Home Mangalorean News Kannada News ಬಸ್ಸುಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ : ಜಿಲ್ಲಾಧಿಕಾರಿ ಜಿ...

ಬಸ್ಸುಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ : ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚನೆ

Spread the love

ಬಸ್ಸುಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದಲ್ಲಿ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ : ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಬಸ್ ಗಳಲ್ಲಿ ನಿಗಧಿತ ಸಾಮಾಜಿಕ ಅಂತರ ಪಾಲನೆಯಾಗದ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಬಸ್ ಗಳ ವಿರುದ್ದ ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾದಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ.
ಅವರು ಗುರುವಾರ , ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರೋನಾ ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಬಸ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಗಧಿತ ಸಂಖ್ಯೆಗಿAತ ಹೆಚ್ಚು ಜನರನ್ನು ಕರೆದೊಯ್ಯುತ್ತಿರುವ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಅಂತಹ ಬಸ್ ಗಳ ವಿರುದ್ದ ಸಾರಿಗೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದೇ , ಎಪಿಡಮಿಕ್ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ , ಈ ಕುರಿತಂತೆ ಸರ್ಕಾರದ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಸ್ ಮಾಲೀಕರುಗಳಿಗೆ ತಿಳಿಸಿದರು.

ಎಲ್ಲಾ ಬಸ್ ಗಳಲ್ಲಿ 30 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸದಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಪರಿಶೀಲನೆ ನಡೆಸುವಂತೆ ಸೂಚಿಸಿದರು, ಎಲ್ಲಾ ಬಸ್ ಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡುವಂತೆ ಹಾಗೂ ಮಾಸ್ಕ್ ಇಲ್ಲದ ಪ್ರಯಾಣಿಕರಿಗೆ ಬಸ್ ನೊಳಗೆ ಪ್ರವೇಶ ನೀಡದಂತೆ ಬಸ್ ಮಾಲೀಕರಿಗೆ ತಿಳಿಸಿ, ಈ ಬಗ್ಗೆ ತಮ್ಮ ಎಲ್ಲಾ ಸಿಬ್ಬಂದಿಗೆ ನಿರ್ದೇಶನ ನೀಡುವಂತೆ ಸೂಚಿಸಿದರು.

ಬಸ್ ಗಳಲ್ಲಿ ಪೀಕ್ ಟೈಮ್ ನಲ್ಲಿ ಮಾತ್ರ ಜನರ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿದ್ದು, ಉಳಿದಂತೆ ಇತರೆ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದೆ ಆದ್ದರಿಂದ ಪೀಕ್ ಅವರ್ ನಲ್ಲಿ ಸಾಮಾಜಿಕ ಅಂತರ ಪಾಲನೆ ಕಷ್ಟ ಎಂದು ಬಸ್ ಮಾಲೀಕರು ತಿಳಿಸಿದರು. ಯಾವುದೇ ಸಂದರ್ಭದಲ್ಲೂ ಸಾಮಾಜಿಕ ಅಂತರ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ , ಪೀಕ್ ಅವರ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಓಡಿಸಿ ಅಥವಾ ನಿಮ್ಮ ಹಂತದಲ್ಲೇ ಟೈಮಿಂಗ್ ಬದಲಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಬಸ್ ದರದ ಹೆಚ್ಚಳ ಕುರಿತಂತೆ ಯಾವ ಆದೇಶದಲ್ಲಿ ಮಾಡಿದ್ದೀರಿ ಎಂಬ ಜಿಲ್ಲಾಧಿಕಾರಿಗಳ ಪ್ರಶ್ನೆಗೆ, ಕರೋನಾ ದಿಂದ ಬಸ್ ದರ ಹೆಚ್ಚಳ ಮಾಡಿಲ್ಲ, ಬಸ್ ದರ ಹೆಚ್ಚಳ ಕುರಿತಂತೆ ಜನವರಿಯಲ್ಲಿಯೇ ಸರಕಾರ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ ಕೆ.ಎಸ್.ಆರ್.ಟಿ.ಸಿಯಲ್ಲಿ ಹೆಚ್ಚಳವಾಗಿದೆ, ಖಾಸಗಿ ಬಸ್ ಗಳಿಗೆ ಈಗ ಆದೇಶ ಬಂದ ನಂತರ ರಾಜ್ಯಾದ್ಯಂತ ಹೆಚ್ಚಳ ಮಾಡಲಾಗಿದೆ, ಬಸ್ ಗಳಲ್ಲಿ 30 ಜನ ಪ್ರಯಾಣಿಕರನ್ನು ಕರೆದುಕೊಂಡು ಹೋದರೂ, ಉಳಿದ ಖಾಲಿ ಸೀಟು ಗಳಿಗೆ ತೆರಿಗೆ ಪಾವತಿಸಬೇಕಿದ್ದು, ಪ್ರಯಾಣಿಕರ ಸಂಖ್ಯೆಗೆ ಮಾತ್ರವೇ ತೆರಿಗೆ ಪಾವತಿ ಮಾಡುವ ಕುರಿತಂತೆ ಅವಕಾಶ ನೀಡಬೇಕು ಎಂದು ಬಸ್ ಮಾಲೀಕರು ಜಿಲ್ಲಾಧಿಕಾರಿ ಅವರಲ್ಲಿ ಕೋರಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಕಾರ್ಯದರ್ಶಿ ಸದಾನಂದ ಛಾತ್ರ, ಉಡುಪಿ ಸರ್ವಿಸ್ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕರಾವಳಿ ಬಸ್ ಮಾಲೀಖರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್, ಶಿರ್ವ ಬಸ್ ಮಾಲೀಕರ ಸಂಘದ ಅಧ್ಯಕ್ಷ ಶಿವರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version