ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘವು ಬಲಿಷ್ಠ ಸಮಾಜ ನಿರ್ಮಾಣದ ಕನಸು ಹೊಂದಿದ್ದು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಸಮಾಜದ ಏಳಿಗೆಗೆ ಶ್ರಮಿಸಲಾಗುವುದು ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‍ಕುಮಾರ್ ರೈ ತಿಳಿಸಿದರು.
ಡಿ.29ರಂದು ಬಂಟ್ಸ್ ಹಾಸ್ಟೆಲ್‍ನ ಎ.ಬಿ.ಶೆಟ್ಟಿ ಶತಮಾನೋತ್ಸವ ಸಭಾ ಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃಸಂಘದ 96ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಬಾಂಧವರು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಮತ್ತು ಸಂಘದ ಮಹಾತ್ವಾಕಾಂಕ್ಷಿ ಯೋಜನೆಯಾದ ಬಂಟರ ಭವನವನ್ನು ಸಂಘದ ಕೇಂದ್ರ ಕಚೇರಿ ಇರುವ ಮಂಗಳೂರಿನಲ್ಲಿ ನಿರ್ಮಿಸಲು ಕಾರ್ಯ ಪ್ರವೃತ್ತವಾಗಿದ್ದು ಶೀಘ್ರದಲ್ಲೇ ಶಿಲಾನ್ಯಾಸ ಕಾರ್ಯ ನಡೆಯಲಿದೆ ಎಂದರು.
ಬಂಟರ ಭವನ ನಿರ್ಮಾಣದ ಜತೆಗೆ ವಾಣಿಜ್ಯ ಕಟ್ಟಡದ ನಿರ್ಮಾಣವೂ ನಡೆಯಲಿದೆ. ಸಂಘವು ಸಮಾಜ ಸೇವೆ, ಸಮಾಜಕಲ್ಯಾಣ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು. ಸಮಾಜದಲ್ಲಿರುವ ಹೆಣ್ಮಕ್ಕಳ ಮದುವೆಗೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವನ್ನು ನಿರಂತರವಾಗಿ ಮಾತೃ ಸಂಘವು ನೀಡುತ್ತಾ ಬಂದಿರುತ್ತದೆ ಎಂದು ಅಜಿತ್‍ಕುಮಾರ್ ರೈ ತಿಳಿಸಿದರು.
ಸಭೆಯಲ್ಲಿ ಅಯಾಯ ತಾಲೂಕಿನ ಪರವಾಗಿ ಕರುಣಾಕರ ಶೆಟ್ಟಿ, ನಿವೇದಿತಾ ಶೆಟ್ಟಿ, ಚೇತನ್‍ಕುಮಾರ್ ಶೆಟ್ಟಿ, ಕೃಷ್ಣಪ್ರಸಾದ್ ರೈ, ಕಾವು ಹೇಮನಾಥ ಶೆಟ್ಟಿ, ಜಯರಾಮ ಸಾಂತ, ಜಯಕರ ಶೆಟ್ಟಿ ಇಂದ್ರಾಳಿ. ಕೆಂಚನೂರು ಸೋಮಶೇಖರ ಶೆಟ್ಟಿ, ಸುನೀಲ್ ಕುಮಾರ್ ಶೆಟ್ಟಿ, ದಯಾನಂದ ರೈ, ದಿವಾಕರ ರೈ, ಮುಕ್ತಾನಂದ ರೈ ವರದಿ ಮಂಡಿಸಿದರು. ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಲೆಕ್ಕಪತ್ರಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಲೆಕ್ಕ ಪರಿಶೋಧಕ ಎಚ್.ಆರ್.ಶೆಟ್ಟಿ, ಸೋಮಶೇಖರ ಶೆಟ್ಟಿ, ಹೇಮನಾಥ ಶೆಟ್ಟಿ, ಮೇಘನಾಥ ಶೆಟ್ಟಿ, ಮನಮೋಹನ್ ಶೆಟ್ಟಿ ಉಪಸ್ಥಿತರಿದ್ದರು.