ಬಿಜೆಪಿ ನಾಯಕನ ಪತ್ನಿ ರಕ್ಷಾ ಸಾವಿನ ಪ್ರಕರಣದ ತನಿಖೆ ಸಿಓಡಿಗೆ ಹಸ್ತಾಂತರ – ರಘುಪತಿ ಭಟ್
ಉಡುಪಿ: ಖಾಸಗಿ ಆಸ್ಪತ್ರೆ ವೈದ್ಯಕೀಯ ನಿರ್ಲಕ್ಷೃದಿಂದಾಗಿ ಮೃತಪಟ್ಟ ಆರೋಪವಿರುವ ಇಂದಿರಾನಗರ, ಕುಕ್ಕಿಕಟ್ಟೆ ನಿವಾಸಿ ರಕ್ಷಾ (26) ಅವರ ಸಾವಿನ ಪ್ರಕರಣವನ್ನು ಸಿಒಡಿ ತನಿಖೆ ನಡೆಸಲು ಗೃಹಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಶಾಸಕ ಕೆ.ರಘುಪತಿ ಭಟ್, ವೈದ್ಯಕೀಯ ನಿರ್ಲಕ್ಷೃದಿಂದಾಗಿ ರಕ್ಷಾ ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮನವಿಯಂತೆ ಗೃಹ ಸಚಿವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಸೋಮವಾರ ಸಾಯಂಕಾಲದೊಳಗೆ ಈ ಬಗ್ಗೆ ಆದೇಶ ಜಾರಿಯಾಗಲಿದೆ ಎಂದು ತಿಳಿಸಿದರು. ಅಲ್ಲದೇ ವೈದ್ಯಕೀಯ ನಿರ್ಲ್ಯಕ್ಷದಂತ ಪ್ರಕರಣಗಳು ಸಂಭವಿಸಿದಾಗ ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರದ ಮಟ್ಟದಲ್ಲಿ ನುರಿತ ವೈದ್ಯರ ತಂಡ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕಾಗುತ್ತದೆ.
ಅದರಂತೆ ಜಿಲ್ಲಾಸ್ಪತ್ರೆ ವೈದ್ಯ ಡಾ.ಚಂದ್ರಶೇಖರ ಅಡಿಗ ಸೇರಿದಂತೆ ಡಾ ಅಜಿತ್ ಶೆಟ್ಟಿ, ಡಾ ಉದಯ ಶಂಕರ್ ಡಾ ರಾಮರಾವ್ ಡಾ ಉಮೇಶ್ ಪ್ರಭು ಡಾ ಸ್ಮಿತಾ ಶೆಣೈ ಡಾ ನಾಗರತ್ನ ಅವರುಗಳ 7 ನುರಿತ ವೈದ್ಯರ ಸಮಿತಿ ರಚಿಸಿ ಈ ಬಗ್ಗೆ ತನಿಖೆ ನಡೆಸಲಾಗುವುದು. 5 ದಿನದ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮೃತದೇಹ ಸಾಗಿಸುವಾಗ ಅದು ಕೋವಿಡ್-19 ಪಾಸಿಟಿವ್ ಇರಲಿ ಅಥವಾ ನೆಗೆಟಿವ್ ಇರಲಿ ಮೃತದೇಹವನ್ನು ಸಂಬಂಧಿಸಿದ ಕುಟುಂಬದವರಿಗೆ ತೋರಿಸಿ ಕಳುಹಿಸಬೇಕು. ಕೋವಿಡ್ – 19 ಪಾಸಿಟಿವ್ ಮೃತದೇಹ ಪಡೆಯುವಾಗ ಒಬ್ಬ ಆರೋಗ್ಯ ಅಧಿಕಾರಿ ಸ್ಥಳದಲ್ಲಿ ಇದ್ದು ಪರಿಶೀಲಿಸಿ ಪಡೆಯಬೇಕು.ಸಂಜೆ 6ರಿಂದ ಬೆಳಗ್ಗೆ 9 ಗಂಟೆವರೆಗೆ ಯಾವುದೇ ಶವವನ್ನು ಬಿಟ್ಟು ಕೊಡಬಾರದು.ಶವ ಬಿಟ್ಟುಕೊಡುವ ಜವಾಬ್ದಾರಿ ವೈದ್ಯರಿಗೆ ಇರಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಯಾವುದೇ ಅಜಾಗರೂಕತೆಗೆ ಅವಕಾಶ ನೀಡದಂತೆ ಎಚ್ಚರವಹಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ ಎಂದರು.