ಬಾಗಿಲು ಮುಚ್ಚಿದ ಪಾಲಡ್ಕ ದೂರವಾಣಿ ಕೇಂದ್ರ- ಸಮಸ್ಯೆ ಬಗೆಹರಿಸಲು ಕೇಮಾರು ಸ್ವಾಮೀಜಿ ಆಗ್ರಹ
ಮೂಡುಬಿದಿರೆ: ಇಂದಿನ 4 ಜಿ, 5 ಜಿ ಯುಗದಲ್ಲೂ ಕೂಡ ಕೇಂದ್ರ ಸರಕಾರದ ಸ್ವಾಮ್ಯದಲ್ಲಿ ಕರ್ತವ್ಯ ನಿರ್ವಹಿಸುವ ಮೂಡಬಿದರೆ ತಾಲೂಕಿನ ಪಾಲಡ್ಕ ದೂರವಾಣಿ ವಿನಿಮಯ ಕೇಂದ್ರ ಕಳೆದ ಹಲವು ದಿನಗಳಿಂದ ಬಾಗಿಲಿಗೆ ಬೀಗ ಹಾಕಿದ್ದಲ್ಲದೆ ಗ್ರಾಹಕರಿಗೆ ಸೂಕ್ತ ಸೇವೆ ನೀಡುವಲ್ಲಿ ವಿಫಲವಾಗಿದೆ ಎಂದು ಗ್ರಾಹಕರು ದೂರಿದ್ದಾರೆ.
ಇದೇ ದೂರವಾಣಿ ವಿನಿಮಯ ಕೇಂದ್ರಕ್ಕೆ ಒಳಪಡುವ ಅದೆಷ್ಟೋ ಸ್ಥಿರ ದೂರವಾಣಿ ಸೇವೆಗಳು ನಿಷ್ಕ್ರಿಯಗೊಂಡಿವೆ. ದುರಸ್ಥಿ ಹಂತದಲ್ಲಿದೆ. ಈ ಬಗ್ಗೆ ದೂರಿದರೂ ಯಾರು ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಕೇಮಾರು ಸಾಂದೀಪನೀ ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿಯವರು 25 ವರ್ಷಗಳ ಹಿಂದೆ ಇಲ್ಲಿ ದೂರವಾಣಿ ಕೇಂದ್ರ ಆರಂಭವಾದಾಗ ನಾವೆಲ್ಲಾ ಸರಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಪರ್ಕವನ್ನು ಪಡೆದುಕೊಂಡಿದ್ದೇವೆ. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಇಬ್ಬರು ಸಿಬಂದಿಗಳು ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ಕೂಡ ನಿವೃತ್ತರಾದ ಬಳಿಕ ಇಲ್ಲಿ ಹೊಸ ಸಿಬಂದಿಯ ನೇಮಕವೂ ಕೂಡ ಆಗಿಲ್ಲ. ಈ ನಡುವೆ ಕಳೆದ ಒಂದು ತಿಂಗಳಿನಿಂದ ದೂರವಾಣಿ ಸೇವೆಯೇ ಇಲ್ಲದೆ ನಾವು ಪರದಾಡುತ್ತಿದ್ದೇವೆ. ಆದರೆ ತಿಂಗಳಿಗೊಮ್ಮೆ ಅನಾವಶ್ಯಕವಾಗಿ ದೂರವಾಣಿ ಬಿಲ್ ಪಾವತಿ ಮಾಡುವಾಗ ಮಾತ್ರ ನಮಗೆ ಅನ್ಯಾಯವಾಗುತ್ತಿದೆ.
ಕೆಲವೊಂದು ಮನೆಗಳಲ್ಲಿ ಕಳೆದ ಆರು ತಿಂಗಳಿನಿಂದ ದೂರವಾಣಿ ಸೇವೆ ಕೆಟ್ಟು ಹೋಗಿದ್ದರೂ ಕೂಡ ಯಾವುದೇ ರೀತಿಯಲ್ಲಿ ರಿಪೇರಿ ಕೂಡ ಮಾಡಿಲ್ಲ. ಒಂದು ವೇಳೆ ರಿಪೇರಿ ಮಾಡಿದ್ದರೂ ಕೂಡ ಕೆಲವೇ ಸಮಯದಲ್ಲಿ ಅದು ಮತ್ತೆ ಕೆಟ್ಟು ಹೋಗತ್ತದೆ. ಮಳೆಗಾಲದ ಸಮಯದಲ್ಲಿ ಸಿಡಿಲು ಬರುವುದರಿಂದ ಸಮಸ್ಯೆ ಉಂಟಾದರೆ ದೂರವಾಣಿ ಕೇಂದ್ರದಲ್ಲಿ ಸೇವೆ ಸ್ಥಗಿತಗೊಳಿಸಲು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಕೂಡ ಯಾವುದೇ ಸಿಬಂದಿ ಇಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಸರಕಾರ ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಗ್ರಾಮೀಣ ಪ್ರದೇಶಕ್ಕೆ ನೀರು ವಿದ್ಯುತ್ ದೂರವಾಣಿ ಸೇವೆ ನೀಡುವುದಾಗಿಕೇವಲ ಬಾಯಿ ಮಾತಿನಲ್ಲಿ ಹೇಳುವ ಸರಕಾರಗಳು ನಿಜವಾದ ಸಮಸ್ಯೆ ಪರಿಹರಿಸುವಲ್ಲಿ ಮಾತ್ರ ಸಂಪೂರ್ಣ ಮರೆತಿವೆ.
ಕಳೆದ ಒಂದು ತಿಂಗಳುಗಳಿಂದ ದೂರವಾಣಿ ಸೇವೆ ಸಂಪೂರ್ಣ ಹಾಳಾಗಿದೆ. ಹೊರಹೋಗುವ, ಒಳ ಬರುವ ಕರೆಗಳ ಸೌಲಭ್ಯವೇ ಇಲ್ಲದಾಗಿದೆ. ಜೊತೆಗೆ ಅಂತರ್ಜಾಲ ವ್ಯವಸ್ಥೆಯೂ ಕಡಿದುಹೋಗಿದೆ. ಶಾಲಾ ಕಾಲೇಜಿಗೆ ತೆರಳುವ ಹಲವಾರು ವಿದ್ಯಾರ್ಥಿಗಳು ಸೂಕ್ತ ಅಂತರ್ಜಾಲ ವ್ಯವಸ್ಥೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ತಿಂಗಳು ತಿಂಗಳು ದೂರವಾಣಿ ಬಿಲ್ ಪಾವತಿ ಮಾಡುವ ನಮಗೆ ಈ ರೀತಿಯ ಅನ್ಯಾಯವಾಗುತ್ತಿದೆ. ದೂರು ಕೊಡಲು ಹೋದರೂ ದೂರು ಪಡೆದುಕೊಳ್ಳುವ ಮಂದಿಯೇ ಇಲ್ಲವಾಗಿದೆ. ಎಕ್ಸ್ಚೇಂಜ್ ನಲ್ಲಿ ಯಾವೊಬ್ಬ ವ್ಯಕ್ತಿಯೂ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.
ಈ ಭಾಗದ ಹಲವು ಮಂದಿ ಈ ದೂರವಾಣಿ ಕೇಂದ್ರದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರ ಸಂಬಂಧಪಟ್ಟವರು ಇಲ್ಲಿಯ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕಾಗಿದೆ ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.