ಬಿಎಸ್ ವೈ ಪರ ತೀರ್ಪು : ದಕ ಜಿಲ್ಲಾ ಬಿಜೆಪಿ ಸಂಭ್ರಮ
ಮಂಗಳೂರು : ಗಣಿ ಕಂಪೆನಿಗೆಪರವಾನಗಿ ನೀಡಿದಕ್ಕೆ ಪ್ರತಿಯಾಗಿ ಪ್ರೇರಣಾ ಟ್ರಸ್ಟ್ ಮೂಲಕ ಕಿಕ್ಬ್ಯಾಕ್ ಪಡೆದಿದ್ದಾರೆ ಎಂಬ ಕೇಸ್ಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲಿನ ಎಲ್ಲಾ ಆರೋಪವನ್ನು ಸಿಬಿಐ ವಿಶೇಷ ಕೋರ್ಟ್ ಖುಲಾಸೆಗೊಳಿಸಿರುವುದು ನ್ಯಾಯಾಂಗದ ಘನತೆಯನ್ನು ಹೆಚ್ಚಿಸಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.
ಜಿಲ್ಲಾ ಬಿಜೆಪಿಯ ವತಿಯಿಂದ ಆಯೋಜಿಸಿದ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಆರೋಪದಿಂದ ಮುಕ್ತರಾಗಿರುವುದು ಭಾರತೀಯ ಜನತಾ ಪಾರ್ಟಿ ಮತ್ತು ಕಾರ್ಯಕರ್ತರಿಗೆ ಹರ್ಷತಂದಿದೆ. ಮುಂಬರುವ ಚುನಾವಣೆಯಲ್ಲಿ ಭಾ.ಜ.ಪ. ಪಕ್ಷ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತಷ್ಟು ಬಲಗೊಳ್ಳುವುದರೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಲು ಇದು ಸಹಕಾರಿಯಾಗಲಿದೆ.
ವ್ಯಕ್ತಿಯ ಏಳ್ಗೆಯನ್ನು ಸಹಿಸದೇ ರಾಜಕೀಯ ಪ್ರೇರಿತ ಸುಳ್ಳು ಆರೋಪಗಳ ಮಾಡುವವರಿಗೆ ಈ ಪ್ರಕರಣ ಪಾಠವಾಗಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿರುವುದು ಸತ್ಯಕ್ಕೆ ಸಂದ ಜಯವಾಗಿದೆ. ಯಡಿಯೂರಪ್ಪ ಅವರು ಪರಿಶುದ್ಧ ನಾಯಕರು ಎನ್ನುವುದು ಈ ತೀರ್ಪಿನಿಂದ ಮತ್ತೆ ಸಾಬೀತಾಗಿದೆ ಎಂದು ದ.ಕ.ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜಕೀಯ ಪಿತೂರಿಯಿಂದ ಯಡಿಯೂರಪ್ಪ ಅವರ ವಿರುದ್ಧ ಆರೋಪ ಹೊರಿಸುವ ಷಡ್ಯಂತ್ರ ನಡೆದಿತ್ತು. ಇದೀಗ ಧರ್ಮಯುದ್ಧದಲ್ಲಿ ಯಡಿಯೂರಪ್ಪ ಅವರಿಗೆ ಗೆಲುವಾಗಿದೆ. ರಾಜ್ಯದ ಜನತೆಯ ಪ್ರಾರ್ಥನೆ ಫಲಿಸಿದೆ. ಬಿಜೆಪಿ ಕಾರ್ಯಕರ್ತರಿಗೆ ನ್ಯಾಯಾಲಯದ ತೀರ್ಪು ಹೊಸ ಉತ್ಸಾಹ ನೀಡಿದ್ದು, ಯಡಿಯೂರಪ್ಪ ಅವರು ಮುಂದಿನ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ನಳಿನ್ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.