹೋಮ್ ಗಾರ್ಡ್ ಸಿಬಂದಿ ಬಂದೋಬಸ್ತ್ ನಲ್ಲಿದ್ದು, ಜೊತೆಗೆ 6 ಕೆ ಎಸ್ ಆರ್ ಪಿ ತುಕಡಿ ಮತ್ತು 3 ಡಿ ಎಆರ್ ತುಕಡಿ ಬಂದೋಬಸ್ತಿಗೆ ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.