ಮಂಗಳೂರು: ಬಲ್ಮಠ ಜ್ಯೂಸ್ ಜಂಕ್ಷನ್ ಬಳಿ ಪಾರ್ಕ್ ಮಾಡಿದ ಬೈಕಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಮೇ 2 ರಂದು ವರದಿಯಾಗಿದೆ.
ಬೈಕಿನ ಮ್ಹಾಲಕ ಕಿರಣ್ ಕ್ರಾಸ್ತಾ ಎಂಬವರು ಕಳೆದ 2 ತಿಂಗಳುಗಳಿಂದ ತನ್ನ ಸುಜುಕಿ ಜಿ ಎಸ್ 150 ಆರ್ ಬೈಕನ್ನು ಲೆಕ್ಕಪರೀಶೋಧಕ ವಿವಿಯನ್ ಎಂಬವರ ಕಚೇರಿ ಇರುವ ಬಲ್ಮಠದಲ್ಲಿ ಪಾರ್ಕ್ ಮಾಡುತ್ತಿದ್ದು, ವಿವಿಯನ್ ಅವರ ಕಚೇರಿಯಲ್ಲಿಯೇ ಕೆಲಸವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸಿ ಎ ಪರೀಕ್ಷೆಗೆ ತಯಾರಿಮಾಡುವ ಸಲುವಾಗಿ ಅದೇ ಕಟ್ಟಡದಲ್ಲಿ ಮೇ 1 ರಂದು ಸಂಜೆ 4.30 ರ ಸುಮಾರಿಗೆ ಬೈಕನ್ನು ಪಾರ್ಕ್ ಮಾಡಿ ಕೆಲಸಕ್ಕೆ ತೆರಳಿದ್ದರು.
ಮೇ 2 ರಂದು ಬೆಳಿಗ್ಗೆ ಬಂದು ನೋಡಿದಾಗ ಕಿರಣ್ ಅವರ ಬೈಕ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸ್ಥಳೀಯರ ಪ್ರಕಾರ ಮೇ 2 ರ ಬೆಳಿಗ್ಗೆ ಸುಮಾರು 2 ಗಂಟೆಯ ವೇಳೆಗೆ ಬೈಕಿಗೆ ಬೆಂಕಿ ಬಿದ್ದಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿ ಆಗಲಿರುವ ಅನಾಹುತವನ್ನು ತಪ್ಪಿಸಿದ್ದರು. ಬೆಂಕಿ ಹಿಡಿದ ಸ್ಥಳದ ಹತ್ತಿರದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದ್ದು, ಹೆಚ್ಚಿನ ಅನಾಹುತ ತಪ್ಪಿದೆ.
ಸ್ಥಳಕ್ಕೆ ಕದ್ರಿ ಪೋಲಿಸರು ಆಗಮಿಸಿ ಬೈಕಿನ ಮ್ಹಾಲಕರಿಂದ ಮಾಹಿತಿಯನ್ನು ಪಡೆದಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.