Home Mangalorean News Kannada News ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ, ಜೆಪಿ ಹೆಗ್ಡೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು

ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ, ಜೆಪಿ ಹೆಗ್ಡೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು

Spread the love

ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ, ಜೆಪಿ ಹೆಗ್ಡೆ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಬಿಜೆಪಿ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಎರಡು ವಿಚಾರವಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ದೂರು ನೀಡಿದೆ.

ಶಾಸಕರನ್ನ ಸೆಳೆಯೋದಕ್ಕೆ ಬಿಜೆಪಿ 50 ಕೋಟಿ ಆಫರ್ ಕೊಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಗೆ ಹಿಂದಿ, ಇಂಗ್ಲಿಷ್ ಬರಲ್ಲ ಅನ್ನೋ ಜಯಪ್ರಕಾಶ್ ಹೆಗ್ಡೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ಮೀನಾ ಅವರಿಗೆ ದೂರು ನೀಡಲಾಗಿದೆ.

ಬಿಜೆಪಿಯವರು ಒಬ್ಬ ಶಾಸಕನಿಗೆ ರೂ 50 ಕೋಟಿ ಆಫರ್ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದರು. ಚುನಾವಣಾ ಖರ್ಚು ನಾವೇ ನೋಡಿಕೊಳ್ತೀವಿ ಅಂತಿದ್ದಾರೆ. ಸೋಲಿನ ಭಯದಿಂದ ಕಾಂಗ್ರೆಸ್ ಖಾತೆ ಫ್ರೀಜ್ ಮಾಡಿದ್ದಾರೆ. ಕಾಂಗ್ರೆಸ್ನವರು 1 ರೂಪಾಯಿ ಬಳಸದಂತೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಇನ್ನು ಮತ್ತೊಂದೆಡೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ಹೇಳಿಕೆ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲಿಷ್ ಬರೋಲ್ಲ, ಹಾಗಾಗಿ ಅವರನ್ನು ಗೆಲ್ಲಿಸಬೇಡಿ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧವಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಇನ್ನು ದೂರು ನೀಡಿರುವ ಬಗ್ಗೆ ಮಾತನಾಡಿದ ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿರುವ ಹೇಳಿಕೆ ವಿರುದ್ಧ ದೂರು ಕೊಟ್ಟಿದ್ದೇವೆ. ಅನುಭವಿ ರಾಜಕಾರಣಿ ಹೆಗ್ಡೆಯವರು, ಕೋಟಾಗೆ ಮತವನ್ನೇ ಹಾಕಬೇಡಿ ಎಂದಿದ್ದಾರೆ. ಇದು ಪ್ರಚಾರಕ್ಕಿಂತ ಅಪ ಪ್ರಚಾರ, ಇದನ್ನು ಗಂಭೀರವಾಗಿ ತಗೆದುಕೊಳ್ಳಬೇಕು. ಭಾಷೆಗಿಂತ ವ್ಯಕ್ತಿಯ ಕೊಡುಗೆ ಬಹಳ ದೊಡ್ಡದಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಇನ್ನೊಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ದೂರು ಕೊಟ್ಟಿದ್ದೇವೆ. ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಕೋಟಿ ಕೋಟಿ ಆಫರ್ ಒಡ್ಡಿದ್ದಾರೆಂದು ಹೇಳಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಗೊತ್ತಿದೆ. ಇದೊಂದು ಹಸಿ ಸುಳ್ಳು ಆಗಿದೆ, ಹೀಗಾಗಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ. ಬರ ಪರಿಹಾರ ಕುರಿತು ಸರ್ಕಾರ ಸುಪ್ರೀಂ ಮೆಟ್ಟಿಲೇರಿದ್ದು ಒಂದು ಚುನಾವಣಾ ಗಿಮಿಕ್. ಅವರಿಗೆ ಚುನಾವಣೆ ಎದುರಿಸೋಕೆ ಆಗ್ತಿಲ್ಲ. ಮೋದಿ ಪರ, ಬಿಜೆಪಿ ಪರ ವಾತಾವರಣ ಇರೋದಕ್ಕೆ ಅದನ್ನು ಸಹಿಸದೇ ಈ ರೀತಿ ಮಾಡ್ತಿದ್ದಾರೆ ಎಂದರು.


Spread the love

Exit mobile version