ಬಾಡಿಗೆದಾರರಿಗೆ ಹಾಗೂ ಮಲ್ಲಿಗೆ ಬೆಳೆಗಾರರಿಗೆ ಸರಕಾರ ನೆರವು ನೀಡಲು ಮೆಲ್ವಿನ್ ಡಿಸೋಜ ಆಗ್ರಹ

Spread the love

ಬಾಡಿಗೆದಾರರಿಗೆ ಹಾಗೂ ಮಲ್ಲಿಗೆ ಬೆಳೆಗಾರರಿಗೆ ಸರಕಾರ ನೆರವು ನೀಡಲು ಮೆಲ್ವಿನ್ ಡಿಸೋಜ ಆಗ್ರಹ

ಉಡುಪಿ: ಬಾಡಿಗೆದಾರರಿಗೆ ಹಾಗೂ ಮಲ್ಲಿಗೆ ಬೆಳೆಗಾರರಿಗೆ ಸರಕಾರ ನೆರವು ನೀಡುವಂತೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರ ಸರಕಾರ ಕರೋನ ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಆದೇಶ ಮಾಡಿದ್ದು ಜನರು ಮನೆಯಲ್ಲಿದ್ದು ವ್ಯಾಪಾರ ವ್ಯವಹಾರ ಸ್ಥಗಿತಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಮುಖವಾಗಿ ಕಾಪು ತಾಲೂಕಿನಲ್ಲಿ ಬ್ಯಾಂಕುಗಳಲ್ಲಿ ವ್ಯಾಪಾರ ಸಾಲ ಮಾಡಿ ಅಂಗಡಿ ಕೋಣಿಗಳನ್ನು ಮಾಲಿಕರಿಂದ ಬಾಡಿಗೆಗೆ ಪಡೆದು ವಿವಿಧ ವೃತ್ತಿಯ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ವiಧ್ಯಮ ವರ್ಗದ ಜನರಿಗೆ ಲಾಕ್ ಡೌನ್ ನಿಂದಾಗಿ ವ್ಯಾಪಾರಕ್ಕೆ ಹಾಗೂ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸದ್ರಿ ಸಣ್ಣ ಪುಟ್ಟ ವ್ಯಾಪಾರದಿಂದ ಜೀವನ ನಡೆಸುತ್ತಿದ್ದ ವ್ಯಾಪಾರಿಗಳಿಗೆ ದಿಕ್ಕು ತೋಚದಂತಾಗಿದೆ. ಸರಕಾರ ಕೇವಲ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ರೇಶನ್ ನೀಡುವ ಮೂಲಕ ನೆರವು ನೀಡಿದ್ದು ಮಧ್ಯಮ ವರ್ಗದವರಿಗೆ ಯಾವುದೇ ನೆರವು ಸಿಕ್ಕಿರುವುದಿಲ್ಲ. ಕೆಲವು ದಾನಿಗಳು, ಉದ್ಯಮಿಗಳು ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದರೂ ಅದು ಎಲ್ಲರಿಗೂ ಸಿಕ್ಕಿರುವುದಿಲ್ಲ. ಮಧ್ಯಮ ವರ್ಗದ ವ್ಯಾಪಾರಿಗಳ ಹಾಗೂ ಇತರ ವ್ಯವಹಾರ ನಡೆಸುತ್ತಿದ್ದ ಅಂಗಡಿ ಕೋಣೆಗಳು ಮುಚ್ಚಿರುವುದರಿಂದ ಅಂಗಡಿ ಮಾಲಿಕರಿಗೆ ತಿಂಗಳ ಬಾಡಿಗೆಯನ್ನು ಕೊಡಲು ಅಸಾಧ್ಯವಾಗಿದೆ.

ವ್ಯಾಪಾರ ಇದ್ದ ಸಂದರ್ಭದಲ್ಲಿ ತಿಂಗಳ ಖರ್ಚು ತೆಗೆದು ಬಾಡಿಗೆ ನೀಡಲು ಕಷ್ಟ ಪಡುತ್ತಿದ್ದವರು ಈಗ ಆದಾಯವೇ ಇಲ್ಲದೆ ಪರದಾಡುವಂತಾಗಿದೆ. ಅತ್ತ ವ್ಯಾಪಾರಕ್ಕೆ ತೆಗೆದ ಸಾಲವನ್ನೂ ಕಟ್ಟಲಾಗದೇ ಇತ್ತ ಬಾಡಿಗೆಯನ್ನೂ ಕೊಡಲಾಗದೆ ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವಂತಾಗಿದೆ. ಸಾಲವನ್ನು ಕಟ್ಟಲು ಮತ್ತು ಬಾಡಿಗೆಯನ್ನು ನೀಡಲು ಮತ್ತೆ ಸಾಲ ಪಡೆಯುವ ಪರಿಸ್ಥಿತಿ ಉಂಟಾಗಿದೆ. ಹಾಗೂ ಲಾಕ್ ಡೌನ್ ಆದೇಶ ಮತ್ತೆ ಮುಂದುವರೆದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವಂತಾಗಿದೆ. ಈಗಾಗಲೇ ಕೆಲವು ಮಾಲಿಕರು ಒಂದು ತಿಂಗಳ ಬಾಡಿಗೆ ಮನ್ನಾ ಮಾಡಿದ್ದು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಮಧ್ಯಮ ವರ್ಗದ ಬಾಡಿಗೆ ವ್ಯಾಪಾರಿಗಳ ಎರಡು ತಿಂಗಳ ಸಾಲದ ಕಂತನ್ನು ಬಡ್ಡಿ ಸಮೇತ ಮನ್ನಾ ಮಾಡಬೇಕಾಗಿ ಹಾಗೂ ಎರಡು ತಿಂಗಳ ಬಾಡಿಗೆಯನ್ನು ಮಾಲಿಕರು ಪಡೆಯದೆ ಮಾನವೀಯತೆ ನೆಲೆಯಲ್ಲಿ ಮನ್ನಾ ಮಾಡಲು ಜಿಲ್ಲಾಧಿಕಾರಿಗಳು ಆದೇಶ ಮಾಡಬೇಕಾಗಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.

ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಪ್ರಮುಖವಾಗಿ ಶಿರ್ವ, ಶಂಕರಪುರ ಹಾಗೂ ಇತರ ಗ್ರಾಮಗಳಲ್ಲಿ ಅನೇಕ ಕೃಷಿಕರು ಜೀವನೋಪಾಯಕ್ಕಾಗಿ ಮಲ್ಲಿಗೆ ಕೃಷಿಯನ್ನು ಅವಲಂಬಿಸಿಕೊಂಡು ಬಂದಿರುತ್ತಾರೆ, ಆದರೆ ಲಾಕ್ಡೌನ್ನಿಂದಾಗಿ ಮಲ್ಲಿಗೆ ವ್ಯಾಪಾರ ಸಂಪೂರ್ಣ ನಿಂತುಹೋಗಿದೆ. ಜನರು ಕಷ್ಟಪಟ್ಟು ಖರ್ಚುಮಾಡಿ ಗೊಬ್ಬರ ಹಾಕಿ ಹಣ ವ್ಯಹಿಸಿ ಮಲ್ಲಿಗೆ ಕ್ರಷಿಯನ್ನು ಬೆಳೆದಿದ್ದು, ಅದರಿಂದ ಬರುವ ಆದಾಯವನ್ನೇ ನಂಬಿಕೊಂಡಿರುವ ಕುಟುಂಬಗಳು ಎಷ್ಟೋ ಇವೆ. ಮದುವೆ ಹಾಗೂ ಇತರ ಧಾರ್ವಿಕ ಕಾರ್ಯಕ್ರಮಗಳು ಸಂಪೂರ್ಣವಾಗಿ ನಿಂತುಹೋಗಿರುವುದರಿಂದ ಈಗ ಮೆಲ್ಲಿಗೆಗೆ ಯಾವುದೇ ಬೇಡಿಕೆ ಇಲ್ಲದೆ ಗಿಡದಿಂದ ತೆಗೆದ ಮಲ್ಲಿಗೆಯನ್ನು ರಸ್ತೆಗೆ ಬಿಸಾಡುವಂತಾಗಿದೆ. ದಿನವೂ ಮಲ್ಲಿಗೆಯನ್ನು ಗಿಡದಿಂದ ತೆಗೆಯದಿದ್ದರೆ ಗಿಡಕ್ಕೆ ಹಾನಿಯಾಗುವ ಪರಿಸ್ಥಿತಿ. ಒಂದು ರೀತಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇತರ ಜಿಲ್ಲೆಗಳಿಗೆ ಹಾಗೂ ವಿದೇಶಕ್ಕೆ ರಫ್ತಾಗುತ್ತಿದ್ದ ನಮ್ಮ ಊರಿನ ಮಲ್ಲಿಗೆ ಕರೋನ ವೈರಸ್ ಎಂಬ ಮಹಾಮಾರಿಯಿಂದಾಗಿ ಅದನ್ನು ಬೆಳೆದ ಬೆಳೆಗಾರರಿಗೆ ನಷ್ಟವನ್ನುಂಟು ಮಾಡಿದೆ. ಆದುದರಿಂದ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಕೂಡಲೇ ಮಲ್ಲಿಗೆ ಬೆಳೆಗಾರರರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕಾಗಿ ನ್ಯಾಯವಾದಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.


Spread the love