ಬಾರಕೂರಿನಲ್ಲಿ 16ನೆಯ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ
ಉಡುಪಿ: ಶಾಂತಿವನ ಟ್ರಸ್ಟ್(ರಿ.), ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಶ್ರೀ ರಾಮಕೃಷ್ಣ ಆಶ್ರಮ, ಬೆಳಗಾವಿ ಮತ್ತು ಮಂಗಳೂರು, ಈ ಸಂಸ್ಥೆಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಬಾರಕೂರಿನಲ್ಲಿ ಬಾರಕೂರಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರವು ಸ್ವಾಮಿ ವಿವೇಕಾನಂದರ 155ನೆಯ ಜಯಂತಿ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ 16ನೆಯ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಇದೇ ತಿಂಗಳ 28ರ ಶನಿವಾರದಂದು ಬಾರಕೂರಿನ ‘ಸಂಕಮ್ಮ ತಾಯಿ ರಿಸಾಟ್ರ್ಸ್’ ಸಭಾಭವನದಲ್ಲಿ ನಡೆಸಲು ತೀರ್ಮಾನಿಸಿದೆ.
ಸಮ್ಮೇಳನವನ್ನು ಕಾಂತಾವರದ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆಯವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೋಟದ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಹತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ಚಿ| ಸ್ವಸ್ತಿಕ್ ಭಂಡಾರಿ ಆಯ್ಕೆಯಾಗಿದ್ದಾರೆ.
ಉದ್ಘಾಟನ ಸಮಾರಂಭದಲ್ಲಿ ಬ್ರಹ್ಮಾವರದ ರೋಟರಿ ಕ್ಲಬ್ ಅಧ್ಯಕ್ಷರೂ ರಂಗನಟ-ನಿರ್ದೇಶಕರೂ ಆಗಿರುವ ಆಲ್ವಿನ್ ಆಂದ್ರಾದೆಯವರು ಮಕ್ಕಳ ಸ್ವರಚಿತ ಕವನಸಂಕಲನವನ್ನು ಬಿಡುಗಡೆಗೊಳಿಸಲಿದ್ದಾರೆ. ಭುವನಪ್ರಸಾದ್ ಹೆಗ್ಡೆ, ಮಾಜಿ ಕೋಶಾಧಿಕಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರು ಶುಭಾಶಂಸನೆಗೈಯಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಮತ್ತು ಬ್ರಹ್ಮಾವರ ವಲಯದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುಜಂಗ ಶೆಟ್ಟಿಯವರು ಉಪಸ್ಥಿತರಿರುತ್ತಾರೆ. ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಯೋಗ ನಿರ್ದೇಶಕರಾದ ಐ. ಶಶಿಕಾಂತ್ ಜೈನ್, ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ವಸಂತ ಶೆಟ್ಟಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಬ್ರಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಕರಿಷ್ಮಾ ಎಸ್. ಸನಿಲ್ ಇವರನ್ನು ಸಮ್ಮೇಳನದಲ್ಲಿ ಸಂಮಾನಿಸಿ ಅಭಿನಂದಿಸಲಾಗುವುದು.
ಮಂಗಳೂರು ಮೂಲದ ರಾಷ್ಟ್ರೀಯ ಖ್ಯಾತಿಯ ಪರಿಣತ ಪ್ರಶಿಕ್ಷಕರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿಯವರು ‘ಗೆಲುವಿನ ಗುಟ್ಟು’ ಎಂಬ ವಿಚಾರವಾಗಿ ಗೋಷ್ಟಿಯನ್ನು ನಡೆಸಿಕೊಡಲಿದ್ದಾರೆ. ಮಕ್ಕಳ ಸ್ವರಚಿತ ಕವನವಾಚನ ಗೋಷ್ಠಿಯೂ ನಡೆಯಲಿದೆ. ಕವನವಾಚನ ಗೋಷ್ಠಿಯಲ್ಲಿ ಉದಯವಾಣಿ ದಿನಪತ್ರಿಕೆಯ ನಿವೃತ್ತ ಹಿರಿಯ ಉಪಸಂಪಾದಕರಾದ ಎಸ್. ನಿತ್ಯಾನಂದ ಪಡ್ರೆಯವರು ಸಮನ್ವಯಕಾರರಾಗಿ ಸಹಕರಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ನೀಲಾವರ ಸುರೇಂದ್ರ ಅಡಿಗರು ಸಮಾರೋಪ ಭಾಷಣ ಮಾಡಲಿದ್ದಾರೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ಸಮ್ಮೇಳನದಲ್ಲಿ ಅವಕಾಶವನ್ನು ನೀಡಲಾಗಿದೆ. ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಿಂದ ಸುಮಾರು 400 ಮಂದಿ ಸಾಹಿತ್ಯಾಸಕ್ತ ಮಕ್ಕಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.