Home Mangalorean News Kannada News ಬಿಜೆಪಿ ಪೆಂಡಾಲ್ ತೆರವು ಮಾಡಿದ ನಗರಸಭೆ; ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು

ಬಿಜೆಪಿ ಪೆಂಡಾಲ್ ತೆರವು ಮಾಡಿದ ನಗರಸಭೆ; ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು

Spread the love

ಬಿಜೆಪಿ ಪೆಂಡಾಲ್ ತೆರವು ಮಾಡಿದ ನಗರಸಭೆ; ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು

ಉಡುಪಿ: ಮರಳುಗಾರಿಕೆ ಆರಂಭಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಹಾಕಿದ್ದ ಪೆಂಡಾಲನ್ನು  ನಗರಸಭೆ ತೆರವುಗೊಳಿಸಿದ್ದರ ಪರಿಣಾಮ ಜಿಲ್ಲಾಧಿಕಾರಿ ಕಚೇರಿಯ ಎದುರು ಬಿಜೆಪಿ ಕಾರ್ಯಕರ್ತರು ಭಾರಿ ಪ್ರತಿಭಟನೆ ವ್ಯಕ್ತವಾಯಿತು. ಬಿಜೆಪಿಗರ ಮನವಿ ಸ್ವೀಕರಿಸಲು ಬಂದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಬಿಜೆಪಿಗರ ಪ್ರತಿಭಟನೆ ಎದುರಿಸುವ ಪರಿಸ್ಥಿತಿ ಉಂಟಾಯಿತು. ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸರ್ವೀಸ್ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿ ಬರಲು ಡಿಸಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿದ್ದರು. ಮನವಿ ಸಲ್ಲಿಸಿ ಬಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಅವರು ತೀರ್ಮಾನಿಸಿದ್ದರು. ಅದಕ್ಕಾಗಿ ಸರ್ವೀಸ್ ಬಸ್ ನಿಲ್ದಾಣದ ಎದುರು ತಾತ್ಕಾಲಿಕ ಪೆಂಡಾಲನ್ನು  ಹಾಕಿದ್ದರು. ಆದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ನಗರಸಭೆ ಸಿಬ್ಬಂದಿ ತೆರವು ಮಾಡಿದರು.

ಪಾದಯಾತ್ರೆ ಮೂಲಕ ಡಿಸಿ ಕಚೇರಿ ತಲುಪಿದ್ದ ಪ್ರತಿಭಟನಾಕಾರರಿಗೆ ಈ ವಿಷಯ ಗೊತ್ತಾದ ನಂತರ ಅಲ್ಲಿಯೇ ಧರಣಿ ಕುಳಿತರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ದೇಶ ಭಕ್ತಿ ಗೀತೆ ಹಾಡಿದರು.

ಇದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುವ ಎಲ್ಲ 164 ಮಂದಿಗೆ ಅನುಮತಿ ನೀಡುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಎಸ್ಪಿ ಡಾ. ಸಂಜೀವ ಎಂ. ಪಾಟೀಲ್ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಕೆ. ರಘುಪತಿ ಭಟ್ ಹಾಗೂ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್ ಅವರು ಬಿಜೆಪಿಗೆ ಇಂದು ತಾತ್ಕಾಲಿಕ ಜಯ ದೊರೆತಿದೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಅವರು ನೀಡಿದ ಭರವಸೆಯ ಮೇರೆಗೆ ಇಂದಿನ ಪ್ರತಿಭಟನೆಯನ್ನು ಕೈಬಿಟ್ಟಿದ್ದೇವೆ. ಆದರೆ ಪರವಾನಿಗೆ ಪಡೆದು ಹಾಕಿದ ಪೆಂಡಾಲನ್ನು ತೆರವು ಮಾಡಿದ ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಅವರು ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ಗುರುವಾರ ಸಂಜೆ ನಗರಸಭೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ‘ಒಟ್ಟು 170 ಮಂದಿ ಸಾಂಪ್ರದಾಯಿಕ ಮರಳುಗಾರರ ಪಟ್ಟಿ ಇದೆ. ಅವರಲ್ಲಿ 134 ಮಂದಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ. ಆದರೆ, ಮರಳು ದಕ್ಕೆ ಇರುವ ಗ್ರಾಮದಲ್ಲಿ ವಾಸ ಇಲ್ಲದ, ಕ್ರಿಮಿನಲ್ ಪ್ರಕರಣ ಇರುವ ಹಾಗೂ ಜನಪ್ರತಿನಿಧಿಗಳಿಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿತ್ತು. ಬಿಜೆಪಿ ಮುಖಂಡರ ಬೇಡಿಕೆ ಬಗ್ಗೆ ಸೆಪ್ಟೆಂಬರ್ 2ರಂದು ನಡೆಯುವ ಮರಳು ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

 


Spread the love

Exit mobile version